ಚಿತ್ರ ವಿಮರ್ಶೆ | ಮನಸಿಗೆ ಮುದ ನೀಡುವ ‘ಮಸ್ತ್ ಮೇ ರೆಹನೆ ಕಾ’

Date:

Advertisements
ಒಂಚೂರು ಪ್ರೀತಿ, ಒಂದಷ್ಟು ಸಾಂಗತ್ಯ ಹಾಗೂ ಕೊಂಚ ಕ್ಷಮೆ- ನಾವು ಮತ್ತೊಬ್ಬರಿಗೆ ಕೊಡುವ ಬಹಳ ದೊಡ್ಡ ಕೊಡುಗೆ ಎನ್ನುವುದನ್ನು ‘ಮಸ್ತ್ ಮೇ ರೆಹನೆ ಕಾ’ ಚಿತ್ರ ನೋಡುಗರ ಎದೆಗೆ ದಾಟಿಸುತ್ತದೆ. ಮುಸ್ಸಂಜೆಯಲ್ಲಿರುವ ಮುದುಡಿದ ಮನಸ್ಸುಗಳಿಗೆ ಮುದನೀಡುತ್ತದೆ.

ಬದುಕಿನ ಮುಸ್ಸಂಜೆಯಲ್ಲಿರುವ ಇಬ್ಬರು ಮುಂಬೈನ ಕಡಲ ಕಿನಾರೆಯಲ್ಲಿ ನಿಂತಿದ್ದಾರೆ. ಆಗತಾನೆ ಪರಿಚಯವಾಗಿದ್ದಾರೆ. ಹೆಸರು, ಊರು, ಭಾಷೆ ಬಗ್ಗೆ ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ವೃದ್ಧೆ, ‘ಎಲ್ಲಿಯವರು’ ಎಂದರೆ, ವೃದ್ಧ, ‘ಕರ್ನಾಟಕ’ ಎನ್ನುತ್ತಾರೆ. ಅದಕ್ಕೆ ವೃದ್ಧೆ, ‘ಓ ಮದ್ರಾಸಿ’ ಎನ್ನುತ್ತಾರೆ. ತಕ್ಷಣ ವೃದ್ಧ, ‘ಅಲ್ಲ, ಕರ್ನಾಟಕ’ ಎನ್ನುತ್ತಾರೆ. ಮತ್ತೆ ವೃದ್ಧೆ, ‘ಅದೇ ಮದ್ರಾಸಿ’ ಎನ್ನುತ್ತಾರೆ. ‘ಇಲ್ಲ, ನನ್ನದು ಕಾರವಾರ, ಕರ್ನಾಟಕ’ ಎನ್ನುತ್ತಾರೆ. ‘ಹೂ, ಅದೇ ಮದ್ರಾಸಿ’ ಎಂದು ವೃದ್ಧೆ ಪುನರುಚ್ಚರಿಸುತ್ತಾರೆ. ಕೊಂಚ ಕಸಿವಿಸಿಗೊಂಡ ವೃದ್ಧ, ‘ನನ್ನದು ಕಾರವಾರ, ಮಹಾರಾಷ್ಟ್ರದ ಗಡಿಭಾಗದಲ್ಲಿದೆ, ನಾನು ಕನ್ನಡಿಗ, ಮದ್ರಾಸೇ ಬೇರೆ, ಕರ್ನಾಟಕವೆ ಬೇರೆ’ ಎಂದು ಮನದಟ್ಟು ಮಾಡಿಸುತ್ತಾರೆ.

