ಹಳೆಯ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಜನವರಿ 23ರಂದು ಮುಂಬೈ ಕೋರ್ಟ್ ಈ ತೀರ್ಪು ಪ್ರಕಟಿಸಿದೆ.
ಇನ್ನು ಕೋರ್ಟ್‌ನಲ್ಲಿ ಹಾಜರಿಲ್ಲದ ಕಾರಣ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಕೂಡಾ ಮುಂಬೈ ಕೋರ್ಟ್ ಜಾರಿ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ‘ವ್ಯೂಹಂ’ ಸಿನಿಮಾ ವಿವಾದ | ನಿರ್ದೇಶಕ ವರ್ಮಾ ತಲೆಗೆ 1 ಕೋಟಿ ಘೋಷಿಸಿದ್ದ ಟಿಡಿಪಿ ಮುಖಂಡನ ವಿರುದ್ಧ ದೂರು
ಮೂರು ತಿಂಗಳು ಜೈಲು ಶಿಕ್ಷೆ ಮಾತ್ರವಲ್ಲದೆ ರಾಮ್ ಗೋಪಾಲ್ ಅವರು ದೂರುದಾರರಿಗೆ 3.72 ಲಕ್ಷ ರೂಪಾಯಿ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಮೂರು ತಿಂಗಳ ಒಳಗಾಗಿ ಈ ಮೊತ್ತವನ್ನು ಪಾವತಿಸುವಂತೆ ಸೂಚಿಸಲಾಗಿದೆ.
ರಾಮ್ ಗೋಪಾಲ್ ವರ್ಮಾ ಅವರು ಮೂರು ತಿಂಗಳ ಒಳಗಾಗಿ 3.72 ಲಕ್ಷ ರೂಪಾಯಿಯನ್ನು ದೂರುದಾರರಿಗೆ ಪಾವತಿಸದಿದ್ದರೆ ಹೆಚ್ಚುವರಿ ಮೂರು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಏನಿದು ಚೆಕ್ ಬೌನ್ಸ್ ಪ್ರಕರಣ?
2018ರಲ್ಲಿ ದಾಖಲಾದ ಚೆಕ್ ಬೌನ್ಸ್ ಪ್ರಕರಣ ಇದಾಗಿದೆ. ಮಹೇಶ್ಚಂದ್ರ ಮಿಶ್ರಾ ಎಂಬವರ ಸಂಸ್ಥೆಯು ರಾಮ್ ಗೋಪಾಲ್ ಅವರ ಸಂಸ್ಥೆ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2022ರಲ್ಲಿ ನಿರ್ದೇಶಕರಿಗೆ ಜಾಮೀನು ಲಭಿಸಿತ್ತು.
