ಆದಿಪುರುಷ್‌ ಅವಾಂತರ | ತಿರುಗು ಬಾಣವಾದ ಪ್ರಚಾರ ತಂತ್ರ

Date:

Advertisements

ಪ್ರಭಾಸ್‌ ನಟನೆಯ ʼಆದಿಪುರುಷ್‌ʼ ಚಿತ್ರವನ್ನು ದೇಶವ್ಯಾಪಿಯಾಗಿ ನಿಷೇಧಿಸುವಂತೆ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ನಿಷೇಧಕ್ಕೆ ಆಗ್ರಹಿಸಿ ಅಭಿಯಾನ ನಡೆಸಲಾಗುತ್ತಿದೆ. ನೆರೆಯ ನೇಪಾಳದಲ್ಲಿ ಈಗಾಗಲೇ ಈ ಚಿತ್ರವನ್ನು ನಿಷೇಧಿಸಲಾಗಿದೆ. ಇಡೀ ಚಿತ್ರತಂಡ ಹಿಂದೂಗಳ ಕ್ಷಮೆಯಾಚಿಸುವಂತೆ ಆಗ್ರಹಗಳು ಕೇಳಿಬರುತ್ತಿವೆ.

ಅಷ್ಟೇ ಅಲ್ಲ, ಕ್ಷತ್ರೀಯ ಕರ್ಣಿ ಸೇನಾದಂತಹ ಬಲಪಂಥೀಯ ಸಂಘಟನೆಗಳು ನಿರ್ದೇಶಕ ಓಂ ರಾವತ್‌ ಮತ್ತು ಸಂಭಾಷಣೆಕಾರ ಮನೋಜ್‌ ಮುಂತಾಶಿರ್‌ ಅವರುಗಳನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆ ಹಾಕುತ್ತಿವೆ. ಈ ಅವಾಂತರಕ್ಕೆ ಅಸಲಿ ಕಾರಣ ಯಾರು? ಬಿಡುಗಡೆಗೂ ಮುನ್ನ ʼಆದಿಪುರುಷ್‌ʼ ಚಿತ್ರವನ್ನು ಬೆಂಬಲಿಸಿದ್ದವರೇ ಈಗ ಕಟು ಶಬ್ದಗಳಿಂದ ವಿರೋಧಿಸುತ್ತಿರುವುದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

