ಅರಣ್ಯದೊಳಗೆ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದ ಏಸುಕ್ರಿಸ್ತನನ್ನು ಜೂಡಾಸ್ ಎಂಬ ಶಿಷ್ಯನು 30 ಬೆಳ್ಳಿಕಾಸಿನ ಆಸೆಗೆ ಸೇನಾಪಡೆಗೆ ತೋರಿಸಿಕೊಡುತ್ತಾನೆ. 2002ರ ಗುಜರಾತ್ ಹತ್ಯಾಕಾಂಡದಲ್ಲೂ ಇಂತಹದೊಂದು ಪ್ರಸಂಗ ನೆನಪಿಗೆ ಬರುತ್ತಿದೆ. ಅಹಮದಾಬಾದ್‍ನ ಗುಲ್‍ಮಾರ್ಗ್ ಸೊಸೈಟಿಯ ಹೊರಗೆ ದಿನಸಿ ಅಂಗಡಿ ನಡೆಸುತ್ತಿದ್ದ ಒಬ್ಬ ಹಿಂದು ವ್ಯಾಪಾರಿಯು ಆಯುಧಗಳು ಮತ್ತು ಗ್ಯಾಸ್ ಸಿಲಿಂಡರ್ನೊಂದಿಗೆ ಬಂದ ಬಜರಂಗದಳ ಪಡೆಗೆ ಸೊಸೈಟಿಯೊಳಗಿರುವ ಮುಸ್ಲಿಂ ಮನೆಗಳನ್ನು ತೋರಿಸಿಕೊಡುತ್ತಾನೆ.
ಮೋಹನ್‍ಲಾಲ್ ನಾಯಕನಾದ ‘ಎಂಪುರಾನ್’ ಎಂಬ ಹೊಸ ಮಲಯಾಳಂ ಸಿನೆಮಾ ಈಗ ವಿವಾದದ ಸುಳಿಯಲ್ಲಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲೂ ಈ ಸಿನೆಮಾ ಬಿಡುಗಡೆಯಾಗಿದೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಇದರ ನಿರ್ದೇಶಕ. ಚಿತ್ರಕಥೆ ಬರೆದದ್ದು ನಟ ಮುರಳಿ ಗೋಪಿ. ಪೃಥ್ವಿರಾಜ್ ಮಲಯಾಳಂ ಸಿನೆಮಾದ 1980ರ ಬಂಡಾಯ ನಾಯಕ ಪಾತ್ರಗಳನ್ನು ಮಾಡುತ್ತಿದ್ದ ದಿವಂಗತ ಸುಕುಮಾರನ್ ಎಂಬ ನಟನ ಎರಡನೆಯ ಮಗ. ಮುರಳಿ ಗೋಪಿ ಮಲಯಾಳಂ ಚಲನಚಿತ್ರದ ಪ್ರತಿಭಾವಂತ ಭರತ್ ಪ್ರಶಸ್ತಿ ವಿಜೇತ ನಟ ದಿವಂಗತ ಗೋಪಿ ಅವರ ಮಗ.
ಈಗ ವಿವಾದಕ್ಕೆ ಆಸ್ಪದವೇನು? ಗುಜರಾತಿನಲ್ಲಿ 2002ದಲ್ಲಿ ಮುಸ್ಲಿಮರ ವಿರುದ್ಧ ನಡೆದ ವಂಶೀಯ ಹತ್ಯಾಕಾಂಡದ ಕುರಿತು ‘ಎಂಪುರಾನ್’ನಲ್ಲಿ ಸುಮಾರು ಅರ್ಧ ಗಂಟೆಯ ಚಿತ್ರೀಕರಣ ಇದೆ. ಇತಿಹಾಸದಿಂದಲೂ ಈ ಘಟನೆಯನ್ನು ಅಳಿಸಿಹಾಕಲು ನಡೆಯ ಸಂಘಪರಿವಾರದ ಪ್ರಯತ್ನಕ್ಕೆ ‘ಎಂಪುರಾನ್’ ದೊಡ್ಡ ಸವಾಲೊಡ್ಡಿದೆ. 2002ರಲ್ಲಿ ಸುಮಾರು 100ಕ್ಕಿಂತ ಹೆಚ್ಚು ಮುಸಲ್ಮಾನರನ್ನು ಕೊಚ್ಚಿಕೊಂದ ಬಜರಂಗದಳದ ಮುಖಂಡ ಬಾಬು ಬಜರಂಗಿ ಈ ಸಿನೆಮಾದಲ್ಲಿ ಪಾತ್ರಧಾರಿಯಾಗಿ ಬರುತ್ತಾನೆ. 23 ವರ್ಷಗಳ ಹಿಂದೆ ನಡೆದ ಮುಸ್ಲಿಂ ನರಮೇಧವನ್ನು ಸಿನೆಮಾ ಪ್ರೇಕ್ಷಕರಿಗೆ ಸಂವೇದಿಸುತ್ತದೆ. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯ ಮೌನ ಕೂಡಾ ಪ್ರೇಕ್ಷಕರಿಗೆ ಭಾಸವಾಗುತ್ತದೆ.
