ಬೆಂಗಳೂರಿನ ಆರ್ ಆರ್ ನಗರದಲ್ಲಿ ಚಿತ್ರನಟ ದರ್ಶನ್ ಮತ್ತು ತಂಡದಿಂದ ಇತ್ತೀಚೆಗೆ ಕೊಲೆಗೀಡಾಗಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷಾ ವರದಿಯು ಪೊಲೀಸರ ಕೈ ಸೇರಿದ್ದು, ಆಘಾತ, ರಕ್ತಸ್ರಾವದಿಂದಾಗಿ ಮರಣ ಹೊಂದಿರುವುದಾಗಿ ವರದಿಯಲ್ಲಿ ಉಲ್ಲೇಖಗೊಂಡಿರುವುದಾಗಿ ತಿಳಿದುಬಂದಿದೆ.
ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲ್ಲಲಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬೌರಿಂಗ್ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೀಡಿದ್ದಾರೆ.
ವರದಿಯಲ್ಲಿ ಮೃತದೇಹದ 15 ಕಡೆಗಳಲ್ಲಿ ಗಾಯಗಳಿದ್ದವು ಎಂದು ವೈದ್ಯರು ದೃಢಪಡಿಸಿದ್ದಾರೆ. ರೇಣುಕಾ ಸ್ವಾಮಿ ದೇಹದ ಯಾವ ಭಾಗದಲ್ಲಿ ರಕ್ತ ಬಂದಿತ್ತು? ಎಲ್ಲೆಲ್ಲಿ ಗಾಯಗಳಾಗಿತ್ತು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಜೊತೆಗೆ, ಮರ್ಮಾಂಗದ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಗಿದ್ದು, ಆ ಭಾಗದಲ್ಲಿ ರಕ್ತಸ್ರಾವವಾಗಿದೆ. ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಹೊಟ್ಟೆ ಭಾಗದಲ್ಲಿಯೂ ರಕ್ತ ಸೋರಿಕೆಯಾಗಿದೆ. ತಲೆಗೂ ಬಲವಾದ ಪೆಟ್ಟು ಬಿದ್ದಿದೆ. ಆದರೆ, ರಕ್ತ ಸೋರಿಕೆಯಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆಯಲ್ಲಿ ದರ್ಶನ್ ಕಣಕ್ಕಿಳಿಸಲು ಡಿಕೆ ಸಹೋದರರು ಯೋಜಿಸಿದ್ದರು: ಸಿಪಿ ಯೋಗೇಶ್ವರ್
ಕೈ ಮತ್ತು ಕಾಲುಗಳಲ್ಲಿ, ಬೆನ್ನು ಹಾಗೂ ಎದೆ ಭಾಗದಲ್ಲೂ ರಕ್ತ ಬಂದಿದೆ. ತೀವ್ರ ಹಲ್ಲೆಯಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಮರದ ಪೀಸ್, ಬೆಲ್ಟ್ ಬಳಸಿ ಹಲ್ಲೆ ಮಾಡಲಾಗಿದ್ದು, ದೇಹದಲ್ಲಿ 15 ಕಡೆ ಗಾಯಗಳಾಗಿವೆ. ಮೃತದೇಹದ ಮುಖ ಮತ್ತು ದವಡೆ ಭಾಗವನ್ನು ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
