ಖ್ಯಾತ ಸಂಗೀತ ಸಂಯೋಜಕ, ಗಾಯಕ ಇಳಯರಾಜ ಅವರು ಮಂಗಳವಾರ (ಜೂನ್ 3) ತಮ್ಮ 82ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರು ‘ನಾನು ಕನ್ನಡಿಗ, ನನ್ನಮ್ಮ ಇಲ್ಲಿಯೇ ಇರೋದು, ನಾನು ಕರ್ನಾಟಕದವನು’ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ, ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಚರ್ಚೆಗಳು ನಡೆಯುತ್ತಿವೆ. ಕಮಲ್ ಹಾಸನ್ ಕ್ಷಮೆಯಾಚಿಸಬೇಕೆಂದು ಒತ್ತಾಯಗಳು ಹೇಳಿಬರುತ್ತಿವೆ. ಆದರೆ, ಕಮಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಇಳಯರಾಜ ಅವರು ಕನ್ನಡದ ಬಗ್ಗೆ ಮಾತನಾಡಿದ್ದ ವಿಡಿಯೋ ಅವರ ಜನ್ಮದಿನದಂದು ಮುನ್ನೆಲೆಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋ ಖಾಸಗಿ ವಾಹಿನಿಯೊಂದಕ್ಕೆ ಇಳಯರಾಜ ಅವರು ಸಂದರ್ಶನ ನೀಡಿದ್ದ ಸಮಯದ್ದಾಗಿದೆ. ವಿಡಿಯೋದಲ್ಲಿ, ನಿರೂಪಕರು ಇಳಯರಾಜ ಅವರನ್ನು ಅತಿಥಿ ಎಂದಾಗ ಪ್ರತಿಕ್ರಿಯಿಸುವ ಗಾಯಕ, “ನಾನು ಅತಿಥಿ ಅಲ್ಲ. ನಾನು ಕನ್ನಡದವನು. ನನ್ನ ಅಮ್ಮ ಕೊಲ್ಲೂರು ಮೂಕಾಂಬಿಕೆ ಕರ್ನಾಟಕದಲ್ಲೇ ಇರೋದು. ನನ್ನ ಊರು ಇದು. ನಾನು ಇಲ್ಲಿಯ ಮಗ” ಎಂದು ಹೇಳಿದ್ದಾರೆ.
“ಸಂಗೀತ ಕ್ಷೇತ್ರದಲ್ಲಿ ನಾನು ಸಹಾಯಕ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಜಿ.ಕೆ ವೆಂಕಟೇಶ್ ಜೊತೆ ಕೆಲಸ ಮಾಡಿದ್ದೇನೆ. ನನ್ನ ಕನ್ನಡ ಹಾಡುಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಫಲಶ್ರುತಿ | ಗುಲಬರ್ಗಾ ವಿವಿ ಕರ್ಮಕಾಂಡ; ಸಿಒಡಿ ತನಿಖೆಗೆ ಸಿಂಡಿಕೇಟ್ ನಿರ್ಧಾರ
ಇತ್ತೀಚೆಗೆ, ಮೇ 24ರಂದು ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, “ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ” ಎಂದು ಹೇಳಿದ್ದರು. ಅವರ ಹೇಳಿಕೆ ವಿರುದ್ಧ ಕರ್ನಾಟಕದಲ್ಲಿ ರಾಜಕಾರಣಿಗಳು, ಸಾಹಿತಿಗಳು ಹಾಗೂ ನಟ-ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ರಚಿತಾ ರಾಮ್ ಅವರು, “ತಪ್ಪಾದರೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ?” ಎಂದು ಕಮಲ್ ಹಾಸನ್ ಅವರನ್ನು ಕೇಳಿದ್ದಾರೆ. ನಟ ಶಿವರಾಜ್‌ಕುಮಾರ್ ಅವರು, “ಕನ್ನಡಕ್ಕಾಗಿ ಹೋರಾಡುತ್ತೇವೆ, ಬೇಕಿದ್ದರೆ ಸಾಯುತ್ತೇವೆ” ಎಂದಿದ್ದಾರೆ.
ಇದಕ್ಕೂ ಹಿಂದೆ, ಭಾರತ-ಪಾಕ್ ದಾಳಿ ಸಂದರ್ಭದಲ್ಲಿ ಗಾಯಕ ಸೋನು ನಿಗಂ ಅವರು ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯದ ಮಾತನಾಡಿದ್ದರು. ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿದ್ದರು.