‘ಎಂಪುರಾನ್’ ಹೊರಬಂದ ಕೂಡಲೇ ಸಂಘಪರಿವಾರದಲ್ಲಿ ತಳಮಳ ಶುರುವಾಯಿತು. ವಿವಾದಗಳು ಎದ್ದವು. ಇದರ ಪರಿಣಾಮ 24 ಕಡೆಗಳಲ್ಲಿ ‘ಕಟ್’ ಮಾಡಿದ ನಂತರ ಸಿನೆಮಾ ಮತ್ತೆ ಚಿತ್ರಮಂದಿರಗಳಿಗೆ ಬಂದಿದೆ. ಇಷ್ಟೆಲ್ಲಾ ಆದರೂ, ಸಂಘಪರಿವಾರವು ಸುಮ್ಮನಿರಲಿಲ್ಲ. ನಿರ್ಮಾಪಕರಾದ ಗೋಕುಲಂ ಗೋಪಾಲನ್ ಅವರ ಚೆನ್ನೈ ಕಚೇರಿಯಲ್ಲಿ ಇಡಿಯಿಂದ ದಾಳಿ ನಡೆಸಲಾಗಿದೆ. ಇನ್ನೊಬ್ಬ ನಿರ್ಮಾಪಕ ಆಂಟನಿ ಮತ್ತು ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿರೋಧಿಗಳನ್ನು ದುರ್ಬಲಗೊಳಿಸಲು ಬಿಜೆಪಿ ಸರ್ಕಾರವು ನಿರಂತರ ಮಾಡುತ್ತಿದ್ದ ಅದೇ ಕಾರ್ಯತಂತ್ರವನ್ನು ಇಲ್ಲಿಯೂ ಮಾಡಿದೆ.

ಆದರೆ, ‘ಎಂಪುರಾನ್’ ಸಿನೆಮಾದ ಮೂಲಕ ಗುಜರಾತ್ ಹತ್ಯಾಕಾಂಡವನ್ನು ಹೊಸ ತಲೆಮಾರಿಗೆ ತಲುಪಿಸುವಲ್ಲಿ ಪೃಥ್ವಿರಾಜ್ ಮತ್ತು ಮುರಳಿ ಗೋಪಿ ಯಶಸ್ವಿಯಾಗಿದ್ದಾರೆ. ಸಂಘಪರಿವಾರದ ದಾಳಿಯ ಬಗ್ಗೆ ಅಂದಾಜಿಸಿದ ಇವರು ಆ ಕಾರಣದಿಂದಲೇ ಸಿನೆಮಾದ ಪ್ರಿವ್ಯೂ ಹೊರ ಬಿಡಲಿಲ್ಲ. ಅದಲ್ಲದೆ, ಸಿನೆಮಾವನ್ನು ದೇಶದ ಉದ್ದಗಲಕ್ಕೂ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾವಿರಾರು ಚಿತ್ರಮಂದಿರಗಳಲ್ಲಿ ತತ್ಸಮಯ ಬಿಡುಗಡೆಗೊಳಿಸಿದ್ದಾರೆ. ‘24 ಕಟ್’ಗೆ ಮುನ್ನವೇ ಲಕ್ಷಾಂತರ ಪ್ರೇಕ್ಷಕರು ಸಿನೆಮಾ ನೋಡಿದ್ದರು.
