ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ದೋಷಾರೋಪ ಪಟ್ಟಿಯಲ್ಲಿ ನಟ ದರ್ಶನ್ ಎ2 ಆರೋಪಿಯೆಂದೇ ಉಲ್ಲೇಖಿಸಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮೂರು ತಿಂಗಳುಗಳಿಂದ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ ಎಸಿಪಿ ಚಂದನ್ ನೇತೃತ್ವದ ತಂಡವು ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ವಿವರಿಸಿದೆ ಎಂದು ತಿಳಿದುಬಂದಿದೆ.
10 ಕಡತ 7 ಸಂಪುಟಗಳನ್ನು ಒಳಗೊಂಡಿರುವ ಚಾರ್ಜ್‌ಶೀಟ್‌ನಲ್ಲಿ 231 ಜನರಿಂದ ಸಂಗ್ರಹಿಸಲಾದ ಸಾಕ್ಷಗಳು, ಸಿಸಿ ಟಿವಿ ಫೂಟೇಜ್, ಎಫ್‌ಎಸ್‌ಎಲ್ ರಿಪೋರ್ಟ್ ಹಾಗೂ 27 ಜನರಿಂದ ಪಡೆದ 164 ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ತನ್ನ ಸ್ನೇಹಿತೆ, ನಟಿ ಪವಿತ್ರಾಗೌಡಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಾರೆಂಬ ಕಾರಣಕ್ಕಾಗಿ ರೇಣುಕಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಅಪಹರಿಸಿ, ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಗೊಳಗಾಗಿದ್ದ ರೇಣುಕಸ್ವಾಮಿ ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಮೋರಿಗೆ ಬಿಸಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ನಟಿ ಪವಿತ್ರಾಗೌಡ ಎ1 ಮತ್ತು ನಟ ದರ್ಶನ್ ಎ2 ಆರೋಪಿಗಳಾಗಿದ್ದಾರೆ.