ಕನ್ನಡ ಚಿತ್ರರಂಗದ ಹಿರಿಯ ನಟ, ‘ಸರಿಗಮ ವಿಜಿ’ ಎಂದೇ ಖ್ಯಾತರಾದ ನಟ ವಿಜಯಕುಮಾರ್ ಬುಧವಾರ ನಿಧನರಾಗಿದ್ದಾರೆ. 76 ವರ್ಷದ ನಟ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಉಂಟಾಗಿತ್ತು. ಯಶವಂತಪುರಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಮೃತರ ಅಂತ್ಯಕ್ರಿಯೆಯು ಜನವರಿ 16ರ ಬೆಳಿಗ್ಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಇರುವ ಚಿತಾಗಾರದಲ್ಲಿ ನಡೆಯಲಿದೆ.
ಇದನ್ನು ಓದಿದ್ದೀರಾ? ಖ್ಯಾತ ಪರಮಾಣು ವಿಜ್ಞಾನಿ ಡಾ ಆರ್ ಚಿದಂಬರಂ ನಿಧನ
ಬೆಂಗಳೂರಿನ ವಿಮಾನಪುರದಲ್ಲಿ (ಎಚ್‌ಎಎಲ್ ಪ್ರದೇಶ) ವಿಜಿ ಜನಿಸಿದ್ದು ಆರಂಭದಲ್ಲಿ ನಾಟಕದಲ್ಲಿ ನಟಿಸುತ್ತಿದ್ದರು. ಬಳಿಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ವಿಜಿ ಬರೆದ ‘ಸಂಸಾರದಲ್ಲಿ ಸರಿಗಮ’ ನಾಟಕ ಜನಮನ್ನಣೆಗೆ ಪಾತ್ರವಾಯಿತು. ಇದೇ ಕಾರಣಕ್ಕೆ ವಿಜಯಕುಮಾರ್ ಅವರಿಗೆ ‘ಸರಿಗಮ ವಿಜಿ’ ಎಂಬ ಹೆಸರು ಬಂದಿದೆ. ಧಾರವಾಹಿಗಳಲ್ಲೂ ವಿಜಿ ನಟಿಸಿದ್ದಾರೆ
ಪೋಷಕ ಪಾತ್ರ, ಹಾಸ್ಯನಟ, ಖಳನಟ ಹೀಗೆ ಹಲವು ಪಾತ್ರಗಳನ್ನು ವಿಜಿ ನಿರ್ವಹಿಸಿದ್ದಾರೆ. ದೇವರಾಜ್, ದರ್ಶನ್, ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್, ಅನಂತನಾಗ್, ಅಂಬರೀಶ್ ಸೇರಿದಂತೆ ಹಲವು ನಟರುಗಳ ಜೊತೆ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಕೃಷ್ಣದೇವರಾಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.