ಎಂಪುರಾನ್ ಸಿನೆಮಾದಲ್ಲಿ ‘ಮುನ್ನ’ ಎಂಬ ಪಾತ್ರಧಾರಿ ಇದ್ದಾನೆ. ಹತ್ಯಾಕಾಂಡದ ಸಂದರ್ಭದಲ್ಲಿ ಒಂದು ಗ್ರಾಮದ ಮುಸ್ಲಿಮರು ಟ್ರಾಕ್ಟರುಗಳಲ್ಲಿ ರಕ್ಷಣೆಗಾಗಿ ಹಿಂದೂ ಹವೇಲಿಗೆ ತಲುಪುತ್ತಾರೆ. ಆ ಗುಂಪಿನಲ್ಲಿ ಮಕ್ಕಳು, ಗರ್ಭಿಣಿಯರು, ಹಿರಿಯ ಜೀವಗಳು ಸೇರಿ ಸುಮಾರು 40 ಮಂದಿ ಇದ್ದರು. ಹವೇಲಿಯ ಒಡೆತಿ ಸುಭದ್ರಾಬೆನ್ ಎಲ್ಲರಿಗೂ ಆಸರೆ ಕೊಡಲು ವ್ಯವಸ್ಥೆ ಮಾಡುವಂತೆ ತನ್ನ ಮುಖ್ಯ ಸೇವಕ ಮುನ್ನಾಭಾಯಿಗೆ ಹೇಳುತ್ತಾರೆ. ಅದರಂತೆ, ಎಲ್ಲರನ್ನೂ ಮಹಡಿ ಮೇಲಿನ ಕೊಠಡಿಗಳಲ್ಲಿ ಇರಿಸುವುದನ್ನು ಮುನ್ನಾ ಮಾಡುತ್ತಾನೆ. ಆದರೂ, ಮುನ್ನಾದ ಕಣ್ಣುಗಳಲ್ಲಿ ನರಿಯ ಭಾವಗಳಿವೆ. ಇನ್ನೇನು ಸಂತ್ರಸ್ತರೆಲ್ಲರೂ ವಿಶ್ರಾಂತಿಗೆ ಮರಳಲು ಹೊರಡುವಾಗಲೇ ಆಯುಧಗಳೊಂದಿಗೆ ‘ಅವರು’ ಬಂದಿಳಿಯುತ್ತಾರೆ. ಮುನ್ನಾ ಸುಭದ್ರಾಬೆನ್‍ಗೆ ಹೇಳುತ್ತಾರೆ: ‘ಭೈಯಾ ಆ ಚುಕಾ ಹೆ’. ಬಂಜರಂಗದಳದ ಮುಖಂಡ ಬಾಬು ಬಜರಂಗಿಯನ್ನು ಹೋಲುವ ಪಾತ್ರಧಾರಿ ಬಲ್‍ದೇವ್ ಮತ್ತು ಆತನ ಪಡೆ ಕೆಲವೇ ಗಂಟೆಗಳಲ್ಲಿ ಹವೇಲಿಯನ್ನು ಸರ್ವನಾಶ ಮಾಡುತ್ತಾರೆ. ಅಷ್ಟರಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆದವು. ಗರ್ಭಿಣಿಯನ್ನೂ ಬಿಡಲಿಲ್ಲ. ಆ ಕ್ರೂರಕೃತ್ಯವನ್ನು ಮುನ್ನಾ ಕೂಡಾ ಮಾಡುತ್ತಾನೆ. ಸುಭದ್ರಾಬೆನ್ ಅವರ ಮೃತದೇಹಕ್ಕೆ ಆತನು ಒದೆಯುತ್ತಾನೆ.
‘ಎಂಪುರಾನ್’ ಸಿನೆಮಾದಲ್ಲಿನ ಇದೇ ಮುನ್ನಾಭಾಯಿ ಕುರಿತು ಕಳೆದ ವಾರ ಸಂಸತ್ತಿನಲ್ಲಿ ಸಿಪಿಐ(ಎಂ)ನ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಪ್ರಸ್ತಾಪ ಮಾಡಿದರು. “ನಮ್ಮೊಳಗೆ, ನಮ್ಮ ಸ್ನೇಹಿತರಲ್ಲಿ, ಬಂಧು ಬಳಗದಲ್ಲಿ, ನೆರೆಹೊರೆಯವರಲ್ಲಿ, ಸಹೋದ್ಯೋಗಿಗಳಲ್ಲಿ ಮುನ್ನಾಗಳಿರುತ್ತಾರೆ. ಅವರ ನೈಜ ಬಣ್ಣವು ಹೊರಬರುವುದು ಕೆಲವು ಗಂಭೀರ ಸನ್ನಿವೇಶಗಳಲ್ಲಿ ಮಾತ್ರ. ನಮ್ಮೊಂದಿಗೆ ಸುಭಗರಂತೆ, ಆತ್ಮೀಯರಂತೆ, ಭಂಟರಂತೆ, ನಗುಮುಖದಿಂದ ಕಾಣಿಸಿಕೊಳ್ಳುವ ಮುನ್ನಾಗಳು ಇದ್ದಕ್ಕಿದ್ದಂತೆ ಬಣ್ಣ ಬದಲಾಯಿಸುತ್ತಾರೆ. ಬೈಬಲ್‍ನಲ್ಲಿ ಒಂದು ಪ್ರಸಂಗವಿದೆ. ಅರಣ್ಯದೊಳಗೆ ಏಕಾಂಗಿಯಾಗಿ ಪ್ರಾರ್ಥನೆ ಮಾಡುತ್ತಿದ್ದ ಏಸುಕ್ರಿಸ್ತನನ್ನು ಜೂಡಾಸ್ ಎಂಬ ಶಿಷ್ಯನು 30 ಬೆಳ್ಳಿಕಾಸಿನ ಆಸೆಗೆ ಸೇನಾಪಡೆಗೆ ತೋರಿಸಿಕೊಡುತ್ತಾನೆ. 