7 ವರ್ಷಗಳ ಬಳಿಕ ನಟನೆಯತ್ತ ಒಲವು ತೋರಿದ ಯೋಗರಾಜ್ ಭಟ್
ʼಕರಟಕ ದಮನಕʼ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಹಿರಿಯ ನಿರ್ದೇಶಕ
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಹಲವು ವರ್ಷಗಳ ನಂತರ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾವೊಂದರಲ್ಲಿ ಭಟ್ರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಜೊತೆಯಾಗಿ ನಟಿಸುತ್ತಿರುವ ʼಕರಟಕ ದಮನಕʼ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಚಾಲ್ತಿಯಲ್ಲಿದೆ. ಇದೇ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಭಟ್ರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

2013ರಲ್ಲಿ ಗಡ್ಡಾ ವಿಜಿ ನಿರ್ದೇಶನದಲ್ಲಿ ಮೂಡಿಬಂದಿದ್ದ ʼದ್ಯಾವ್ರೆʼ ಮತ್ತು 2016ರಲ್ಲಿ ತೆರೆಗೆ ಬಂದಿದ್ದ ʼಪರಪಂಚʼ ಚಿತ್ರದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಇದೇ ಮೊದಲ ಬಾರಿಗೆ ತಾವು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಶಿವಣ್ಣ ಮತ್ತು ಪ್ರಭುದೇವ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ
ಭಿನ್ನ ಕಥಾಹಂದರವನ್ನು ಹೊಂದಿರುವ ʼಕರಟಕ ದಮನಕʼ ಚಿತ್ರ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದೆ. ಖ್ಯಾತ ನಟಿಯರಾದ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಬಂಡವಾಳ ಹೂಡಿರುವ ರಾಕ್ಲೈನ್ ವೆಂಕಟೇಶ್ ಕೂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.