- ಮೂರು ದಶಕಗಳ ಬಳಿಕ ಬಚ್ಚನ್ ಜೊತೆಯಾದ ಕಮಲ್ ಹಾಸನ್
- ಕಮಲ್ ಹಾಸನ್‌ಗೆ ಆತ್ಮೀಯವಾಗಿ ಸ್ವಾಗತ ಕೋರಿದ ಅಮಿತಾಭ್
ತಮಿಳಿನ ಹಿರಿಯ ನಟ ಕಮಲ್ ಹಾಸನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ʼವಿಕ್ರಮ್ʼ ಸಿನಿಮಾದ ಯಶಸ್ಸಿನ ಬಳಿಕ ʼಇಂಡಿಯನ್ 2ʼ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಅವರು ಇದೀಗ ಪ್ರಭಾಸ್ ಮುಖ್ಯಭೂಮಿಕೆಯ ಇನ್ನೂ ಹೆಸರಿಡದ ʼಪ್ರಾಜೆಕ್ಟ್ ಕೆʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಈ ಮಲ್ಟಿಸ್ಟಾರರ್ ಸಿನಿಮಾದಲ್ಲಿ ಕಮಲ್ ಹಾಸನ್ ಖಳನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಶೇಷ ಪಾತ್ರದಲ್ಲಿ ನಟಿಸುವ ಸಲುವಾಗಿ ಅಂದಾಜು 100 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.
ಪ್ರಭಾಸ್ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ʼಪ್ರಾಜೆಕ್ಟ್ ಕೆʼ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಟಿಯರಾದ ದೀಪಿಕಾ ಪಡುಕೊಣೆ ಮತ್ತು ದಿಶಾ ಪಠಾಣಿ ಕೂಡ ಚಿತ್ರತಂಡದ ಭಾಗವಾಗಿದ್ದಾರೆ.
1984ರಲ್ಲಿ ತೆರೆಕಂಡಿದ್ದ ʼಖಬರ್ದಾರ್ʼ ಮತ್ತು ʼಗಿರಫ್ತಾರ್ʼ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಜೊತೆಯಾಗಿ ನಟಿಸಿದ್ದರು. ಮೂರು ದಶಕಗಳ ಬಳಿಕ ಈ ಲೆಜೆಂಡ್‌ಗಳು ಮತ್ತೆ ಒಂದಾಗುತ್ತಿದ್ದು, ಅಮಿತಾಭ್ ಬಚ್ಚನ್ ಅವರು ಟ್ವೀಟ್ ಮಾಡುವ ಮೂಲಕ ಕಮಲ್ ಹಾಸನ್ ಅವರನ್ನು ʼಪ್ರಾಜೆಕ್ಟ್ ಕೆʼ ಸ್ವಾಗತಿಸಿದ್ದಾರೆ.
ʼಮಹಾನಟಿʼ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಾರಾಗಣದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರಕ್ಕೆ ಹಿರಿಯ ನಿರ್ಮಾಪಕ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.