ಜನರು ಮಾತನಾಡಲು ಅಂಜುವ ಬಹುಮುಖ್ಯ ವಿಷಯಗಳನ್ನು ಹೇಳುವ 'ಕಾದಲಿಕ್ಕ ನೆರಮಿಲ್ಲೈ' ಚಿತ್ರದ ಭಿನ್ನ ದೃಷ್ಟಿಕೋನವನ್ನು ಮೆಚ್ಚಲೇಬೇಕು.
ಜನವರಿಯಲ್ಲಿ ಬಿಡುಗಡೆಯಾದ ನಿತ್ಯಾ ಮೆನನ್, ಜಯಂ ರವಿ ಅಭಿನಯದ ‘ಕಾದಲಿಕ್ಕ ನೆರಮಿಲ್ಲೈ'(ಪ್ರೀತಿಸಲು ಸಮಯವಿಲ್ಲ) ಸುಂದರ ಅನುಭೂತಿ ಕೊಡುವ ತಮಿಳು ಸಿನಿಮಾ. ಹೊಸತನ ಮತ್ತು ದಿಟ್ಟತನದ ರೋಮ್ಯಾಂಟಿಕ್ ಪಯಣವಿದು.
ಮೊದಲಾರ್ಧದಲ್ಲಿ ಎರಡು ವಿಭಿನ್ನ ಕಥೆಗಳು ಒಟ್ಟಿಗೆ ಸಾಗುತ್ತ, ದ್ವಿತಿಯಾರ್ಧದಲ್ಲಿ ಸಂಧಿಸುವ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ನಮ್ಮನ್ನು ಸಮಾಧಾನಪಡಿಸುವ ಸಿನಿಮಾವಿದು. ಇಂದಿನ ಆಧುನಿಕ ಕಾಲದ ಯುವಕ-ಯುವತಿಯರು, ಅವರ ಆಯ್ಕೆಗಳು, ಆದ್ಯತೆಗಳು, ಸಂಬಂಧಗಳು, ಸಹವಾಸಗಳು ಭಿನ್ನವಾಗಿರುವ ಸಮಾಜದ ಎಳೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
‘ಮದುವೆಯಾಗುತ್ತಿರುವ ಕಾರಣಕ್ಕೆ ನನ್ನ ಕೊನೆ ಹೆಸರನ್ನು ನಿನ್ನ ಹೆಸರಿನ ಜೊತೆ ಬದಲಿಸಿಕೊಳ್ಳುವುದಿಲ್ಲ ಮಿಸ್ಟರ್ ವೈ ಕ್ರೋಮೊಸೋಮ್’, ‘ಅಮ್ಮಾ, ನಾನಿನ್ನು ವರ್ಜಿನ್ ಅಂತ ಅನ್ಕೊಂಡಿದ್ದೀಯ?’, ‘ಕೆಲವೊಮ್ಮೆ ಪ್ರೀತಿಯಷ್ಟೇ ಸಾಲುವುದಿಲ್ಲ’ ಎಂಬ ಡೈಲಾಗ್‌ಗಳು ಚಿತ್ರದ ದಿಟ್ಟತನದ ಉದಾಹರಣೆ ಅಷ್ಟೆ.
ಮಾತು ಕೇಳವುದಿಲ್ಲ, ನಾವು ಹಾಕಿದ ಗೆರೆ ದಾಟುತ್ತಿದ್ದಾಳೆ ಎಂದು ಮಗಳನ್ನು ಹೊರ ಹಾಕುವ ಪೋಷಕರು ಒಂದೆಡೆಯಾದರೆ; ಕೆಲಸ ಮತ್ತು ಮದುವೆಯ ವಿಚಾರದಲ್ಲಿ ಖಿನ್ನತೆಯಲ್ಲಿರುವ ಮಗನನ್ನು ಸ್ನೇಹಿತನಂತೆ ಕಾಣುವ ತಂದೆ ಇನ್ನೊಂದೆಡೆ. ಈ ಎರಡೂ ಎಳೆಗಳನ್ನು ಒಂದುಗೂಡಿಸುವ ಮೂಲಕ ಸಮಾಜದ ವಾಸ್ತವಕ್ಕೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ.
