ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ರಾಘವೇಂದ್ರ ಹೆಗಡೆ ಈ ಬಗ್ಗೆ ದೂರು ನೀಡಿದ್ದಾರೆ.
“2016ರಲ್ಲಿ ನನ್ನ ಮೊದಲ ಚಿತ್ರದ ಯಶಸ್ಸಿನ ನಂತರ, ದಕ್ಷಿಣ ಭಾರತದ ಚಲನಚಿತ್ರ ನಟ ಧ್ರುವ ಕುಮಾರ್ ಅಲಿಯಾಸ್ ಧ್ರುವ ಸರ್ಜಾ ನನ್ನ ಕಚೇರಿಗೆ ಬಂದು ನನ್ನೊಂದಿಗೆ ಚಿತ್ರದಲ್ಲಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. 2016ರಿಂದ 2018ರವರೆಗೆ ನನ್ನ ಬೆನ್ನತ್ತಿದ್ದರು. ಆದ್ದರಿಂದ ನಾನು ಒಪ್ಪಿಕೊಂಡು ಸರ್ಜಾ ಅವರು ತಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು 3 ಕೋಟಿ ರೂಪಾಯಿಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಅವರು ನೀಡಿದ ಭರವಸೆಯ ಆಧಾರದಲ್ಲಿ ಹಣ ನೀಡಿದ್ದೆ” ಎಂದು ಹೆಗಡೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಂಚನೆ ಆರೋಪ | ನಿರ್ಮಾಪಕರ ವಿರುದ್ಧ ಕ್ರಮಕ್ಕೆ ಮುಂದಾದ ಸುದೀಪ್
2019ರ ಫೆಬ್ರವರಿ 21ರಂದು ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಹಣವನ್ನು ವರ್ಗಾಯಿಸಲಾಗಿದೆ. ಒಪ್ಪಂದದ ಪ್ರಕಾರ, ಚಿತ್ರೀಕರಣವು 2020ರ ಜನವರಿಯಲ್ಲಿ ಪ್ರಾರಂಭವಾಗಿ 2020ರ ಜೂನ್ ಒಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಹಣ ಪಡೆದ ಬಳಿಕ ಸರ್ಜಾ ಪದೇ ಪದೇ ದಿನ ವಿಸ್ತರಣೆ ಕೋರಿದ್ದಾರೆ. ಕೋವಿಡ್ ಲಾಕ್ಡೌನ್ ಬಳಿಕ ಪ್ರತಿಕ್ರಿಯಿಸಿಲ್ಲ ಎಂದು ಹೆಗಡೆ ಆರೋಪಿಸಿದ್ದಾರೆ.
“ಸರ್ಜಾ ಅವರು ಚಿತ್ರಕಥೆಗಾರರು ಮತ್ತು ಪ್ರಚಾರ ಸಲಹೆಗಾರರು ಸೇರಿದಂತೆ ಮೂರನೇ ವ್ಯಕ್ತಿಗಳಿಗೆ ಹೆಚ್ಚುವರಿ ಪಾವತಿಗಳನ್ನು ಮಾಡಿಸಿದ್ದಾರೆ. ಆದರೆ ಕೊನೆಗೆ, ಸರ್ಜಾ ಆ ಯೋಜನೆಯಿಂದ ಹಿಂದೆ ಸರಿದರು. ಕರೆ ತೆಗೆಯುತ್ತಿಲ್ಲ” ಎಂದು ದೂರಿದ್ದಾರೆ.
ಇನ್ನು ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಧ್ರುವ ಮ್ಯಾನೇಜರ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ. “ರಾಘವೇಂದ್ರ ಹೆಗೆಡೆ 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು. ನಂದಿನಿ ಎಂಟರ್ಟೇನ್ಮೆಂಟ್ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ನೀಡಲಾಗಿತ್ತು. ಈ ಪೈಕಿ 20 ಲಕ್ಷ ರೂಪಾಯಿ ಹಣ ನಾವು ಹಿಂದಿರುಗಿಸಿದ್ದೆವು. ಉಳಿದ ಹಣದಲ್ಲಿ ಸಿನಿಮಾ ಮಾಡಬೇಕಿತ್ತು. ಆದರೆ ಸಿನಿಮಾ ಮಾಡುವ ವಿಚಾರದ ಬಂದಾಗ ದಿನ ದೂಡುತ್ತಿದ್ದರು. ನಾಲ್ಕುವರೆ ವರ್ಷದ ಬಳಿಕ ಅರ್ಧ ಸ್ಕ್ರಿಪ್ಟ್ ಕಳುಹಿಸಿದ್ದರು” ಎಂದು ತಿಳಿಸಿದ್ದಾರೆ.
“ಬಳಿಕ ಸೋಲ್ಜರ್ ಸಿನಿಮಾ ಮಾಡೋದು ಬೇಡ, ಬಜೆಟ್ ಜಾಸ್ತಿ ಆಗುತ್ತದೆ. ಮಾಡಿದರೂ ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದಿದ್ದಾರೆ. ಆದರೆ ಕನ್ನಡದಲ್ಲೇ ಸಿನಿಮಾ ಮಾಡಬೇಕು ಎಂದು ಸರ್ಜಾ ಪಟ್ಟು ಹಿಡಿದರು. ಅಕ್ಟೋಬರ್ನಿಂದ ಡೇಟ್ಸ್ ಬೇಕು ಎಂದು ರಾಘವೇಂದ್ರ ಕೇಳಿದರು. ನಾವು ಇದಕ್ಕೆ ರೆಡಿ ಇದ್ದೆವು. ಜುಲೈನಲ್ಲಿ ನೋಟಿಸ್ ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.
