ಪೂರ್ಣಚಂದ್ರ ತೇಜಸ್ವಿ ಅವರ ಕಿರುಕಥೆ ಆಧರಿಸಿದ ಚಿತ್ರ
ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ ಅಪರೂಪದ ಚಿತ್ರ
ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್‌ಡೆವಿಲ್ ಮುಸ್ತಫಾ’ ಕಿರುಕಥೆಯನ್ನು ಆಧರಿಸಿ ಅದೇ ಶಿರ್ಷಿಕೆ ಅಡಿಯಲ್ಲಿ ಸಿದ್ಧಗೊಂಡಿರುವ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಅವರ ಅಭಿಮಾನಿಗಳೇ ಹಣ ಹೂಡಿ ನಿರ್ಮಿಸಿರುವ ಈ ಚಿತ್ರವನ್ನು ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ ತೆರೆಗೆ ಅಳವಡಿಸಿದ್ದಾರೆ ಯುವ ನಿರ್ದೇಶಕ ಶಶಾಂಕ್ ಸೋಗಾಲ್. ಈ ಹಿಂದೆ ʼಫಟಿಂಗʼ ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್, ʼಡೇರ್‌ಡೆವಿಲ್ ಮುಸ್ತಫಾʼ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ʼಡಾ. ಬ್ರೋʼ ಖ್ಯಾತಿಯ ಯುಟ್ಯೂಬರ್ ಗಗನ್ ಈ ಚಿತ್ರದ ನಿರೂಪಣೆಗೆ ಧ್ವನಿಯಾಗುವ ಮೂಲಕ ತೇಜಸ್ವಿ ಪ್ರಪಂಚವನ್ನು ಕನ್ನಡದ ಸಿನಿ ರಸಿಕರ ಪರಿಚಯ ಮಾಡಿಸುವ ವಿಶೇಷ ಪ್ರಯತ್ನ ಮಾಡಿದ್ದಾರೆ. ಚಿತ್ರತಂಡದ ಭಿನ್ನ ಪ್ರಚಾರತಂತ್ರ ಭಾರೀ ಮೆಚ್ಚುಗೆ ಗಳಿಸಿದೆ.
ಡೇರ್‌ಡೆವಿಲ್ ಮುಸ್ತಫಾ ಮತ್ತು ರಾಮಾನುಜ ಅಯ್ಯಂಗಾರಿ ಪಟಾಲಂನ ನಡುವಿನ ಇರಿಸುಮುರಿಸಿನ ಕಥೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಅಬಚೂರು ಶಾಲೆಯ ಮುಖ್ಯ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ಸುಂದರ್ ವೀಣಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆ ಶಿಶಿರ್ ಬೈಕಾಡಿ ಮುಸ್ತಫಾನ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದು, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿರೀಕ್ಷೆ ಹೆಚ್ಚಿಸಿದ ʼಆದಿಪುರುಷ್ʼ ಟ್ರೈಲರ್
ನವನೀತ್ ಶ್ಯಾಮ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ʼನಿನ್ನಂಥೋರ್ ಯಾರೂ ಇಲ್ವಲ್ಲೋʼ ಎಂಬ ಅನಿಮೇಷನ್ ಹಾಡು ಈಗಾಗಲೇ ಭಾರೀ ಜನಪ್ರಿಯತೆ ಗಳಿಸಿದೆ. ಅಣ್ಣಾವ್ರ ಅನಿಮೇಷನ್ ಹೊಂದಿರುವ ಈ ಹಾಡಿಗೆ ವಾಸುಕಿ ವೈಭವ್ ಮತ್ತು ಸಿದ್ಧಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ.
ತೇಜಸ್ವಿ ಅವರ ಅಭಿಮಾನಿಗಳಿಂದಲೇ ತಯಾರಾಗಿರುವ ಚಿತ್ರಕ್ಕೆ ನಟ, ಸಾಹಿತ್ಯಾಸಕ್ತ ಡಾಲಿ ಧನಂಜಯ್ ಕೂಡ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ಒಡೆತನದ ಡಾಲಿ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಧನಂಜಯ್ ಹೊತ್ತುಕೊಂಡಿದ್ದಾರೆ.