ಇದು ಜಾಕಿ ಶ್ರಾಫ್ ಮತ್ತು ನೀನಾ ಗುಪ್ತಾ ನಟಿಸಿರುವ ‘ಮಸ್ತ್ ಮೇ ರೆಹನೆ ಕಾ’ ಚಿತ್ರದ ಒಂದು ಸನ್ನಿವೇಶ. ಚಿತ್ರದ ಈ ತುಣುಕು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿರುವ ಕಾರವಾರದ ವಯೋವೃದ್ಧ ಕಾಮತ್; ಯಾರೊಂದಿಗೂ ಬೆರೆಯದ, ಹೆಚ್ಚು ಮಾತನಾಡದ, ಪ್ರತಿದಿನ ಕಡಲ ನೋಡುತ್ತಾ ಕೂರುವ, ವಾರಕ್ಕೊಂದು ಸಲ ನೊರೆಯುಕ್ಕುವ ಬಿಯರ್ ಕುಡಿಯುವ ಮೂಷಂಡಿ ಮನುಷ್ಯ. ಈತನಿಗೆ ತನ್ನಂತೆಯೇ ಒಬ್ಬಂಟಿಯಾಗಿರುವವರ ದಿನಚರಿ ಮತ್ತು ಆ ಮನೆಗೆ ಕಳ್ಳರು ಹೇಗೆ ನುಗ್ಗುತ್ತಾರೆ ಎಂಬ ಕುರಿತು ಸರ್ವೇ ಮಾಡುವ ಖಯಾಲಿ.

Advertisements

ಕಾಮತ್ ಗೆ ತದ್ವಿರುದ್ಧ ಗುಣ-ಸ್ವಭಾವ ಹೊಂದಿರುವ ಪ್ರಕಾಶ್ ಕೌರ್ ಹಂಡಾ ಎಂಬ ವಯೋವೃದ್ಧ ಪಂಜಾಬಿ ಮಹಿಳೆ; ಕೆನಡಾದಲ್ಲಿರುವ ಮಗನನ್ನು ತೊರೆದು ತನ್ನಿಷ್ಟದಂತೆ ಬದುಕಲು ಮುಂಬೈಗೆ ಬಂದಾಕೆ. ವೃದ್ಧ ಮತ್ತೊಬ್ಬರ ಮಾತನಾಡಿಸಲು ಹಿಂಜರಿದರೆ; ವೃದ್ಧೆ, ಮೇಲೆ ಬಿದ್ದು ಮಾತನಾಡಿಸಲು ಮುನ್ನುಗ್ಗುವ ವಾಚಾಳಿ. ಆತ ನಗುವನ್ನೇ ಮರೆತಿದ್ದರೆ, ಈಕೆ ನಗು ಬಿಟ್ಟು ಬದುಕಲಾರದವಳು. ಒಂಟಿಯಾಗಿ ಬದುಕುವ ಇಂತಹ ಇಬ್ಬರ ಮನೆಯಲ್ಲೂ ಕಳ್ಳತನವಾಗಿ, ಪೊಲೀಸ್ ಠಾಣೆಗೆ ಬಂದು, ಕಳ್ಳನನ್ನು ಗುರುತಿಸುವ ಸಮಯದಲ್ಲಿ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗಿ, ಅದು ಒಬ್ಬರಿಗೊಬ್ಬರು ಅವಲಂಬಿಸುವ, ಪ್ರೀತಿಗಾಗಿ ಹಂಬಲಿಸುವ, ಹಳವಂಡಗಳನ್ನು ಹಂಚಿಕೊಳ್ಳುವ, ಕೊನೆಗೆ ಬಿಟ್ಟಿರಲಾರದ ಸ್ನೇಹಿತರಾಗುವ ಸುತ್ತಲಿನ ಕತೆಯೇ ‘ಮಸ್ತ್ ಮೇ ರೆಹನೆ ಕಾ’ ಚಿತ್ರ.

ಈ ವೃದ್ಧ ಜೋಡಿಗೆ ಪ್ಯಾರಲಲ್ ಆಗಿ ಮತ್ತೊಂದು ಜೋಡಿ ಇದೆ. ಅದು ಬಡ ಯುವ ಜೋಡಿ. ಬದುಕಲು ಬಯಸುವ, ನೆಲೆಗಾಗಿ ಕಾತರಿಸುವ, ಸಮಾಜದೊಂದಿಗೆ ಹೋರಾಡಿ ಸೋಲುವ, ಸೋತಾಗ ಮತ್ತೊಂದು ಮಗ್ಗುಲಿಗೆ ಹೊರಳುವ, ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಜೋಡಿ.