8 ತಿಂಗಳ ಹಿಂದೆಯೇ ಆದಿಪುರುಷ್‌ ಕಾರ್ಟೂನ್‌ ಸಿನಿಮಾ ಎಂದಿದ್ದ ನೆಟ್ಟಿಗರು

Advertisements

ಓಂ ರಾವತ್‌ ಅವರೇ ಚಿತ್ರಕಥೆ ಬರೆದು, ನಿರ್ದೇಶಿಸಿರುವ ʼಆದಿಪುರುಷ್‌ʼ ಸಿನಿಮಾ ಬರೋಬ್ಬರಿ 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಸ್ವತಃ ಚಿತ್ರತಂಡ ಹೇಳಿಕೊಂಡಿತ್ತು. ಸೆಟ್ಟೇರಿದ ದಿನದಿಂದಲೇ ಈ ಸಿನಿಮಾಗೆ ಅಬ್ಬರದ ಪ್ರಚಾರ ನೀಡಲಾಗಿತ್ತು. ಅತಿದೊಡ್ಡ ಕ್ಯಾನ್ವಸ್‌ನಲ್ಲಿ, 3ಡಿ ಎಫೆಕ್ಟ್‌ನಲ್ಲಿ ರಾಮಾಯಣದ ಕಥೆಯನ್ನು ತೆರೆಗೆ ಅಳವಡಿಸುತ್ತಿರುವುದಾಗಿ ಓಂ ರಾವತ್‌ ಹೇಳಿಕೊಂಡಿದ್ದರು. ಇಡೀ ಸಿನಿಮಾದ ಮೇಕಿಂಗ್‌ ಮತ್ತು ವಿಷ್ಯುವಲ್‌ ಟ್ರೀಟ್‌ ಹಾಲಿವುಡ್‌ ಮಟ್ಟಿಗಿರಲಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಕಳೆದ ವರ್ಷ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಸಿನಿಮಾದ ಮೊದಲ ಟೀಸರ್‌ ಎಲ್ಲರ ನಿರೀಕ್ಷೆಯನ್ನು ಒಂದೇ ಏಟಿಗೆ ಹುಸಿಗೊಳಿಸಿತ್ತು. ಚಿತ್ರದಲ್ಲಿ ಅತ್ಯುತ್ತಮವಾದ 3ಡಿ ಮತ್ತು ವಿಎಫ್‌ಎಕ್ಸ್‌ ಎಫೆಕ್ಟ್ಸ್‌ಗಳಿವೆ ಅಂತೆಲ್ಲ ಬಡಾಯಿ ಕೊಚ್ಚಿದ್ದ ಚಿತ್ರತಂಡ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ತಿಂಗಳುಗಟ್ಟಲೇ ಓಂ ರಾವತ್‌ ಅವರ ಹಿಂದೆ ಬಿದ್ದಿದ್ದ ಟ್ರೋಲ್‌ ಪಡೆಗಳು ʼಆದಿಪುರುಷ್‌ʼ ಟೀಸರ್‌ಗಿಂತ ಟಿವಿಯಲ್ಲಿ ಬರುವ ಕಾರ್ಟೂನ್‌ ವಿಡಿಯೋಗಳೇ ವಾಸಿ ಎಂದು ವ್ಯಂಗ್ಯವಾಡಿದ್ದವು. 600 ಕೋಟಿಯ ಕಾರ್ಟೂನ್‌ ಸಿನಿಮಾ ಎಂಬ ಮೀ‌ಮ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಟೀಸರ್‌ ಬಿಡುಗಡೆಯಾಗುವ ಹೊತ್ತಿಗೆ ʼಆದಿಪುರುಷ್‌ʼ ಸಿನಿಮಾದ ಶೂಟಿಂಗ್‌ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿದ್ದವು. 2023ರ ಜನವರಿ 12ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರಲಿದೆ ಎಂದು ಘೋಷಿಸಿಯೂ ಆಗಿತ್ತು. ಕೇವಲ ಟೀಸರ್‌ ನೋಡಿದ ಜನ ಈ ರೀತಿ ಟೀಕಿಸುತ್ತಿರುವಾಗ ಸಿನಿಮಾ ಬಿಡುಗಡೆ ಮಾಡಿದರೆ ಕಥೆ ಮುಗಿದೇ ಹೋಗುತ್ತದೆ ಎಂಬುದು ಓಂ ರಾವತ್‌ಗೆ ಸ್ಪಷ್ಟವಾಗಿತ್ತು. ಟೀಕೆಗಳ ಬೆನ್ನಲ್ಲೇ ಮತ್ತೊಮ್ಮೆ ವಿಫಲ ಪ್ರಯತ್ನಕ್ಕೆ ಕೈ ಹಾಕಿದ ನಿರ್ದೇಶಕ, “ನಮ್ಮದು 3ಡಿ ಸಿನಿಮಾ, ಮೊಬೈಲ್‌ನಲ್ಲಿ ಟೀಸರ್‌ ನೋಡಿದರೆ ವಿಷ್ಯುವಲ್‌ ಟ್ರೀಟ್‌ ಸಿಗಲ್ಲ, ಟೀಕಿಸುವವರು ಥಿಯೇಟರ್‌ಗೆ ಬಂದು ಟೀಸರ್‌ ನೋಡಿ ಗೊತ್ತಾಗುತ್ತೆ” ಎಂದು ಕರೆ ನೀಡಿದರು. ಅದರಂತೆ ಥಿಯೇಟರ್‌ಗೆ ಹೋದ ಜನ ಮತ್ತೊಮ್ಮೆ ಇಡೀ ಚಿತ್ರತಂಡಕ್ಕೆ ತರಾಟೆ ತೆಗೆದುಕೊಂಡರು. ಅಲ್ಲಿಗೆ ʼಆದಿಪುರುಷ್‌ʼ ಕಥೆ ಮುಗಿದಿತ್ತು. ಅದಾದ ಮೇಲೆ ನಡೆದಿದ್ದೆಲ್ಲವೂ ತ್ಯಾಪೆ ಹಾಕುವ ಕೆಲಸ.