ಇದನ್ನು ಓದಿದ್ದೀರಾ?: ನಾನಾ ಆಯಾಮಗಳಲ್ಲಿ ಚಾಚಿಕೊಂಡ ಪ್ರವಾಹ ರೂಪದ ವ್ಯಕ್ತಿ ʼಋತ್ವಿಕ್ ಘಟಕ್ʼ
ನಿತ್ಯಾ ಮೆನನ್ ನಟಿಸಿದ ‘ಓ ಕಾದಲ್ ಕಣ್ಮಣಿ’ ಸಿನಿಮಾದಲ್ಲಿ ಲಿವಿನ್ ಸರೀನಾ, ಮದುವೆ ಬೇಕೆ ಬೇಕಾ ಎಂಬ ಕಥೆಯಂತೆ ಇಲ್ಲಿಯೂ ಸಹ ಮಗು ಹೆರಲು ಗಂಡಸು ಬೇಕೆ ಬೇಕಾ ಎಂಬಲ್ಲಿಗೆ ಕಥೆ ಸಾಗಿಬಂದಿದೆ. ಮದುವೆಯಾಗುವುದು ಮಕ್ಕಳನ್ನು ಹೆರುವುದಕ್ಕೆ ಎನ್ನುವ ಅಲಿಖಿತ ನಿಯಮವನ್ನು ಪ್ರಶ್ನಿಸುವುದು, ಮದುವೆ ಮತ್ತು ಮಕ್ಕಳು ಬೇಕೆ ಬೇಕಾ ಎನ್ನುವ ಮನೋಭಾವ ಈ ಚಿತ್ರದ ಆರಂಭದ ಹೈಲೈಟ್. ಆದರೆ ‘ಓ ಕಾದಲ್ ಕಣ್ಮಣಿ’ಯಂತೆ ಈ ಚಿತ್ರದಲ್ಲಿಯೂ ಸಮಾಜವನ್ನು ಪ್ರಶ್ನಿಸುತ್ತಲೇ, ಅದರೊಟ್ಟಿಗೆ ಸ್ವಲ್ಪ ಹೊಂದಿಕೊಳ್ಳಬೇಕು ಎಂಬ ಹೊಂದಾಣಿಕೆ ಮನೋಭಾವಕ್ಕೆ ಬಂದು ನಿಲ್ಲಲಾಗಿದೆ. ಅದರೊಟ್ಟಿಗೆ ಸಿಂಗಲ್ ಪೇರೆಂಟ್, ಗೇ ಪೇರೆಂಟ್ ಥರಹದ ಗಂಭೀರ ವಿಷಯಗಳನ್ನು ಸೂಕ್ಷ್ಮವಾಗಿ ಜೋಡಿಸಲಾಗಿದೆ.
ಚಿತ್ರದ ಹೆಸರು ಪ್ರೀತಿಸಲು ಸಮಯವಿಲ್ಲ ಎನ್ನುವುದಾದರೂ ಜೀವನದ ಎಲ್ಲಾ ಘಟ್ಟಗಳಲ್ಲಿಯೂ ಪ್ರೀತಿಸಬಹುದು, ಪ್ರೀತಿಗೆ ಕಟ್ಟುಪಾಡುಗಳಿಲ್ಲ ಎಂದು ಸಾರಲಾಗಿದೆ. ಹಾಗೆಯೇ ಪ್ರೀತಿ, ಮದುವೆ, ಮಕ್ಕಳ ಕುರಿತು ನಮ್ಮ ನಿಲುವುಗಳು ಶಾಶ್ವತವಾಗಿರದೆ, ಅವೂ ಸಹ ಬದಲಾಗುತ್ತವೆ ಎಂದು ನಿರೂಪಿಸಲಾಗಿದೆ. ಆದರೆ ಯಾವುದನ್ನು ಯಾರ ಮೇಲೆಯೂ ಹೇರಬಾರದು ಎಂಬುದು ಚಿತ್ರದ ತಿರುಳಾಗಿದೆ.
ಚಿತ್ರಕಥೆಗೆ ಅನುಗುಣವಾಗಿ ಅಪೇಕ್ಷಿತ ದೃಶ್ಯಗಳನ್ನು ಹೆಣೆದ ಕಾರಣ ನಿರೂಪಣೆ ಬಿಗಿಯಾಗಿಲ್ಲ. ಇನ್ನು ಕೆಲವು ಸಿನಿಮೀಯವಾಗಿದ್ದು, ವಾಸ್ತವ ಅನ್ನಿಸುವುದಿಲ್ಲ. ಆದರೆ ಜನರು ಮಾತನಾಡಲು ಅಂಜುವ ಬಹುಮುಖ್ಯ ವಿಷಯಗಳನ್ನು ಹೇಳುವ ಈ ಚಿತ್ರದ ಭಿನ್ನ ದೃಷ್ಟಿಕೋನವನ್ನು ಮೆಚ್ಚಲೇಬೇಕು.
ಎಂದಿನಂತೆ ನಿತ್ಯಾ ಮೆನನ್ ನಟನೆ ಆಹ್ಲಾದಕರವಾಗಿದೆ. ಜಯಂ ರವಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೋಗಿ ಬಾಬು ಅವರ ‘ಗೌಡ’ ಕಾಮಿಡಿ ಚೆನ್ನಾಗಿದೆ. ಲಾಲ್‍ರವರು ತಮ್ಮ ಕೂಲ್ ವ್ಯಕ್ತಿತ್ವದ ಕಾರಣಕ್ಕೆ ಇಷ್ಟವಾಗುತ್ತಾರೆ. ಎ.ಆರ್ ರೆಹಮಾನ್ ಸಂಗೀತದ ಒಂದೆರೆಡು ಹಾಡುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಇಂತಹ ಒಂದು ಆರೋಗ್ಯಕರ ಪ್ರಯೋಗಾತ್ಮಕ ಸಿನಿಮಾ ಮಾಡಿದ ನಿರ್ದೇಶಕ ಕಿರುಥಿಗ ಉದಯನಿಧಿಗೆ ಶಹಬ್ಬಾಸ್ ಹೇಳಲೇಬೇಕು. ಅಂದಹಾಗೆ ಈ ಚಿತ್ರದ ನಿರ್ಮಾಪಕರು, ಉದಯನಿಧಿ ಸ್ಟಾಲಿನ್, ಕರುಣಾನಿಧಿಯ ಮೊಮ್ಮಗ, ತಮಿಳುನಾಡಿನ ಉಪಮುಖ್ಯಮಂತ್ರಿ.

ಮುತ್ತುರಾಜು
ಪತ್ರಕರ್ತ, ಲೇಖಕ