ಪಿಕ್ಸರ್ ಅವರ ‘ಇನ್ಸೈಡ್ ಔಟ್’ (inside out) ಬಂದು ಒಂಬತ್ತು ವರ್ಷಗಳೇ ಉರುಳಿದೆ. ಮನಸ್ಸಿನಾಳದ ಭಾವನೆಗಳ ಕುರಿತು ಅರಿಯಲು ಇನ್ಸೈಡ್ ಔಟ್‌ನಷ್ಟು ಒಳ್ಳೆಯ ಸಿನಿಮಾ ಮತ್ತೊಂದಿಲ್ಲ ಅನ್ನೋದು ನನ್ನ ಅನಿಸಿಕೆ. ಚಿತ್ರದ ನಾಯಕಿ ಪುಟ್ಟ ರೈಲಿ ತನ್ನ ಮೂಲ ಭಾವನೆಗಳಾದ ಭಯ, ಕ್ರೋಧ, ಹೇಸಿಗೆ, ದುಃಖ ಮತ್ತು ಖುಷಿಯ ಜೊತೆಗೆ ಜಂಜಾಟವಾಡುತ್ತಾ ಹೊಸ ಊರಿಗೆ/ವಾತಾವರಣಕ್ಕೆ ಹೊಂದಿಕೊಳ್ಳುವ, ಸಾಮಾಜಿಕವಾಗಿ ತೊಡಗಿಕೊಳ್ಳುವ, ಸ್ನೇಹ ಬೆಳೆಸುವ ಕಥಾ ಹಂದರವೆ ಇನ್ಸೈಡ್ ಔಟ್ ಮೊದಲ ಭಾಗ.
ಚಿತ್ರಕ್ಕೆ ಮಾಡಿರುವ ಸಂಶೋಧನೆ ಅಚ್ಚರಿ ಮೂಡಿಸುವಂತದ್ದು. ಮನುಷ್ಯನ ಮೆದುಳಲ್ಲಿ ಮೂಡುವ ನವ ಬೆಸುಗೆಗಳು (ನ್ಯೂರಲ್ ಕನೆಕ್ಷನ್ಸ್) ಮತ್ತು ನ್ಯೂರೋ ಪ್ಲಾಸ್ಟಿಸಿಟಿ ಬಗ್ಗೆ ತಿಳಿಯಬೇಕೆಂದರೆ ಒಮ್ಮೆ ‘ಇನ್ಸೈಡ್ ಔಟ್’ ನೋಡಿ. ನಮ್ಮ ಮೆದುಳು ಒಂದು ಬೃಹತ್ ವಿಸ್ಮಯ ಅದು ನವನವೀನ ಬೆಸುಗೆಗಳನ್ನು ಬೆಳೆಸಿಕೊಳ್ಳುತ್ತಲೇ ಇರುತ್ತದೆ, ರೂಪ ಆಕಾರಗಳಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತಲೆ ಇರುತ್ತದೆ. ನಮ್ಮ ಅನುಭವಗಳು ಮೆದುಳಿನ ಹೊಸ ಚಿಗುರಿಗೆ ಕಾರಣವಾಗುತ್ತಲೇ ಇರುತ್ತದೆ. ಈ ಚಿಗುರು ಎಳೆಯರಲ್ಲಿ ನೂರಾರು ಕವಲೊಡೆದರೆ, ಮನುಷ್ಯನಿಗೆ ವಯಸ್ಸಾದಂತೆ ಚಿಗುರು ಬೆಳೆದು ಕೊಂಬೆಯಾಗಿ ಗಡಸಾಗುತ್ತವೆ. ವಯಸ್ಸಾದಂತೆ ನಮ್ಮ ನಿಲುವಿಗೆ ನಾವು ಬದ್ದರಾಗುತ್ತೇವೆ, ಅವನ್ನೇ ಪರಮ ಸತ್ಯವೆಂದು ನಂಬುತ್ತೇವೆ, ಕಲಿಕೆ ನಿಲ್ಲುತ್ತದೆ. ಇದೆಲ್ಲವನ್ನೂ ‘ಇನ್ಸೈಡ್ ಔಟ್’ನಲ್ಲಿ ತೋರಿಸಿಲ್ಲವಾದರು, ಮೆದುಳು ಕಾರ್ಯನಿರ್ವಹಿಸುವ ಪರಿಯನ್ನು ಮಕ್ಕಳ ಮನಮುಟ್ಟುವ ಹಾಗೆ ತೋರಿಸಲಾಗಿದೆ.
