ಈ ತಿಂಗಳಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಸಿನಿಮಾ ‘ಎಮರ್ಜೆನ್ಸಿ’ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ವೀಕ್ಷಿಸಲು ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ರಣಾವತ್ ಅವರು ವಯನಾಡು ಸಂಸದೆ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆಹ್ವಾನಿಸಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾವು 1975 ಮತ್ತು 1977ರ ನಡುವಿನ 21 ತಿಂಗಳುಗಳ ಅವಧಿಯಲ್ಲಿ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಸುತ್ತಲಿನ ವಿಚಾರಗಳನ್ನು ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.
ಇದನ್ನು ಓದಿದ್ದೀರಾ? ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಜನವರಿ 17ರಂದು ತೆರೆಗೆ
ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿರುವ ನಾಯಕಿ ಕಂಗನಾ ರಣಾವತ್, “ನಾನು ನಿಜವಾಗಿಯೂ ಪ್ರಿಯಾಂಕಾ ಗಾಂಧಿಯನ್ನು ಸಂಸತ್ತಿನಲ್ಲಿ ಭೇಟಿಯಾಗಿದ್ದೆ. ನಾನು ಅವರಿಗೆ ಹೇಳಿದ ಮೊದಲ ಮಾತು ‘ನೀವು ಎಮರ್ಜೆನ್ಸಿ ಸಿನಿಮಾವನ್ನು ನೋಡಬೇಕು’ ಎಂಬುದು. ಅವರು (ಪ್ರಿಯಾಂಕಾ ಗಾಂಧಿ) ಅತೀ ವಿನಯದ ವ್ಯಕ್ತಿ. ‘ಓಕೆ, ಆಗಬಹುದು’ ಎಂದರು. ಅವರು ಸಿನಿಮಾವನ್ನು ವೀಕ್ಷಿಸುತ್ತಾರೆಯೇ ಎಂದು ನೋಡೋಣ” ಎಂದು ಹೇಳಿದ್ದಾರೆ.
“ಇದು ಒಂದು ವ್ಯಕ್ತಿತ್ವದ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ಚಿತ್ರಣವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಇಂದಿರಾ ಗಾಂಧಿ ಅವರನ್ನು ಅತ್ಯಂತ ಘನತೆಯಿಂದ ಚಿತ್ರಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸಿದ್ದೇನೆ” ಎಂದು ಕಂಗನಾ ರಣಾವತ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್ ಮಂಡಳಿ ಅನುಮೋದನೆ; ಶೀಘ್ರ ಬಿಡುಗಡೆ
ಇನ್ನು ತಾನು ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುವ ನಿಟ್ಟಿನಲ್ಲಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾಗ ಇಂದಿರಾ ಗಾಂಧಿ ಅವರ ಜೀವನದ ಬಗ್ಗೆ ಹಲವು ಮಾಹಿತಿ ತಿಳಿದುಕೊಂಡಿರುವುದಾಗಿ ಕಂಗನಾ ಹೇಳಿಕೊಂಡಿದ್ದಾರೆ. ಇಂದಿರಾ ಗಾಂಧಿಯನ್ನು ಪ್ರೀತಿಯ ನಾಯಕಿ ಎಂದು ಕರೆದ ಕಂಗನಾ, “ಮೂರು ಬಾರಿ ಪ್ರಧಾನಿಯಾಗಿರುವುದು ತಮಾಷೆಯಲ್ಲ. ಅವರನ್ನು ಜನರು ಪ್ರೀತಿಸಿದ್ದಾರೆ” ಎಂದರು.
‘ಎಮರ್ಜೆನ್ಸಿ’ ಸಿನಿಮಾವನ್ನು ಕಳೆದ ವರ್ಷ ಸೆಪ್ಟೆಂಬರ್ 6ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ಸಿಗದ ಕಾರಣ ವಿಳಂಬವಾಯಿತು.
ಚಿತ್ರದಲ್ಲಿ ಯುವ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಆಗಿ ಮಿಲಿಂದ್ ಸೋಮನ್, ಪುಪುಲ್ ಜಯಕರ್ ಪಾತ್ರದಲ್ಲಿ ಮಹಿಮಾ ಚೌಧರಿ ಮತ್ತು ಜಗಜೀವನ್ ರಾಮ್ ಪಾತ್ರದಲ್ಲಿ ದಿವಂಗತ ಸತೀಶ್ ಕೌಶಿಕ್ ನಟಿಸಿದ್ದಾರೆ.
