ಏಪ್ರಿಲ್ 28ಕ್ಕೆ ರಾಘವೇಂದ್ರ ಸ್ಟೋರ್ಸ್ ತೆರೆಗೆ
ಸಿದ್ಧಮಂತ್ರಕ್ಕೆ ಜೋತುಬಿದ್ದ ಹಿರಿಯ ನಟ ಜಗ್ಗೇಶ್
ಹಿರಿಯ ನಟ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ ʼರಾಘವೇಂದ್ರ ಸ್ಟೋರ್ಸ್ʼ ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದೆ. ಬ್ರಹ್ಮಚಾರಿಯ ಬದುಕಿನ ಸುತ್ತ ಹಾಸ್ಯಮಯವಾಗಿ ಮೂಡಿಬಂದಿರುವ ಚಿತ್ರದ ಟ್ರೈಲರ್ ಯುಟ್ಯೂಬ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ ಜಗ್ಗೇಶ್ ಬಾಣಸಿಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಅಡುಗೆ ಮಾಡುವವನು ಎಂಬ ಕಾರಣಕ್ಕೆ ಹೆಣ್ಣು ಸಿಗದೆ ಬ್ರಹ್ಮಚಾರಿಯಾಗಿ ಉಳಿದ ವ್ಯಕ್ತಿಯ ಬದುಕಿನ ಸುತ್ತ ಹಾಸ್ಯಮಯವಾಗಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಶ್ವೇತಾ ಶ್ರೀವಾತ್ಸವ್ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟ ದತ್ತಣ್ಣ, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼನೀರ್‌ದೋಸೆʼ, ʼತೋತಾಪುರಿʼ ಸೇರಿದಂತೆ ಇತ್ತೀಚಿನ ಚಿತ್ರಗಳಲ್ಲಿ ತಾವು ನಿಭಾಯಿಸಿರುವ ರೀತಿಯ ಪಾತ್ರಗಳಿಗೆ ಜಗ್ಗೇಶ್ ಮತ್ತೆ ಮತ್ತೆ ಜೋತು ಬೀಳುತ್ತಿರುವುದು ಬೇಸರದ ಸಂಗತಿ.
ʼರಾಜಕುಮಾರʼ, ʼಯುವರತ್ನʼ ಮುಂತಾದ ಸೂಪರ್ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಖ್ಯಾತ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಈ ಹಾಸ್ಯ ಪ್ರಧಾನ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡದ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಟೈಟಲ್ ಮತ್ತು ಪಾತ್ರವರ್ಗದ ಕಾರಣಕ್ಕೆ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರ 2022 ಆಗಸ್ಟ್ 5 ರಂದು ತೆರೆಗೆ ಬರಬೇಕಿತ್ತು. ಆದರೆ, ಚಿತ್ರತಂಡ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಲಿರಿಕಲ್ ಹಾಡು ಮತ್ತು ಟ್ರೈಲರ್ ಮೂಲಕ ಸದ್ಯ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಏಪ್ರಿಲ್ 28ಕ್ಕೆ ತೆರೆಗೆ ಬರಲಿದೆ.