ಟೀಕೆಗಳ ಬೆನ್ನಲ್ಲೇ ವರಸೆ ಬದಲಿಸಿದ್ದ ಓಂ ರಾವತ್‌

ಟೀಕೆಗಳ ಪ್ರವಾಹಕ್ಕೆ ಅಂಜಿದ ಓಂ ರಾವತ್‌ ತಕ್ಷಣವೇ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದರು. ಅಲ್ಲಿಯ ವರೆಗೂ, “ರಾಮಾಯಣವನ್ನು ದೊಡ್ಡ ಕ್ಯಾನ್ವಸ್‌ನಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ʼಆದಿಪುರುಷ್‌ʼ ತಾಂತ್ರಿಕವಾಗಿ ದಾಖಲಾರ್ಹ ಸಿನಿಮಾ ಆಗಲಿದೆ. 3ಡಿ, ವಿಎಫ್‌ಎಕ್ಸ್‌ ಎಫೆಕ್ಟ್‌ಗಳು ಹೊಸ ಅನುಭವ ನೀಡಲಿವೆ” ಎಂದು ಹೇಳಿಕೊಂಡು ಬಂದಿದ್ದ ಓಂ ರಾವತ್‌ ಇದ್ದಕ್ಕಿದ್ದಂತೆ ಹೋದಲ್ಲಿ ಬಂದಲ್ಲೆಲ್ಲ ʼಜೈ ಶ್ರೀರಾಮ್‌ʼ ಎನ್ನಲು ಶುರುವಿಟ್ಟುಕೊಂಡರು. ” ʼಆದಿಪುರುಷ್‌ʼ ಭಕ್ತಿಪ್ರಧಾನ ಚಿತ್ರ, ಈ ಚಿತ್ರವನ್ನು ಭಕ್ತಿಪೂರ್ವಕವಾಗಿ ನೋಡಿ ಎಂದು ಕರೆ ಕೊಟ್ಟರು. ಆ ಮೂಲಕ ಶ್ರೀರಾಮ, ರಾಮಾಯಣ ಮತ್ತು ಹಿಂದೂ ಧರ್ಮವನ್ನು ಮುಂದಿರಿಸಿಕೊಂಡು ಇಡೀ ಚಿತ್ರತಂಡ ಟೀಕಾಕಾರರಿಂದ ರಕ್ಷಣೆ ಪಡೆಯುವ ತಂತ್ರ ರೂಪಿಸಿತು. ಈ ನಡುವೆ ತಕ್ಕ ಮಟ್ಟಿಗೆ ಚಿತ್ರದ ವಿಷ್ಯುವಲ್‌ ಎಫೆಕ್ಟ್‌ಗಳ ರಿಪೇರಿ ಕೆಲಸ ಕೂಡ ನಡೆಯಿತು.

ಧರ್ಮದ ಹೆಸರಿನಲ್ಲಿ ಈ ಸಿನಿಮಾದ ಪ್ರಚಾರ ಮಾಡುವ ಪಿಆರ್‌ ಕೆಲಸ ಕೂಡ ವೇಗ ಪಡೆದಿತ್ತು. ಕಳಪೆ ಎಂಬ ಲೇಬಲ್‌ ಹೊತ್ತುಕೊಂಡಿದ್ದ ʼಆದಿಪುರುಷ್‌ʼ ಚಿತ್ರಕ್ಕೆ ಧಕ್ಕೆಯಾಗದಂತೆ ಧರ್ಮದ ಕವಚ ಹೊದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರದ ಪ್ರಚಾರ ನೀಡಲಾಯ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚವ್ಹಾಣ್‌, ಹರ್ಯಾಣದ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಹೀಗೆ ಬಿಜೆಪಿಯ ಪ್ರಭಾವಿ ನಾಯಕರ ಕೃಪಾಕಟಾಕ್ಷ ಈ ಚಿತ್ರದ ಮೇಲಿತ್ತು ಎಂಬುದು ಗಮನಿಸಬೇಕಾದ ಅಂಶ.

