ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ʼಲೈಕಾ ಪ್ರೊಡಕ್ಷನ್ಸ್ʼ
ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ 600 ಕೋಟಿ ರೂಪಾಯಿ ಬಂಡವಾಳ ಹೂಡಿದ್ದ ಸಂಸ್ಥೆ
ತಮಿಳಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಲೈಕಾ ಪ್ರೊಡಕ್ಷನ್ಸ್ʼ ಮಾಲೀಕರ ಮನೆ ಮತ್ತು ಕಚೇರಿಗಳ ಮೇಲೆ ಮಂಗಳವಾರ ಇ.ಡಿ ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ದಿಢೀರ್ ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಲೈಕಾ ಸಮೂಹ ಸಂಸ್ಥೆಯ ಮಾಲೀಕ ಸುಬಾಸ್ಕರನ್ ಅವರ ವಿರುದ್ಧ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸುಬಾಸ್ಕರನ್ ಅವರ ಮನೆ ಮತ್ತು ಕಚೇರಿ ಸೇರಿದಂತೆ 8 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ತಂಡೋಪ ತಂಡಗಳಾಗಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ʼಲೈಕಾ ಪ್ರೊಡಕ್ಷನ್ಸ್ʼ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ʼಪೊನ್ನಿಯನ್ ಸೆಲ್ವನ್-1ʼ ಮತ್ತು 2 ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. 2022ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ʼಪೊನ್ನಿಯನ್ ಸೆಲ್ವನ್-1ʼ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿತ್ತು. ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ʼಪೊನ್ನಿಯನ್ ಸೆಲ್ವನ್-2ʼ ಇಂದಿಗೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈವರೆಗೆ 320 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಈ ಚಿತ್ರಕ್ಕೆ 600 ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳ ಹೂಡಲಾಗಿತ್ತು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಿಸುತ್ತಿರುವ ʼಲೈಕಾ ಪ್ರೊಡಕ್ಷನ್ಸ್ʼ ಅಕ್ರಮ ಹಣ ವರ್ಗಾವಣೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ʼದಿ ಕೇರಳ ಸ್ಟೋರಿʼ ಚಿತ್ರತಂಡಕ್ಕೆ ಅಪಘಾತ
ಕೇವಲ ʼಪೊನ್ನಿಯನ್ ಸೆಲ್ವನ್ʼ ಮಾತ್ರವಲ್ಲದೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಲವು ಚಿತ್ರಗಳಿಗೆ ʼಲೈಕಾ ಪ್ರೊಡಕ್ಷನ್ಸ್ʼ ಬಂಡವಾಳ ಹೂಡಿದೆ. 2014ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಒಂದೇ ಒಂದು ದಶಕದಲ್ಲಿ ಬಹುಕೋಟಿ ವ್ಯವಹಾರ ನಡೆಸುತ್ತಿದೆ. ಹೀಗಾಗಿ ಈ ಸಂಸ್ಥೆಗೆ ವಿದೇಶದಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಮತ್ತು ಸಂಸ್ಥೆಯ ಮುಖ್ಯಸ್ಥರು ತೆರಿಗೆ ವಂಚನೆ ನಡೆಸಿದ್ದಾರೆ ಎಂಬ ಆರೋಪಗಳು ಕೂಡ ಈ ಹಿಂದೆ ಕೇಳಿಬಂದಿವೆ.