ಇದನ್ನು ಓದಿದ್ದೀರಾ?: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- 15; ರಾಜ್ಯ ಸರ್ಕಾರದ ನಿರಾಸಕ್ತಿ

ಉದ್ಯೋಗದಲ್ಲಿ ನೆಲೆಗೊಳ್ಳುತ್ತಿದ್ದಾಗಲೇ ಮಾಲೀಕನ ಕೆಂಗಣ್ಣಿಗೆ ಬಿದ್ದು ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ಟೈಲರ್ ನನ್ಹೆ; ತಾನೆ ಟೈಲರ್ ಅಂಗಡಿ ತೆರೆಯಲು ಹೋರಾಡಿ, ವಂಚನೆಗೊಳಗಾಗಿ, ಕಳ್ಳನಾಗಿ ಮಾರ್ಪಾಡಾಗುತ್ತಾನೆ. ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ರಾಣಿ; ನನ್ಹೆಯ ಮಷಿನ್ ಕಳುವಾದಾಗ ಕೊಡಿಸಿ ಹತ್ತಿರವಾಗುತ್ತಾಳೆ. ಬೀದಿ ಬದುಕಿನ ಸವಾಲುಗಳನ್ನು ಎದುರಿಸುವ ಗಟ್ಟಿಗಿತ್ತಿ, ಕೊನೆಗೆ ನನ್ಹೆ ಅವಸ್ಥೆ ಕಂಡು ಮೃದುವಾಗುತ್ತಾಳೆ. ಅವನನ್ನು ಆಲಂಗಿಸಿಕೊಂಡು ಸಂತೈಸುವ ಸಂಗಾತಿಯಾಗುತ್ತಾಳೆ.

ಆ ವಯೋವೃದ್ಧ ಜೋಡಿ ಮತ್ತು ಈ ಯುವ ಜೋಡಿಯನ್ನು ಬೆಸೆಯಲು ಕಳ್ಳತನವನ್ನು, ಕೊರಿಯೋಗ್ರಾಫರ್ ಪಾತ್ರವನ್ನು ಬಳಸಲಾಗಿದೆ. ಆ ಜೋಡಿಯ ಜಾಲಿಯೇ ಬೇರೆ, ಈ ಜೋಡಿಯ ಜಂಜಾಟವೇ ಬೇರೆ. ಎರಡಕ್ಕೂ ಒಂದೇ ಸೂತ್ರ- ಪ್ರೀತಿ.

ವಯಸ್ಸಾದ ವೃದ್ಧರ ಭಾವನಾತ್ಮಕ ಬೆಸುಗೆಗಳನ್ನು ಮರುಶೋಧನೆಗೊಡ್ಡುವ, ಬದುಕಿನ ಬೆರಗಿನ ಸೂಕ್ಷ್ಮಗಳನ್ನು ಅನ್ವೇಷಿಸಿ ಆನಂದಿಸುವ ಪಾತ್ರಗಳಲ್ಲಿ ಜಾಕಿ ಮತ್ತು ನೀನಾ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಅದರಲ್ಲೂ ಜಾಕಿಯ ಆಂಗಿಕಾಭಿನಯವಂತೂ ಮತ್ತೊಂದು ಮಟ್ಟ ಮುಟ್ಟಿದೆ. ನಿರ್ಲಿಪ್ತ ಸಮಾಜ, ಬಸವಳಿದ ಬದುಕು, ಕಳಾಹೀನ ದಿನಚರಿಗಳಿಂದ ಒಮ್ಮೆಗೇ ಬದಲಾಗುವ ಈ ವೃದ್ಧ ಜೋಡಿ; ಯಾರದೋ ಮನೆಗೆ ನುಗ್ಗಿ ಹೊಟ್ಟೆ ತುಂಬ ಬಿಯರ್ ಕುಡಿದು ಹಗುರಾಗುತ್ತದೆ. ಸ್ನೇಹ, ಸಲುಗೆ, ಸಂತೋಷ ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ.