‘ಇನ್ಸೈಡ್ ಔಟ್’ ಚಿತ್ರದ ಮೇಲೆ ಸಾಕಷ್ಟು ಬೌದ್ಧ ಧರ್ಮದ ಚಿಂತನೆಗಳ ಗಾಢ ಛಾಯೆಯಿದೆ ಅನ್ನುವುದು ನನ್ನ ಅಭಿಪ್ರಾಯ. ಬೌದ್ಧ ಚಿಂತನೆಯಲ್ಲಿ ಪ್ರಜ್ಞೆಯ ನಾಲ್ಕು ಪದರಗಳ ಬಗ್ಗೆ ಪ್ರಸ್ತಾಪವಿದೆ. ಬುದ್ಧಿ (ಮೈಂಡ್ ಕಾನ್ಷಿಯಸ್‌ನೆಸ್), ಇಂದ್ರೀಯ ಪ್ರಜ್ಞೆ (ಸೆನ್ಸ್ ಕಾನ್ಷಿಯಸ್‌ನೆಸ್), ಅರಿವು/ಆಲಯ (ಸ್ಟೋರ್ ಕಾನ್ಷಿಯಸ್‌ನೆಸ್) ಮತ್ತು ಮನಸ್.
ವಿಶ್ಲೇಷಣೆ ಮಾಡುವ, ಯೋಜನೆ ರೂಪಿಸುವ, ನಿರ್ಧರಿಸುವ, ಚಿಂತೆ ಮಾಡುವುದೇ ಮೈಂಡ್ ಕಾನ್ಷಿಯಸ್‌ನೆಸ್, ದೇಹದ ಒಟ್ಟು ತೂಕದಲ್ಲಿ ಕೇವಲ 2% ಭಾರವಿರುವ ಮೆದುಳು, ದೇಹದ 20% ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಮೈಂಡ್ ಕಾನ್ಷಿಯಸ್‌ನೆಸ್ ಇದಕ್ಕೆ ಪ್ರಮುಖ ಕಾರಣ. ನೋಡುವ, ಆಲಿಸುವ, ರುಚಿ ಆಸ್ವಾದಿಸುವ, ಸ್ಪರ್ಶಿಸುವ, ವಾಸನೆಯಿಂದ ಮೂಡುವ ಪ್ರಜ್ಞೆ- ಇಂದ್ರೀಯ ಪ್ರಜ್ಞೆ. ಇವೆರಡನ್ನೂ ಮೀರಿದ ಪ್ರಜ್ಞೆ ಅರಿವು ಅಥವಾ ಸ್ಟೋರ್ ಕಾನ್ಷಿಯಸ್‌ನೆಸ್. ಮಹಾಯಾನ ಪಂಥದಲ್ಲಿ ಸ್ಟೋರ್ ಕಾನ್ಷಿಯಸ್‌ನೆಸ್ಅನ್ನು ಆಲಯ ಎಂದು ಕರೆಯಲಾಗುತ್ತದೆ.
