ನಾಗಭರಣ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಶಾದಾಯಕ ಎನಿಸುವ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದರು. ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಕಟ್ಟಡದ ಎದುರು ಇದ್ದ ಬಾದಾಮಿ ಹೌಸಿನಲ್ಲಿ ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಟುವಟಿಕೆಗಳನ್ನು ನಡೆಸಲು ಆರಂಭಿಸಿದರು. “ಬೆಳ್ಳಿಹೆಜ್ಜೆ” ಕಾರ್ಯಕ್ರಮದ ಮೂಲಕ ತಾರೆಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಿನೆಮಾ ಸಾಹಿತಿಗಳನ್ನು ಕರೆದು ಅವರು ತಮ್ಮ ಅನುಭವಗಳನ್ನು ಜನ ಸಾಮಾನ್ಯರೊಂದಿಗೆ ನೇರವಾಗಿ ಹಂಚಿಕೊಳ್ಳುವ ಕಾರ್ಯಕ್ರಮ ಶುರು ಮಾಡಿದರು.
ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ರಂಗಭೂಮಿ ಮತ್ತು ಸಿನೆಮಾ ವಿದ್ಯಾರ್ಥಿ. ರಂಗಭೂಮಿಯಲ್ಲಿಯೂ, ಸಿನೆಮಾಗಳಲ್ಲಿಯೂ ಉತ್ತಮ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. ಇವರು ಅಧ್ಯಕ್ಷರಾದಾಗ ಸಹಜವಾಗಿ ನಿರೀಕ್ಷೆಗಳಿದ್ದವು. “ನಾಗಾಭರಣ ಅವರು ಅಕಾಡೆಮಿ ಅಧ್ಯಕ್ಷರಾದ ನಂತರ ಪ್ರಾದೇಶಿಕವಾಗಿಯೂ ಸಣ್ಣಸಣ್ಣ ಮಟ್ಟದಲ್ಲಿ ಸಿನೆಮೋತ್ಸವಗಳನ್ನು ಆಯೋಜಿಸಿದರು. ನಾನಾಗ ಮಂಗಳೂರಿನಲ್ಲಿದೆ. ನಮ್ಮ ಹವ್ಯಾಸಿ ಚಿತ್ರ ಸಮಾಜಕ್ಕೆ ಬೆಳ್ಳಿ ಮಂಡಲ ಕಾರ್ಯಕ್ರಮದಡಿ ಸಿನೆಮೋತ್ಸವ ಮಾಡಲು 50 ಸಾವಿರ ಅನುದಾನ ಬಿಡುಗಡೆ ಮಾಡಿದ್ದರು. ನಾವು ಆಯೋಜಿಸಿದ್ದ ಸಿನೆಮೋತ್ಸವ ಯಶಸ್ವಿಯೂ ಆಗಿತ್ತು” ಎಂದು ಸಿನೆಮಾ ತಂತ್ರಜ್ಞ ಮತ್ತು ಮನುಜಮತ ಸಿನಿಯಾನ ಬಳಗದ ಮೂಲಕ ರಾಜ್ಯದ್ಯಂತ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿಯೂ ಸರ್ಕಾರದಿಂದ ಹಣಕಾಸು ನೆರವು ಪಡೆಯದೇ ಸಿನೆಮೋತ್ಸವಗಳನ್ನು ಸಂಘಟಿಸುತ್ತಿರುವ ಐವಾನ್ ಡಿಸಿಲ್ವ ನೆನಪು ಮಾಡಿಕೊಳ್ಳುತ್ತಾರೆ. ಈಗ ಇವರನ್ನು ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿದೆ.
