ಬಿಜೆಪಿ ಸಂಸದೆ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸೆನ್ಸಾರ್ ಮಂಡಳಿ ಅನುಮೋದನೆ ನೀಡಿದೆ. ಸೆನ್ಸಾರ್ ಮಂಡಳಿಯ ಅನುಮೋದನೆ ಲಭಿಸಿದ ಕಾರಣ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಯು ವಿಳಂಬವಾಗಿತ್ತು. ಇದೀಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಎಮರ್ಜೆನ್ಸಿ ಸಿನಿಮಾಗೆ ಪ್ರಮಾಣಪತ್ರವನ್ನು ನೀಡಿದೆ ಎಂದು ಗುರುವಾರ ನಟಿ ತಿಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ “ನಮ್ಮ ಎಮರ್ಜೆನ್ಸಿ ಚಲನಚಿತ್ರಕ್ಕೆ ನಾವು ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ರದ್ದಾದ ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರಬೇಕು: ಕಂಗನಾ ರಣಾವತ್
ಇನ್ನು ಈ ಬಗ್ಗೆ ಎಕ್ಸ್ (ಟ್ವಿಟ್ಟರ್) ಪೋಸ್ಟ್ ಮಾಡಿರುವ ಕಂಗನಾ ರಣಾವತ್, “ನಮ್ಮ ಚಿತ್ರ ಎಮರ್ಜೆನ್ಸಿಗೆ ಸೆನ್ಸಾರ್ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳಿದ್ದಾರೆ.
ಸಿನಿಮಾವು ಸೆಪ್ಟೆಂಬರ್ 6ರಂದು ದೇಶಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿತ್ತು. ಆದರೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಲಭಿಸಿದ ಕಾರಣ ಬಿಡುಗಡೆ ಸಾಧ್ಯವಾಗಲಿಲ್ಲ. ನಿರಂತರವಾಗಿ ಬಿಡುಗಡೆ ವಿಳಂಬವಾಗುತ್ತಾ ಬಂತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತಾದ ಈ ಸಿನಿಮಾದಲ್ಲಿ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಎಮರ್ಜೆನ್ಸಿ | ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿಗೆ ನಿರ್ದೇಶಿಸಲಾಗದು ಎಂದ ಹೈಕೋರ್ಟ್
ಈ ಸಿನಿಮಾದಲ್ಲಿ ಸಿಖ್ ಧರ್ಮವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಸಿಖ್ ಸಂಘಟನೆಗಳು ಆರೋಪಿಸಿದ್ದು, ಅದಾದ ಬಳಿಕ ಈ ಸಿನಿಮಾ ವಿವಾದದಲ್ಲಿ ಸಿಲುಕಿದೆ. ಬಿಡುಗಡೆಯನ್ನು ವಿಳಂಬಗೊಳಿಸಲು ಚಲನಚಿತ್ರ ಸಂಸ್ಥೆ ಪ್ರಮಾಣೀಕರಣವನ್ನು ನೀಡುತ್ತಿಲ್ಲ ಎಂದು ರಣಾವತ್ ಆರೋಪಿಸಿದ್ದರು.
ಈ ಸಿನಿಮಾದಲ್ಲಿ ಕೆಲವು ದೃಶ್ಯಗಳು ಕಡಿತಗೊಳಿಸಲು ಕಂಗನಾ ರಣಾವತ್ ಒಪ್ಪಿದೆ ಎಂದು ಕಳೆದ ಸೋಮವಾರ ಸಿಬಿಎಫ್‌ಸಿ ಬಾಂಬೆ ಹೈಕೋರ್ಟ್‌ಗೆ ತಿಳಿಸಿತ್ತು.
