ಚಿತ್ರನಟ ಯಶ್ 38ನೇ ಹುಟ್ಟಹಬ್ಬದ ಹಿನ್ನೆಲೆ ಬರ್ತ್ಡೇ ಶುಭಾಶಯ ಕೋರಿ ಬ್ಯಾನರ್ ಹಾಕುವಾಗ ಗದಗದ ಸೊರಣಗಿ ಗ್ರಾಮದಲ್ಲಿ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರೆ, ಮೂವರು ಅಭಿಮಾನಿಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಈ ನಡುವೆ ಯಶ್ ಆಸ್ಪತ್ರೆಗೆ ಭೇಟಿ ನೀಡಿನ ಗಾಯಾಳುಗಳನ್ನು ಮಾತನಾಡಿಸಿ ವಾಪಸ್ ತೆರಳುತ್ತಿದ್ದಾಗ ಮತ್ತೊಂದು ಅವಘಡ ಸಂಭವಿಸಿದೆ.
ಯಶ್ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ ಯುವಕ, ಯಶ್ ಅಭಿಮಾನಿ ನಿಖಿಲ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ನಿಖಿಲ್ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿಯಾಗಿದ್ದರು.
ತನ್ನ ನೆಚ್ಚಿನ ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆಯಲ್ಲಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿಖಿಲ್ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ. ಹುಟ್ಟಹಬ್ಬದ ದಿನವೇ ಅಭಿಮಾನಿಯ ಮತ್ತೊಂದು ಸಾವು ನಟ ಯಶ್ಗೆ ಆಘಾತ ತಂದಿದೆ.
ಇದನ್ನು ಓದಿದ್ದೀರಾ? ಬ್ಯಾನರ್ ಕಟ್ಟಬೇಡಿ: ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬ ಸದಸ್ಯರನ್ನು ಸಂತೈಸಿದ ನಟ ಯಶ್
ಘಟನೆ ಸಂಬಂಧ ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾಧ್ಯಮಗಳೊಂದಿಗೆ ಮಾತನಾಡಿದ್ದು,”ಬೈಕ್ಗೆ ಡಿಕ್ಕಿ ಹೊಡೆದ ಜೀಪ್ ಯಶ್ ಬೆಂಗಾವಲು ವಾಹನ ಅಲ್ಲ. ಕೆಲವು ಮಾಧ್ಯಮಗಳಲ್ಲಿ ಯಶ್ ಬೆಂಗಾವಲು ವಾಹನ ಎಂದು ಸುದ್ದಿ ಬಿತ್ತರಿಸಲಾಗಿದೆ. ಆದರೆ ಅದು ಪೊಲೀಸ್ ಹೆಡ್ ಕ್ವಾರ್ಟರ್ಗೆ ಹೋಗುತ್ತಿದ್ದ ಜೀಪ್. ನಟ ಯಶ್ ಅವರನ್ನು ಬೈಪಾಸ್ ಹೈವೇಯಿಂದಲೇ ಹುಬ್ಬಳ್ಳಿಗೆ ಸೂಕ್ತ ಭದ್ರತೆಯೊಂದಿಗೆ ಕಳುಹಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ನಟ ಯಶ್ ಅವರ ಬೆಂಗಾವಲು ವಾಹನಕ್ಕೂ ಈ ಅಪಘಾತಕ್ಕೂ ಸಂಬಂಧವಿಲ್ಲ. ನಟ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ. ಮೃತಪಟ್ಟ ಯುವಕನನ್ನು 20 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ನಿಖಿಲ್ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ಯಾರೂ ದಯವಿಟ್ಟು ಇನ್ನು ಮುಂದೆ ಬ್ಯಾನರ್ ಕಟ್ಟಬೇಡಿ. ನನಗೆ ನನ್ನ ಹುಟ್ಟುಹಬ್ಬದ ದಿನ ಬಂತೆಂದರೆ ಭಯ ಶುರುವಾಗಿಬಿಟ್ಟಿದೆ. ಈಗ ನಾನು ಬರುವಾಗಲೂ ಬೈಕ್ನಲ್ಲಿ ಚೇಸ್ ಮಾಡ್ತಿದ್ರು, ಇದು ನಿಜಕ್ಕೂ ಬೇಜಾರಾಗುತ್ತೆ. ಕಟೌಟ್ ಕಟ್ಟಬೇಡಿ ಅಂದ್ರೆ ಬೇಜಾರು ಮಾಡಿಕೊಳ್ತೀರಿ. ಈ ರೀತಿ ಆದಾಗ ನಮ್ಮ ಮನಸ್ಸಿಗೆ ನೋವಾಗುತ್ತದೆ” ಎಂದು ನಿನ್ನೆ ಗದಗದಲ್ಲಿ ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿದ್ದ ಬಳಿಕ ಕನ್ನಡದ ಸ್ಟಾರ್ ನಟ ಯಶ್ ತಿಳಿಸಿದ್ದರು.