ನಾಗಭರಣ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಶಾದಾಯಕ ಎನಿಸುವ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದರು. ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಕಟ್ಟಡದ ಎದುರು ಇದ್ದ ಬಾದಾಮಿ ಹೌಸಿನಲ್ಲಿ ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಟುವಟಿಕೆಗಳನ್ನು ನಡೆಸಲು ಆರಂಭಿಸಿದರು. ಬೆಳ್ಳಿಹೆಜ್ಜೆ ಕಾರ್ಯಕ್ರಮದ ಮೂಲಕ ತಾರೆಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಿನೆಮಾ ಸಾಹಿತಿಗಳನ್ನು ಕರೆದು ಅವರು ತಮ್ಮ ಅನುಭವಗಳನ್ನು ಜನ ಸಾಮಾನ್ಯರೊಂದಿಗೆ ನೇರವಾಗಿ ಹಂಚಿಕೊಳ್ಳುವ ಕಾರ್ಯಕ್ರಮ ಶುರು ಮಾಡಿದರು. ಇವರು ಅಧ್ಯಕ್ಷರಾಗಿದ್ದ ಮಾರ್ಚ್ 13, 2012ರ ತನಕ ಅಕಾಡೆಮಿ ಚಟುವಟಿಕೆಗಳಿಂದ ಕೂಡಿತ್ತು.
ರಾಜಕೀಯ ನೇಮಕಾತಿ ಬೇಡ
“ರಾಜ್ಯ ಸರ್ಕಾರಗಳೆಲ್ಲವೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ನೇಮಕವನ್ನು ಪೊಲಿಟಿಕಲ್ ಅಪಾಯಿಟ್ಮೆಂಟ್ ಎನ್ನುವಂತೆ ಮಾಡುತ್ತಿವೆ. ಯಾವಾಗ ಇಂಥ ಸ್ಥಾನಗಳು ರಾಜಕೀಯ ನೇಮಕಾತಿ ಆಗುತ್ತವೋ ಆಗ ದೂರದೃಷ್ಟಿತ್ವದ ಕೆಲಸಗಳು ಆಗುವುದಿಲ್ಲ. ಕ್ರಿಯಾತ್ಮಕ ಕೆಲಸಗಳಲ್ಲಿ ನಿರಂತರತೆ ಇರಬೇಕು. ನಾನಿದ್ದಾಗ ಅಕಾಡೆಮಿಯಲ್ಲಿ ಸುಸಜ್ಜಿತ ಗ್ರಂಥಾಲಯ ಮಾಡಬೇಕೆಂದು ನಾಲ್ಕು ಕೋಟಿ ರೂಪಾಯಿ ತಂದು ಇಟ್ಟಿದ್ದೆವು. ನಂತರ ಅಧ್ಯಕ್ಷರುಗಳಾಗಿ ಬಂದವರು ಈ ಯೋಜನೆಯ ಮುಂದಿನ ಹಂತಗಳನ್ನು ಮುಂದುವರಿಸಿಕೊಂಡು ಹೋಗಬೇಕಿತ್ತು. ಅದೆಲ್ಲಿ ಆಗಿದೆ? ಆ ಕೆಲಸ ಆಗಲೇ ಇಲ್ಲ” ಎಂದು ಟಿ.ಎಸ್. ನಾಗಾಭರಣ ವಿಷಾದಿಸುತ್ತಾರೆ.
ಆಶಯ ಮತ್ತು ಸಂಕಲ್ಪ
“ಅಕಾಡೆಮಿಯಲ್ಲಿ ಇಂತಿಂಥ ಕೆಲಸಗಳು ಆಗಬೇಕು ಎಂಬ ದೃಷ್ಟಿಯಲ್ಲಿ “ಆಶಯ ಮತ್ತು ಸಂಕಲ್ಪ” ಪುಸ್ತಕವನ್ನು ಬರೆದಿದ್ದೆ. ಅದು ಅಕಾಡೆಮಿ ಕಚೇರಿಯಲ್ಲಿದೆ. ಅದರಲ್ಲಿ ಬೆಳ್ಳಿಹೆಜ್ಜೆ, ಬೆಳ್ಳಿಬದುಕು, ಬೆಳ್ಳಿಬೆಳಕು, ಬೆಳ್ಳಿಸಾಕ್ಷಿ, ಬೆಳ್ಳಿ ಮಂಡಲ ಕಾರ್ಯಕ್ರಮಗಳ ವಿವರಣೆ ಇದೆ. ಬೆಳ್ಳಿ ಮಂಡಲ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದರೆ ಇಂದು ರಾಜ್ಯದಲ್ಲಿ ಗಮನಾರ್ಹವಾಗಿ ಅಂತರರಾಷ್ಟ್ರೀಯ ಮಟ್ಟದ ಸಿನೆಮಾಗಳನ್ನು ವಿಶ್ಲೇಷಿಸುವಂಥ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿತ್ತು! “ ಶಿಕ್ಷಣದಲ್ಲಿ ಸಿನೆಮಾ ಮತ್ತು ಸಿನೆಮಾದಲ್ಲಿ ಶಿಕ್ಷಣ” ಎಂಬುದು ಅಕಾಡೆಮಿಗೆ ನಾನಿಟ್ಟ ಘೋಷವಾಕ್ಯವಾಗಿತ್ತು. ನಂತರ ಬಂದವರೆಲ್ಲ ಅದನ್ನು ತೆಗೆದು ಹಾಕಿದರು. ಆ ನಂತರ ಫಿಲ್ಮ್ ಫೆಸ್ಟಿವಲ್ ಮಾಡುವುದಕ್ಕಷ್ಟೇ ಅಕಾಡೆಮಿ ಸೀಮಿತವಾಗಿದೆ. ಅದು ಬೇರೆಯವರಿಗೆ ಜಾಗ ಕೊಟ್ಟು ಫೆಸ್ಟಿವಲ್ ಮಾಡಿ ಕೈ ತೊಳೆದುಕೊಳ್ಳುತ್ತಾರೆ” ಎಂದು ನಾಗಭರಣ ವಿವರಿಸುತ್ತಾರೆ.
ಡೈರೆಕ್ಟೊರೇಟ್ ಆಫ್ ಫಿಲ್ಮ್ ಫೆಸ್ಟಿವಲ್
“ಬೆಂಗಳೂರು ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಯಾರು ಇರುತ್ತಾರೆ? ಸುಮ್ನೆ ಯೋಚನೆ ಮಾಡಿ; ಅಲ್ಲಿ ಬರುವವರೆಲ್ಲ ಆಫೀಸರ್ಸ್, ಬ್ಯೂರೋಕ್ರಾಟ್, ಪೊಲಿಟಿಶಿಯನ್ಸ್ ಇರುತ್ತಾರೆ. ಉಳಿದಂತೆ ಸಿನೆಮಾದವರು ನಾಮ್ ಕಾ ವಾಸ್ತೆ ಎನ್ನುವಂತೆ ಅಲ್ಲಲ್ಲಿ ಒಬ್ಬಿಬ್ಬರು ಇರುತ್ತಾರೆ. ನಾನಿದ್ದಾಗ “ಡೈರೆಕ್ಟೊರೇಟ್ ಆಫ್ ಫಿಲ್ಮ್ ಫೆಸ್ಟಿವಲ್” (ಸಿನೆಮೋತ್ಸವ ಆಯೋಜಿಸುವ ನಿರ್ದೇಶನಾಲಯ) ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಈಗ ಅಕಾಡೆಮಿ ಪೂರ್ಣ ಸ್ವಾಯತ್ತವಾಗಿ ಫಿಲ್ಮ್ ಫೆಸ್ಟಿವಲ್ ನಡೆಸುತ್ತಿಲ್ಲ. ಅದನ್ನು ವಾರ್ತಾ ಇಲಾಖೆ ಮಾಡುತ್ತಿದೆ. ಪ್ರತ್ಯೇಕ ನಿರ್ದೇಶನಾಲಯವಾದರೆ ಇಡೀ ವರ್ಷ ಈ ಕೆಲಸದ ಪೂರ್ವಸಿದ್ದತೆಗಳನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯ. ಇಲ್ಲದಿದ್ದರೆ ಕೊನೆಗಳಿಗೆಯಲ್ಲಿ ದೆಹಲಿಯಲ್ಲೋ, ಕೇರಳದಲ್ಲೋ ಬಂದಿರುವ ಸಿನೆಮಾಗಳನ್ನೇ ತಂದು ತೋರಿಸ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಲಾತ್ಮಕ ನಿರ್ದೇಶಕ ಸ್ಥಾನಕ್ಕೆ ಬೇರೆಯವರು ಏಕಿಲ್ಲ?
ಫಿಲ್ಮ್ ಫೆಸ್ಟಿವಲ್ ಆರ್ಟ್ ಡೈರೆಕ್ಟರ್ ಬದಲಾಗುತ್ತಿರಬೇಕು. ಆದರೆ ಪದೇಪದೇ ವಿದ್ಯಾಶಂಕರ್ ಅವರನ್ನೇ ಆರ್ಟ್ ಡೈರೆಕ್ಟರ್ ಅಂತ ಏಕೆ ಮಾಡುತ್ತಿದ್ದಾರೆ? ಬೇರೆ ಪರ್ಯಾಯವಿಲ್ಲವೇ? ಇವರುಗಳು ಬೇರೆ ಬೇರೆಯವರನ್ನು ಕಲಾತ್ಮಕ ನಿರ್ದೇಶಕರ ಸ್ಥಾನಕ್ಕೆ ಬೆಳೆಸಬೇಕಲ್ಲವೇ? ಇಂಥ ಸ್ಥಾನಗಳಿಗೆ ಇನ್ನೊಂದು ಹತ್ತು ಮಂದಿ ತಯಾರಾಗಬೇಕು! ಕೇರಳದಲ್ಲಿ ಕಲಾತ್ಮಕ ನಿರ್ದೇಶಕರುಗಳನ್ನು ಬದಲಿಸುತ್ತಲೇ ಇರುತ್ತಾರೆ. ಒಂದು ವರ್ಷ ಕಲಾತ್ಮಕ ನಿರ್ದೇಶಕರಾಗಿದ್ದವರೇ ಮುಂದಿನ ವರ್ಷ ಮತ್ತೆ ಆಗಲು ಬಿಡುವುದಿಲ್ಲ” ಎಂದು ಹೇಳುತ್ತಾರೆ.
“ನಾನಿದ್ದ ಅವಧಿಯಲ್ಲಿ ವಿದ್ಯಾಶಂಕರ್ ಅವರನ್ನು ಕಲಾತ್ಮಕ ನಿರ್ದೇಶಕರ ಸ್ಥಾನಕ್ಕೆ ಸಿನೆಮಾ ತಜ್ಞ ನರಹರಿರಾಯರ ಮೂಲಕ ಟ್ರೈನ್ ಮಾಡಿಸಿದೆವು. ಬಳಿಕ ಪ್ರಾಯೋಗಿವಾಗಿ ಒಂದು ಫೆಸ್ಟಿವಲ್‌ಗೆ ವಿದ್ಯಾಶಂಕರ್ ಅವರನ್ನು ಕಲಾತ್ಮಕ ನಿರ್ದೇಶಕರನ್ನಾಗಿ ಮಾಡಿದೆವು. ನಂತರ ನೋಡಿದರೆ ಅವರೇ ಕಂಟಿನ್ಯೂ ಆಗಿಬಿಟ್ಟರು. ಬಹುಶಃ ಅವರು ಈಗ ಐದನೇ ಫೆಸ್ಟಿವಲ್ ಮಾಡುತ್ತಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ಕಲಾತ್ಮಕ ನಿರ್ದೇಶಕರ ಸ್ಥಾನಕ್ಕೆ ಬೇರೆ ಯಾರೂ ಸಮರ್ಥರಿಲ್ಲವೇ” ಎಂದು ನಾಗಾಭರಣ ಪ್ರಶ್ನಿಸಿದರು.
ಇದನ್ನೂ ಓದಿ ಫಿಲ್ಮ್ ಅಕಾಡೆಮಿ ಅವಾಂತರ (ಭಾಗ 2) | ʼಚಿತ್ರರಂಗ ಅಭಿವೃದ್ಧಿಗೆ ಸಮಗ್ರ ನೀತಿʼ ರಚನೆಯಾಯ್ತು; ಆದರೆ ಅಕಾಡೆಮಿ ಕಥೆ ಏನಾಯ್ತು?
ಮುಂದಿನ ಸಂಚಿಕೆಯಲ್ಲಿ: ಫಿಲ್ಮ್ ಅಕಾಡೆಮಿಗೆ ಬಿಡಿಎ ಕೊಟ್ಟ ಕೋಟ್ಯಂತರ ರೂಪಾಯಿ ಏನಾಯಿತು?

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