ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆ ಮುಂದಾಗಿದೆ. ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ನಾಯಕಿ ಗೀತಾ ಶಿವರಾಜ್‌ಕುಮಾರ್ ಸಮರ್ಥಿಸಿಕೊಂಡಿದ್ದು, ಮಕ್ಕಳ ಅನುಕೂಲಕ್ಕಾಗಿ ಪಠ್ಯ ಪರಿಷ್ಕರಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಮಕ್ಕಳಿಗೆ ಒಳ್ಳೆಯದಾಗಲಿ ಅಂತ ಪಠ್ಯ ಪರಿಷ್ಕರಣೆ ಮಾಡಿದಾಗ ಅದು ಅವರಿಗೆ ನೆರವಾಗುತ್ತದೆಯೇ ಹೊರತು ಗೊಂದಲಕ್ಕೀಡು ಮಾಡುವುದಿಲ್ಲ. ಮಕ್ಕಳಿಗೆ ಯಾವುದನ್ನು ಹೇಳಿಕೊಡಬೇಕು ಯಾವುದನ್ನು ಹೇಳಿಕೊಡಬಾರದು ಎಂಬುದು ಮೊದಲು ನಮ್ಮೆಲ್ಲರಿಗೆ ಗೊತ್ತಿರಬೇಕು” ಎಂದಿದ್ದಾರೆ.
ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪಠ್ಯ ಪರಿಷ್ಕರಣೆಯ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಆರರಿಂದ 10ನೇ ತರಗತಿ ವರೆಗಿನ ಕನ್ನಡ ಮತ್ತು ಸಮಾಜ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಹೆಡಗೇವಾರ್, ವಿ.ಡಿ ಸಾವರ್ಕರ್, ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯಗಳನ್ನು ಕೈಬಿಡಲಾಗುವುದು ಅವುಗಳ ಬದಲಿಗೆ ಸಾವಿತ್ರಿ ಫುಲೆ, ಅಂಬೇಡ್ಕರ್ ಮತ್ತು ನೆಹರು ಅವರ ಪಠ್ಯಗಳನ್ನು ಸೇರಿಸಲಾಗುವುದು” ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ‘ಯುರೋಪಿಯನ್ ಎಸ್ಸೇ ಪ್ರೈಜ್’ ಪ್ರಶಸ್ತಿಗೆ ಭಾಜನರಾದ ಅರುಂಧತಿ ರಾಯ್
ರಾಜ್ಯ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆಗೆ ಮುಂದಾಗುತ್ತಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರ ಈ ನಡೆ ಸೇಡಿನ ರಾಜಕೀಯದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.