2002ರ ಗುಜರಾತ್ ಹತ್ಯಾಕಾಂಡದಲ್ಲೂ ಇಂತಹದೊಂದು ಪ್ರಸಂಗ ನೆನಪಿಗೆ ಬರುತ್ತಿದೆ. ಅಹಮದಾಬಾದ್‍ನ ಗುಲ್ಬರ್ಗ್ ಸೊಸೈಟಿಯ ಹೊರಗೆ ದಿನಸಿ ಅಂಗಡಿ ನಡೆಸುತ್ತಿದ್ದ ಒಬ್ಬ ಹಿಂದು ವ್ಯಾಪಾರಿಯು ಆಯುಧಗಳು ಮತ್ತು ಗ್ಯಾಸ್ ಸಿಲಿಂಡರ್ನೊಂದಿಗೆ ಬಂದ ಬಜರಂಗದಳ ಪಡೆಗೆ ಸೊಸೈಟಿಯೊಳಗಿರುವ ಮುಸ್ಲಿಂ ಮನೆಗಳನ್ನು ತೋರಿಸಿಕೊಡುತ್ತಾನೆ. ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯನ್ನು ಮನೆಯಿಂದ ಹೊರಗೆಳೆದು ಅವರ ಕುಟುಂಬ ಸದಸ್ಯರ ಕಣ್ಣೆದುರು ಸುಟ್ಟುಕೊಂದಿದ್ದು ಅವರ ಪತ್ನಿ ಝಾಕಿಯ ಜಾಫ್ರಿಗೆ ಎಂದೂ ಮರೆಯಲಾಗದ ನೆತ್ತರದ ಇತಿಹಾಸವಾಗಿದೆ. ಆ ಹಿಂದು ವ್ಯಾಪಾರಿಗೂ ಅಲ್ಲಿನ ಮುಸ್ಲಿಂ ಕುಟುಂಬಗಳಿಗೂ ಅನೇಕ ವರ್ಷಗಳ ನಂಟು ಇದೆ. ಅವರ ಮನೆಗಳಿಗೆ ದಿನಸಿ ಕೊಡುವುದು ಆತನೇ. ಆದರೆ, ಆ ದಿನ ಆತನು ‘ಮುನ್ನಾಭಾಯಿ’ಯ ಸ್ವರೂಪ ಪಡೆದುಕೊಂಡ. ಹೀಗೆ, ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಅನೇಕ ಮುನ್ನಾಗಳನ್ನು ಬೊಟ್ಟುಮಾಡಿ ಹೇಳಬಲ್ಲೆ”.
ಮುನ್ನಾಭಾಯಿ ಪ್ರಸ್ತಾಪಕ್ಕೆ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದರು. ಅದು ಸ್ವಾಭಾವಿಕ. ಗುರಿ ಅವರತ್ತ ಬಂದರೆ, ಅವರು ಸುಮ್ಮನಿರಲಾರರು. ಕಟು ವಾಸ್ತವವೇನೆಂದರೆ, ಮುನ್ನಾಗಳು ಮತ್ತು ಜೂಡಾಸುಗಳ ಸಂಖ್ಯೆಯಲ್ಲಿ ಈಗ ವಿಪರೀತ ಹೆಚ್ಚಳ ಕಂಡಿದೆ. ‘ಎಂಪುರಾನ್’ ಸಿನೆಮಾ ಕೂಡಾ ಇದರ ಕುರಿತು ಸೂಕ್ಷ್ಮವಾಗಿ ನಮ್ಮನ್ನು ಎಚ್ಚರಿಸುತ್ತದೆ. ಈ ಎಚ್ಚರ ಸದಾ ನಮಗಿರಲಿ.


ಬಾಬುರಾಜ್ ಪಲ್ಲದನ್
ಮೈಸೂರಿನಲ್ಲಿ ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