ಕನ್ನಡ ಚಿತ್ರರಂಗದಲ್ಲಿಯೂ ‘ಲೈಂಗಿಕ ದೌರ್ಜನ್ಯ ತಡೆ ಸಮಿತಿ’ಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಚಿಸಿದೆ. ಸುಮಾರು ಹನ್ನೊಂದು ಜನರ ಸಮಿತಿಯನ್ನು ರಚಿಸಲಾಗಿದೆ.
ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ಹೇಮಾ ಸಮಿತಿ ವರದಿಯು ಇಡೀ ದೇಶವೇ ಮಲಯಾಳಂ ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿತ್ತು.
ಅದಾದ ಬಳಿಕ ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕಾಗಿ ಸಮಿತಿ ರಚನೆಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಆಗ್ರಹಿಸಿತ್ತು. ಫೈರ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯನ್ನೂ ಸಲ್ಲಿಸಿತ್ತು.
ಇದನ್ನು ಓದಿದ್ದೀರಾ? ಕೇರಳದ ಹೇಮಾ ಸಮಿತಿ ಮೂಲಕ ದಾಖಲಾಗಿದ್ದ ಪ್ರಕರಣ ಬೆಂಗಳೂರಿಗೆ ವರ್ಗಾವಣೆ
ಇದೀಗ ಕರ್ನಾಟಕ ಫಿಲಂ ಚೇಂಬರ್ ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು (ಆಂತರಿಕ ದೂರು ಸಮಿತಿ) ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ (POSH Act) ಮಾರ್ಗದರ್ಶನದಂತೆ ರಚಿಸಿದ್ದು ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

ಸಮಿತಿಯನ್ನು ಆಯಾ ಅವಧಿಯ ಚುನಾಯಿತ ಕೆಎಫ್ ಸಿಸಿ ಅಧ್ಯಕ್ಷರು (ಖಾಯಂ ಸದಸ್ಯರು), ಚಲನಚಿತ್ರ ಕಲಾವಿದೆ, ನಿರ್ಮಾಪಕಿ ಪ್ರಮಿಳಾ ಜೋಷಾಯ್, ಮಹಿಳಾ ಹಕ್ಕು ಹೋರಾಟಗಾರ್ತಿ ವಿಮಲಾ ಕೆ ಎಸ್, ವಕೀಲರು ಮತ್ತು ಹೋರಾಟಗಾರ್ತಿ ರಾಜಲಕ್ಷ್ಮೀ ಅಂಕಲಗಿ, ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರರು ಮಲ್ಲು ಕುಂಬಾರ್, ಕಲಾವಿದೆ ಶೃತಿ ಹರಿಹರನ್, ನಿರ್ಮಾಪಕರು ಮತ್ತು ಸಿನಿಮಾ ವಿತರಕರು ಎನ್ ಎಂ ಸುರೇಶ್, ಪತ್ರಕರ್ತರು ಮುರಳೀಧರ ಖಜಾನೆ, ಸ್ತ್ರೀವಾದಿ ಮತ್ತು ರಂಗಕರ್ಮಿ ಶಶಿಕಾಂತ್ ಯೆದನಹಳ್ಳಿ ಹಾಗು ಚಲನಚಿತ್ರ ನಿರ್ಮಾಪಕರು ಸಾ ರಾ ಗೋವಿಂದು ಸಮಿತಿ ಸದಸ್ಯರಾಗಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷೆ ಕವಿತಾ ಲಂಕೇಶ್, “ಸಮಿತಿ ರಚಿಸುವಂತೆ ಫೈರ್ ಸಂಸ್ಥೆಯು ಹಲವು ಬಾರಿ ಒತ್ತಾಯವನ್ನು ಮಾಡಿದೆ. ಅಂತಿಮವಾಗಿ ಫಿಲಂ ಚೇಂಬರ್ ಸಮಿತಿ ರಚಿಸಿದೆ. ಈ ಬಗ್ಗೆ ನನಗೆ ಸಂತೋಷವಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ತಮ್ಮಗಾದ ದೌರ್ಜನ್ಯವನ್ನು ಹೇಳಿಕೊಳ್ಳಲು ಇಂತಹ ಸಮಿತಿ ಅಗತ್ಯವಾಗಿತ್ತು” ಎಂದು ತಿಳಿಸಿದ್ದಾರೆ.
“ಈ ಸಮಿತಿಯು ಎಲ್ಲಾ ರಂಗದ ಸದಸ್ಯರನ್ನು ಒಳಗೊಂಡಿದೆ. ಇದರಿಂದಾಗಿ ನಿಷ್ಪಕ್ಷಪಾತ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಸಮಿತಿ ರಚಿಸಲು ಒತ್ತಡ ಹೇರಿದ ಫೈರ್‌ಗೂ, ಸಮಿತಿ ರಚಿಸಿದ ಚೇಂಬರ್‌ಗೂ ಕೃತಜ್ಞತೆಗಳು. ಸಹಾಯವಾಣಿ, ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುವ ಮೊದಲಾದ ಆಲೋಚನೆಗಳಿವೆ. ಮುಂದಿನ ದಿನಗಳಲ್ಲಿ ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ” ಎಂದು ಹೇಳಿದರು.