ಈ ಆಲಯವನ್ನು ಒಂದು ಕ್ಷಣ ಸಂಗ್ರಹಾಲಯವೆಂದುಕೊಳ್ಳೋಣ. ಸಂಗ್ರಹಾಲಯ ಒಂದು ಬೃಹತ್ ಕಟ್ಟಡ, ಹಿಂದಿನ ಪೀಳಿಗೆಯವರು, ಪೂರ್ವಜರು ಬಿಟ್ಟು ಹೋದ ವಸ್ತುಗಳಿಲ್ಲಿ ಸಂಗ್ರಹವಾಗುತ್ತವೆ, ಸಂಗ್ರಹವಾಗುವ ಪ್ರಕ್ರಿಯೆ ನಿರಂತರ. ನಮ್ಮ ಆಲೋಚನೆಗಳು ಪೂರ್ವಜರು ನೀಡಿದ ಬಳುವಳಿ ಇರಬಹುದು, ನಾವು ಕೂಡ ನಿರಂತರವಾಗಿ ಈ ಪ್ರಜ್ಞೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತೇವೆ. ಸಂಗ್ರಹಾಲಯದಲ್ಲಿ ಬರಿಯ ದ್ವೇಷ, ಕ್ರೌರ್ಯದ ಕುರುಹುಗಳನ್ನೇ ಇಟ್ಟರೆ ಮುಂದಿನ ಪೀಳಿಗೆಗೂ ಅದೇ ದಾಟುತ್ತದೆ. ದ್ವೇಷದ, ಮತ್ಸರದ ಜಾಗದಲ್ಲಿ ಕರುಣೆ, ಪ್ರೀತಿ ಬೆಳೆದರೆ ಮುಂದಿನ ಪೀಳಿಗೆಯಲ್ಲಿ ಒಲವಿನ ಬಳ್ಳಿಗಳು ಎಲ್ಲೆಡೆ ಬೆಳೆಯುತ್ತವೆ.
ಮತ್ತೊಂದು ಉದಾಹರಣೆ ನೋಡೋಣ – ನೀವು ಒಂದು ಬಟ್ಟೆ ಅಂಗಡಿಗೆ ಹೋಗಿ ಒಂದು ಅಂಗಿ ತೆಗೆದುಕೊಳ್ಳುವಾಗ ಖಂಡಿತವಾಗಿ ಇಂದ್ರೀಯ ಪ್ರಜ್ಞೆ ಬಳಸುತ್ತೀರಿ, ಬೆಲೆಯನ್ನು ಗಮನಿಸಿ, ಹೋಲಿಕೆ ಮಾಡಿ, ವಿಶ್ಲೇಷಿಸಿ ಅಂಗಿ ಖರೀದಿ ಮಾಡುತ್ತೀರಿ. ಆದ್ರೆ ನಮ್ಮ ಮೈಮೇಲೆ ಏನು ಚೆನ್ನಾಗಿ ಕಾಣಬಹುದು, ಯಾವ ಬಣ್ಣ ನನಗೆ ಸೂಕ್ತ, ಯಾವ ಅಂಗಿ ಹಾಕಿದ್ದಾಗ ಜನ ನನ್ನ ಮೆಚ್ಚಿದ್ದರು ಎಂಬೆಲ್ಲಾ ವಿಷಯಗಳು ಆಲಯ ಪ್ರಜ್ಞೆಯಿಂದ ನಿರ್ಧಾರಿತವಾಗಿರುತ್ತದೆ.
ನಿಸ್ಸಂದೇಹವಾಗಿ ಆಲಯ ಪ್ರಜ್ಞೆ ಅರಿವಿನ ಮತ್ತು ಬದಲಾವಣೆ ಮಾರ್ಗವನ್ನು ಸೂಚಿಸುತ್ತದೆ. ಆದ್ರೆ ಈ ಆಲಯ ಪ್ರಜ್ಞೆಯಲ್ಲಿ ಅಜ್ಞಾನ, ಭ್ರಮೆ, ಹಗೆ, ಅಸೂಯೆ, ಭಯ ಮನೆ ಮಾಡಿದರೆ ಮನುಷ್ಯನನ್ನು ಪತನದೆಡೆಗೆ ಕರೆದೊಯ್ಯುತ್ತದೆ. ಆಲಯ ಪ್ರಜ್ಞೆ ಭ್ರಷ್ಟವಾದಾಗ ಮನುಷ್ಯ ಸ್ವಾರ್ಥಿಯಾಗುತ್ತಾನೆ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಭಾರತೀಯ ಚಿತ್ರರಂಗ ತನ್ನ ‘ಜಾತ್ಯತೀತ’ ಐಡೆಂಟಿಟಿಯನ್ನೇ ಮರೆಯುತ್ತಿದೆಯೇ?
‘ಇನ್ಸೈಡ್ ಔಟ್’ ಭಾಗ ಒಂದರಲ್ಲಿ ಖುಷಿ, ದುಃಖ, ಭಯ, ಹೇಸಿಗೆ ಮತ್ತು ಕ್ರೋಧವನ್ನು ನಿಭಾಯಿಸುವ ಕಲೆ ಕಲಿತ ಚಿತ್ರದ ನಾಯಕಿ ರೈಲಿ, ಭಾಗ ಎರಡರಲ್ಲಿ ಪ್ರೌಢಾವಸ್ಥೆ ತಲುಪಿ ಬದುಕಿನ ಆ ಅಂತದಲ್ಲಿ ಸಹಜವಾಗಿ ಸ್ಫೋಟಗೊಳ್ಳುವ ಆತಂಕ, ಅಸೂಯೆ, ಮುಜುಗರ, ಜಡತೆ, ವಿಷಣ್ಣತೆಯನ್ನು ಮೀರುವ ಸವಾಲನ್ನು ಎದುರಿಸುತ್ತಾಳೆ. ಮೈಂಡ್ ಮತ್ತು ಆಲಯ ಪ್ರಜ್ಞೆಯ ಆಳದ ಅರಿವು ಈ ಚಿತ್ರದಲ್ಲಿದೆ.
ಮೆದುಳ ಒಳಗಿನ ಮೈಂಡ್ ಕಾನ್ಷಿಯಸ್‌ನೆಸ್ ಮತ್ತು ಸ್ಟೋರ್ ಕಾನ್ಷಿಯಸ್‌ನೆಸ್ ನಡುವಿನ ತೀವ್ರ ಕದನವನ್ನು ಇಷ್ಟು ರೋಚಕವಾಗಿ ಪುಟ್ಟ ಮಕ್ಕಳಿಗೂ ಇಷ್ಟವಾಗುವ ರೀತಿಯಲ್ಲಿ ತೋರಿಸಲು ಬಹುಶಃ ಪಿಕ್ಸರ್ ಸ್ಟುಡಿಯೋದವರಿಗೆ ಮಾತ್ರ ಸಾಧ್ಯ. ಪ್ರೌಢಾವಸ್ಥೆಯಲ್ಲಿ ಮಕ್ಕಳು ಎದುರಿಸುವ ತಳಮಳಗಳನ್ನು ನಮ್ಮ ಮುಂದಿಡಲು ‘ಇನ್ಸೈಡ್ ಔಟ್- 2’ ಬಂದಿದೆ. ‘ಇನ್ಸೈಡ್ ಔಟ್-1’ ಬಂದ ಒಂಬತ್ತು ವರುಷಗಳ ನಂತರ ಈ ಚಿತ್ರ ಬಂದಿದೆ. ಒಂಬತ್ತು ವರುಷ ತೆಗೆದುಕೊಂಡಿದ್ದೇಕೆ ಅಂತೀರಾ? ಭಾಗ ಒಂದರ ಪುಟ್ಟ ರೈಲಿ ಬೆಳೆದು ದೊಡ್ಡವಳಾಗಲು ಒಂಬತ್ತು ವರ್ಷ ಬೇಕಾಯಿತು!
ದಿನನಿತ್ಯ ರಕ್ತಪಾತ, ಹಿಂಸೆ, ಯುದ್ಧ, ಕೆಟ್ಟ ರಾಜಕೀಯ, ಬರ್ಬರ ಹತ್ಯೆಯನ್ನೇ ಪರದೆಗಳಿಂದ ಸೇವಿಸುವ ಪುಟ್ಟ ಮಕ್ಕಳಿಗೆ ‘ಇನ್ಸೈಡ್ ಔಟ್ 1 ಮತ್ತು 2’ ಪೋಷಕರು ಮಕ್ಕಳೊಡನೆ ಕೂತು ತೋರಿಸಿ. ಥಿಯೇಟರಿಗೆ ಕರೆದುಕೊಂಡು ಹೋಗಿ ಪಾಪ್ಕಾರ್ನ್ ಕೊಡಿಸಿ ಚಿತ್ರ ವೀಕ್ಷಣೆಯನ್ನು ವಿಶಿಷ್ಟ ಅನುಭವವಾಗಿಸಿ. ‘ಇನ್ಸೈಡ್ ಔಟ್’ ಬದುಕುವ ಕಲೆಯನ್ನು ಹೇಳಿಕೊಡುತ್ತದೆ. ಝೆನ್ ಫಿಲಾಸಫಿ, ಮನೋಮಗ್ನತೆಯ ಸಾರ ಇದರಲ್ಲಿದೆ.
ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ‘ಬಾ ಶಡ್ಡಿಗೆ, ಕುಂಟೆ ಬಿಲ್ಲೆ ಆಡುವ’ ಅಂತ ಹೇಳಿಕೊಂಡು ಒಬ್ಬರನೊಬ್ಬರು ಅಟ್ಟಿಸಿಕೊಂಡು ಓಡುತ್ತಿದ್ದನ್ನು ನೋಡಿ ಒಂದು ಕ್ಷಣ ದಿಗಿಲಾಯಿತು. ಒಮ್ಮೆ ಇವರನ್ನೆಲ್ಲಾ ಕೂಡಿ ಹಾಕಿ, ತಿನ್ನಲು ಸಿಹಿ ಕೊಟ್ಟು ಇನ್ಸೈಡ್ ಔಟ್, ಫೈಂಡಿಂಗ್ ನೆಮೊ, ಎನ್ಕ್ಯಾಂಟೊ, ಸ್ಪಿರಿಟ್, ಮೂವಾನ, ಫ್ರೋಜನ್, ಲಯನ್ ಕಿಂಗ್ 1.5 ತೋರಿಸಿಬಿಡಲೇ ಅಂತ ಅನ್ನಿಸಿತು. ಮಕ್ಕಳಿಗೆ ನಾವು ದಿನನಿತ್ಯ ಏನು ಉಣಬಡಿಸುತ್ತಿದ್ದೇವೆ ಎನ್ನುವ ಪ್ರಶ್ನೆ ನಮ್ಮೆಲ್ಲರ ಭವಿಷ್ಯ ನಿರ್ಧರಿಸುತ್ತದೆ.
‘ಇನ್ಸೈಡ್ ಔಟ್’ ಅಂದರೆ ಒಳಗಿನ ಹೊರಗೂ. ಮನುಷ್ಯನ ಜೀವನ ನಿಂತಿರುವುದೇ ಆತ್ಮಾವಲೋಕನದಲ್ಲಿ. ಆತ್ಮಾವಲೋಕನವೆಂದರೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುತ್ತಾ ನಿರಂತರವಾಗಿ ಸುಧಾರಿಸಿಕೊಳ್ಳುತ್ತಾ ಸಾಗುವುದು. ಮನಸ್ಸಿನ ಕನ್ನಡಿಯಲ್ಲಿ ಅಂತರಂಗವನ್ನು ವೀಕ್ಷಿಸುವುದು. ಅಂತರಂಗದಲ್ಲೇಳುವ ನೂರಾರು ವಿಕೃತ ಭಾವನೆಗಳ ನಡುವೆ, ಸ್ವಾರ್ಥದ ನಡುವೆ ಕೊನೆಗೂ ಒಳ್ಳೆತನ, ಪ್ರಾಮಾಣಿಕತೆ ಗೆಲುವಂತೆ ನೋಡಿಕೊಳ್ಳುವುದು. ಜಗತ್ತನ್ನು ತಿದ್ದುವ ಕೆಲಸ ನಮ್ಮನ್ನು ನಾವು ತಿದ್ದುಕೊಳ್ಳುವ ಕಾಯಕದಿಂದಲೇ ಶುರುವಾಗಲಿ… ಒಮ್ಮೆ ‘ಇನ್ಸೈಡ್ ಔಟ್-2’ ವೀಕ್ಷಿಸಿ.