ಸ್ವತಃ ಓಂ ರಾವತ್‌ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚಿತ್ರಕ್ಕೆ ಬೆಂಬಲ ಕೋರಿದ್ದರು. ಧರ್ಮವನ್ನು ಬಳಸಿ ಜನರನ್ನು ಸೆಳೆಯಲು ಅಯೋಧ್ಯೆ, ತಿರುಪತಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಈ ಚಿತ್ರದ ಟೀಸರ್‌, ಟ್ರೈಲರ್‌ಗಳನ್ನು ಬಿಡುಗಡೆ ಮಾಡಲಾಯ್ತು. ಅಷ್ಟೇ ಯಾಕೆ, ಆದಿಪುರುಷ್‌ ಪ್ರದರ್ಶನ ಕಾಣುವ ಪ್ರತಿ ಥಿಯೇಟರ್‌ನಲ್ಲೂ ಹನುಮಂತನಿಗಾಗಿ ಪ್ರತ್ಯೇಕ ಕುರ್ಚಿಯನ್ನು ಕಾಯ್ದಿರಿಸುವ ಮೂಲಕ ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಮೂಲ ರಾಮಾಯಣದ ಕಥೆಯನ್ನೇ ಚಾಚು ತಪ್ಪದೆ ದೃಶ್ಯರೂಪಕ್ಕೆ ಇಳಿಸಿದ್ದೇವೆ ಎಂದು ಈಗ ವಿವಾದಲ್ಲಿ ಸಿಲುಕಿರುವ ಚಿತ್ರ ಸಾಹಿತಿ ಮನೋಜ್‌ ಮುಂತಾಶಿರ್‌ ಖಚಿತತೆಯಿಂದ ಹೇಳಿದ್ದರು. ಚಿತ್ರತಂಡದ ಈ ಎಲ್ಲ ಪ್ರಚಾರದ ಗಿಮಿಕ್‌ಗಳು ಯಶಸ್ಸು ಕಂಡವು ಎಂಬುದು ಅಚ್ಚರಿ ವಿಷಯವೇನಲ್ಲ. ಓಂ ರಾವತ್‌ ಸಾಕ್ಷ್ಯಾತ್‌ ರಾಮಾಯಣದ ದರ್ಶನ ಮಾಡಿಸುತ್ತಾರೆ ಎಂದು ನಂಬಿದ ಬಲಪಂಥೀಯರು ಚಿತ್ರಕ್ಕೆ ಭರಪೂರ ಬೆಂಬಲವನ್ನು ಕೂಡ ನೀಡಿದರು. ಗಮನಿಸಲೇಬೇಕಾದ ಅಂಶ ಎಂದರೆ ತಾವು ಆದಿಪುರುಷ್‌ ಸಿನಿಮಾ ಮಾಡಲಿಕ್ಕೆ ಪ್ರಧಾನಿ ಮೋದಿ ಅವರೇ ಸ್ಫೂರ್ತಿ ಎಂದಿದ್ದರು ಓಂ ರಾವತ್‌.

ಮಾಡಿದ್ದುಣ್ಣೋ ಮಾರಾಯ

ಓಂ ರಾವತ್‌, ಮನೋಜ್‌ ಮುಂತಾಶಿರ್‌, ಪ್ರಭಾಸ್‌, ಕ್ರಿತಿ ಸನೋನ್‌ ಹೀಗೆ ಚಿಂತ್ರತಂಡದ ಭಾಗವಾಗಿರುವ ಎಲ್ಲರೂ ಜೈ ಶ್ರೀರಾಮ್‌ ಎನ್ನುತ್ತಾ ನಮ್ಮದು ಮೂಲ ರಾಮಾಯಣದ ಕಥೆ ಎಂದು ಬಿಂಬಿಸಿದ ಮೇಲೆ ಕೇಳಬೇಕೆ, ವಾರಕ್ಕೂ ಮೊದಲೇ ಮುಂಗಡ ಟಿಕೆಟ್‌ ಕಾಯ್ದಿರಿಸಿದ ರಾಮ ಭಕ್ತರು ಆರತಿ ತಟ್ಟೆ ಸಮೇತ ಥಿಯೇಟರ್‌ಗೆ ಬಂದು ಹನುಮಂತನಿಗಾಗಿ ಖಾಲಿ ಇರಿಸಿದ್ದ ಖು‌ರ್ಚಿಗೆ ಪೂಜೆ ಮಾಡಿ ಸಿನಿಮಾ ನೋಡಿದರು. ಮೊದಲ ಶೋ ಮುಗಿಯುವುದೇ ತಡ ಆದಿಪುರುಷ್‌ ಸಿನಿಮಾ ಬ್ಯಾನ್‌ ಮಾಡಿ ಎಂಬ ಕೂಗು ಶುರುವಾಗಿತ್ತು.

ಅಸಲಿ ರಾಮಾಯಣಕ್ಕೂ ಆದಿಪುರುಷ್‌ ಚಿತ್ರದಲ್ಲಿರುವ ಕತೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಅಭಿಪ್ರಾಯಗಳು ವ್ಯಾಪಾಕವಾಗಿ ಕೇಳಿ ಬರತೊಡಗಿದವು. ಕೆಲವರು ರಾಮನನ್ನು ಏಸುಕ್ರಿಸ್ತನ ರೀತಿ ತೋರಿಸಲಾಗಿದೆ ಎಂದರೆ, ಇನ್ನು ಕೆಲವರು ಸೀತಾಮಾತೆಯ ಎದುರು ಹನುಮಂತನೇ ದೈತ್ಯ ಎಂಬಂತೆ ತೋರಿಸಿದ್ದಾರೆ ಎಂದರು. ಸೀತೆಯ ಪಾತ್ರವನ್ನು ಘನತೆಯಿಂದ ತೋರಿಸಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದವು. ಬ್ರಾಹ್ಮಣನಾದ ರಾವಣನ ಕೈಯಲ್ಲಿ ಮಾಂಸದ ತುಂಡನ್ನು ಹಿಡಿಸಲಾಗಿದೆ ಎಂದು ಸವರ್ಣೀಯರು ಆಕ್ರೋಶ ವ್ಯಕ್ತಪಡಿಸಿದರು. ರಾವಣ ಸಂಹಾರದ ಕುರಿತ ಸನ್ನಿವೇಶಗಳು ಕೂಡ ಗೊಂದಲಮಯವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದವು. ಹನುಮಂತನ ಬಾಯಲ್ಲಿ ʼಕಪಡಾ ತೇರೆ ಬಾಪ್‌ ಕಾ, ತೇಲ್‌ ತೇರೆ ಬಾಪ್‌ ಕಾ, ಜಲೇಗಿ ಭೀ ತೆರೆ ಬಾಪ್‌ ಕಿʼ ಎಂಬ ಕೀಳುಮಟ್ಟದ ಸಂಭಾಷಣೆಯನ್ನು ಹೇಳಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ಬಲಪಂಥೀಯ ಸಂಘಟನೆಗಳು ದೇಶವ್ಯಾಪಿಯಾಗಿ ಪ್ರತಿಭಟನೆ ನಡೆಸುತ್ತಿವೆ. ʼಸೀತೆ ಭಾರತದ ಮಗಳುʼ ಎಂಬ ಸಂಭಾಷಣೆಯ ಕಾರಣಕ್ಕೆ ನೇಪಾಳದಲ್ಲಿ ಆದಿಪುರುಷ್‌ ಚಿತ್ರವನ್ನೇ ಬ್ಯಾನ್‌ ಮಾಡಲಾಗಿದೆ. ಆದಿಪುರುಷ್‌ ತಂಡ ಮಾಡಿದ ಅವಾಂತರಕ್ಕೆ ನೇಪಾಳದಲ್ಲಿ ಎಲ್ಲ ಭಾರತೀಯ ಸಿನಿಮಾಗಳ ಮೇಲೂ ನಿಷೇಧ ಹೇರಲಾಗಿದೆ.

