ಚಿತ್ರರಂಗದಲ್ಲಿ ಮಹಿಳಾ ಮತ್ತು ಪುರುಷ ಕಲಾವದರಿಗೆ ನೀಡಲಾಗುವ ಸಂಭಾವನೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ತಾರತಮ್ಯ ನಿಲ್ಲಬೇಕು ಎಂದು ಕನ್ನಡ ಸಿನಿಮಾ ನಟಿ ರಮ್ಯಾ ಸ್ಪಂದನ ಹೇಳಿದರು.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುವಾರ ನಡೆದ ‘ಮಹಿಳೆ ಹಾಗೂ ಸಿನಿಮಾ’ ಎಂಬ ಗೋಷ್ಠಿಯಲ್ಲಿ ನಟಿ ರಮ್ಯಾ ಮಾತನಾಡಿದರು. ನಿರ್ದೇಶಕಿಯರಾದ ಪ್ರೀತಾ ಜಯರಾಮ್, ನಂದಿನಿ ರೆಡ್ಡಿ ಕೂಡಾ ಕೂಡಾ ತಮ್ಮ ವಿಚಾರಗಳನ್ನು ಮಂಡಿಸಿದರು.
ಇದನ್ನು ಓದಿದ್ದೀರಾ? ರಮ್ಯಾ ಮಾನಹಾನಿ | ಸುವರ್ಣ ನ್ಯೂಸ್ , ವಿಶ್ವೇಶ್ವರ್ ಭಟ್ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
“ಒಂದು ಸಿನಿಮಾ ಯಶಸ್ಸಾದರೆ ಆ ಸಿನಿಮಾದ ನಾಯಕರು ತಮ್ಮ ಮುಂದಿನ ಸಿನಿಮಾದಲ್ಲಿ ಶೇಕಡ 50ರಷ್ಟು ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಮಹಿಳಾ ಕಲಾವಿದರಿಗೆ ಶೇಕಡ 5ರಷ್ಟು ಸಂಭಾವನೆ ಹೆಚ್ಚಳ ಮಾತ್ರ ನೀಡಲಾಗುತ್ತದೆ. ಕೆಲವೊಮ್ಮೆ ಅಷ್ಟು ಹೆಚ್ಚಳವನ್ನು ಕೂಡಾ ಮಾಡಲಾಗುವುದಿಲ್ಲ” ಎಂದು ರಮ್ಯಾ ಬೇಸರ ವ್ಯಕ್ತಪಡಿಸಿದರು.
“ನಾವು ಕೂಡಾ ಸಿನಿಮಾದಲ್ಲಿ ನಟರಷ್ಟೇ ಕೆಲಸವನ್ನು ಮಾಡುತ್ತೇವೆ. ಆದರೆ ನಮಗೆ ಸಂಭಾವನೆ ಹೆಚ್ಚಿಸಲಾಗುವುದಿಲ್ಲ. ಈ ತಾರತಮ್ಯ ನಿಲ್ಲಬೇಕು. ನಟರಿಗೆ ಹೆಚ್ಚು ಸಂಭಾವನೆ, ನಟಿಯರಿಗೆ ಕಡಿಮೆ ಸಂಭಾವನೆ ಯಾಕೆ” ಎಂದು ನಟಿ ಪ್ರಶ್ನಿಸಿದರು.
“ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಹೇಳಬೇಕಾದ ಹಲವು ಕತೆಗಳಿವೆ. ಆದರೆ ಯಾರೂ ಕೂಡ ಈ ಸಮಸ್ಯೆಗಳ ಮಾತನಾಡುವ, ಹೇಳುವ ಧೈರ್ಯ ಮಾಡುತ್ತಿಲ್ಲ. ಮಹಿಳಾ ಪ್ರಧಾನ ಸಿನಿಮಾ ಎಂದರೆ ಮಹಿಳೆಯರು ಪೊಲೀಸರಾಗಿ ರೌಡಿಗಳಿಗೆ ಹೊಡೆಯುವುದಷ್ಟೇ ಇರುತ್ತದೆ. ಆದರೆ ಅದಕಷ್ಟೇ ಸೀಮಿತವಲ್ಲ. ಮಹಿಳಾ ಪ್ರಧಾನವಾದ ಹಲವು ಕಥೆಗಳಿವೆ” ಎಂದು ರಮ್ಯಾ ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಸಿಇಟಿ ಪರೀಕ್ಷೆ ಎಡವಟ್ಟು | ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಲೆದಂಡ
“ಕನ್ನಡದಲ್ಲಿ ಮಹಿಳಾ ಪ್ರಧಾನ, ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗುತ್ತಿವೆ. ಆದರೆ ಮಲಯಾಳ ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾಗಳನ್ನು ಹೆಚ್ಚಿಸುತ್ತಿದೆ. ಜನರು ನಾಯಕನನ್ನು ನೋಡಲೆಂದೇ ಸಿನಿಮಾ ವೀಕ್ಷಿಸುತ್ತಾರೆ ಎಂಬ ಮನಸ್ಥಿತಿಯನ್ನು ನಾವು ಮೊದಲು ಬಿಡಬೇಕು” ಎಂದರು.
ಇನ್ನು ಈ ಸಂದರ್ಭದಲ್ಲೇ ತಾನು ಚಿತ್ರರಂಗಕ್ಕೆ ಮರಳುವ ಬಗ್ಗೆ ಮಾತನಾಡಿದರು. “ನನ್ನ ಪಾತ್ರ ಮುಖ್ಯ ಎನಿಸುವಂತಹ ಕಥೆಗಳು ಬಂದರೆ ಖಂಡಿತವಾಗಿಯೂ ನಾನು ಚಿತ್ರರಂಗಕ್ಕೆ ಮರುಳುತ್ತೇನೆ. ನಮ್ಮ ನಿರ್ಮಾಣ ಸಂಸ್ಥೆಯಿಂದ ಸದ್ಯ ನಾಲ್ಕು ಸಿನಿಮಾಗಳ ನಿರ್ಮಾಣ ಮಾಡಲಾಗುವುದು. ಈ ಪೈಕಿ ಒಂದು ಸಿನಿಮಾದಲ್ಲಿ ನಾನು ನಟಿಸುವ ಸಾಧ್ಯತೆಯಿದೆ” ಎಂದು ತಿಳಿಸಿದರು.