ಜಾಕಿ ನೀನಾ 2

ಅಸಹಾಯಕ ಮತ್ತು ಹತಾಶೆಗಳ ಮೂಟೆಯಂತಹ ಟೈಲರ್ ನನ್ಹೆ ಪಾತ್ರದಾರಿ ಅಭಿಷೇಕ್ ಚೌಹಾಣ್, ಬೇಬಿಯಾಗಿ ಮೋನಿಕಾ ಪನ್ವಾರ್ ಅಭಿನಯ ಸೊಗಸಾಗಿದೆ. ಅದರಲ್ಲೂ ದಿಟ್ಟ ನಿಲುವಿನ ಗಟ್ಟಿಗಿತ್ತಿಯಾಗಿ, ಭಿಕ್ಷೆ ಬೇಡುವ ಬಜಾರಿಯಾಗಿ, ಆನಂತರ ಅಷ್ಟೇ ಮೃದುವಾಗಿ, ಸಂತೈಸುವ ಸಂಗಾತಿಯಾಗಿ ಮೋನಿಕಾ ಮನ ಗೆಲ್ಲುತ್ತಾರೆ.

ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗುವ ಚಿತ್ರ ಕೊಂಚ ಬೋರ್ ಹೊಡೆಸುತ್ತದೆ. ನಂತರ ಕತೆ ಬಿಡಿಸಿಡುತ್ತ, ಬಲಿಯುತ್ತ ನಿಧಾನವಾಗಿಯೇ ಮನಸ್ಸಿಗಿಳಿಯುತ್ತದೆ. ಪಾಯಲ್ ಅರೋರ ಅವರ ಸಂಭಾಷಣೆ ಭಿನ್ನವಾಗಿದೆ. ನಿರೂಪಣೆ ಮತ್ತು ಕ್ಯಾಮರಾ ಇದಕ್ಕೆ ಪೂರಕವಾಗಿದೆ. ಸಣ್ಣ ಜನರ ಸಣ್ಣ ಸಂಗತಿಗಳ ಸುತ್ತಲಿನ ಕತೆ ಮತ್ತು ಅದನ್ನು ಹೆಣೆದಿರುವ ರೀತಿ ವಿಶಿಷ್ಟವಾಗಿದೆ. ನಟರಿಂದ ಉತ್ತಮ ಅಭಿನಯವನ್ನು, ತಂತ್ರಜ್ಞರಿಂದ ಕೆಲಸವನ್ನು ತೆಗೆದಿರುವ ನಿರ್ದೇಶಕ ವಿಜಯ್ ಮೌರ್ಯ, ವೃದ್ಧರು ಮತ್ತು ಯುವಕರು- ಇಬ್ಬರಿಗೂ ಇಷ್ಟವಾಗುವ ಚಿತ್ರ ಮಾಡಿದ್ದಾರೆ. ಒಂಚೂರು ಪ್ರೀತಿ, ಒಂದಷ್ಟು ಸಾಂಗತ್ಯ ಹಾಗೂ ಕೊಂಚ ಕ್ಷಮೆ- ನಾವು ಮತ್ತೊಬ್ಬರಿಗೆ ಕೊಡುವ ಬಹಳ ದೊಡ್ಡ ಕೊಡುಗೆ ಎನ್ನುವುದನ್ನು ಚಿತ್ರ ನೋಡುಗರ ಎದೆಗೆ ದಾಟಿಸುತ್ತದೆ. ಮುಸ್ಸಂಜೆಯಲ್ಲಿರುವ ಮುದುಡಿದ ಮನಸ್ಸುಗಳಿಗೆ ಮುದನೀಡುತ್ತದೆ.

(ಚಿತ್ರವನ್ನು ಅಮೆಜಾನ್ ಪ್ರೈಮ್ ಒಟಿಟಿನಲ್ಲಿ ನೋಡಬಹುದು)

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X