ಕ್ಷತ್ರೀಯ ಕರ್ಣಿ ಸೇನಾ ತರಹದ ಬಲಪಂಥೀಯ ಸಂಘಟನೆಗಳು, ಕೀಳು ಮಟ್ಟದ ಸಂಭಾಷಣೆ ಬರೆದ ಮನೋಜ್‌ ಮುಂತಾಶಿರ್‌ ಅವರನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆ ಹಾಕಿವೆ. ಇದಾದ ಬೆನ್ನಲ್ಲೇ ಈ ಚಿತ್ರ ಸಾಹಿತಿಗೆ ಮುಂಬೈ ಪೊಲೀಸರು ಭಧ್ರತೆಯನ್ನು ಕೂಡ ಒದಗಿಸಿದ್ದಾರೆ. ರಾಮಾಯಣದ ಘನತೆಗೆ ಧಕ್ಕೆಯುಂಟು ಮಾಡಿದ ನಿರ್ದೇಶಕ ಓಂ ರಾವತ್‌ಗೂ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಎದುರಾಗಿದೆ. ಸದ್ಯ ರೊಚ್ಚಿಗೆದ್ದಿರುವ ಬಲಪಂಥೀಯರು ಧರ್ಮವನ್ನು ಪ್ರಚಾರದ ಮಾಧ್ಯಮವಾಗಿ ಬಳಸಿಕೊಂಡು ಯಾಮಾರಿಸಿದ ಚಿತ್ರತಂಡಕ್ಕೆ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಗುಂಪಾಗಿ ಸಿನಿಮಾ ಹಾಲ್‌ಗೆ ನುಗ್ಗಿ ಆದಿಪುರುಷ್‌ ಪ್ರದರ್ಶನ ಮಾಡದಂತೆ ಪ್ರತಿಭಟಿಸುತ್ತಿದ್ದಾರೆ. ಚಿತ್ರತಂಡ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಆದಿಪುರುಷ್‌ ಚಿತ್ರದ ಪ್ರಚಾರ ಮಾಡಿದ್ದೇ ಈ ಎಲ್ಲ ವಿವಾದ, ಬಲಪಂಥೀಯರ ವಿರೋಧ ಮತ್ತು ಪ್ರತಿಭಟನೆಗಳಿಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

ಹನುಮಂತ ದೇವರೇ ಅಲ್ಲ ಎಂದ ಮನೋಜ್‌ ಮುಂತಾಶಿರ್‌

ಇಷ್ಟೆಲ್ಲ ವಿರೋಧ ವ್ಯಕ್ತವಾಗುತ್ತಿದ್ದರೂ ಆದಿಪುರುಷ್‌ ಚಿತ್ರತಂಡ ಮಾತ್ರ ಹಿಂದೂಗಳ ಕ್ಷಮೆಯಾಚಿಸುವ ಪ್ರಯತ್ನ ಮಾಡಿಲ್ಲ. ಸಿನಿಮಾ ಬಿಡುಗಡೆಯಾಗುವ ಮೊದಲು, “ಸಾಕ್ಷ್ಯಾತ್‌ ರಾಮಾಯಣದ ಕಥೆಯನ್ನೇ ತೆರೆಗೆ ಅಳವಡಿಸಿದ್ದೇವೆ” ಎಂದಿದ್ದ ಚಿತ್ರ ಸಾಹಿತಿ ಮನೋಜ್‌ ಮುಂತಾಶಿರ್‌, ಈಗ ಟೀಕೆಗಳು ಕೇಳಿಬಂದ ನಂತರ “ನಾವು ರಾಮಾಯಣದಿಂದ ಪ್ರೇರಿತರಾಗಿ ಆದಿಪುರುಷ್‌ ಸಿನಿಮಾ ಮಾಡಿದ್ದೇವಷ್ಟೇ” ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಹನುಮಂತನ ಕುರಿತ ಸಂಭಾಷಣೆಗಳ ಬಗ್ಗೆ ಪ್ರತಿಕ್ರಿಯಿಸಿ, “ಹನುಮಂತ ದೇವರಲ್ಲ, ಆತ ರಾಮನ ಭಕ್ತ. ನಾವುಗಳೇ ಆತನನ್ನು ದೇವರನ್ನಾಗಿ ಮಾಡಿದ್ದೇವೆ” ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X