ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದ ರನ್ಯಾ ಅವರನ್ನು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆಯಲಾಗಿದೆ. ಏರ್ಪೋರ್ಟ್ ಕಸ್ಟಮ್ಸ್ನ ಡಿಆರ್ಐ ಅಧಿಕಾರಿಗಳು ರನ್ಯಾ ಅವರನ್ನು ತಪಾಸಣೆ ನಡೆಸಿದಾಗ, ಅವರು ವಿದೇಶದಿಂದ ಹೆಚ್ಚುವರಿ ಚಿನ್ನ ತಂದಿದ್ದಾರೆ ಎಂದು ಹೇಳಲಾಗಿದೆ.
ದುಬೈನಿಂದ ಬರೋಬ್ಬರಿ 12 ಕೋಟಿ ರೂ. ಮೌಲ್ಯದ 14.8 ಕೆಜಿ ಚಿನ್ನವನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ರನ್ಯಾ ಅವರು ಕನ್ನಡದ ‘ಮಾಣಿಕ್ಯ’ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದರು. ಅಲ್ಲದೆ, ತಮಿಳು ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ.