ಕಲ್ಲಿಕೋಟೆಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಮಹಿಳಾ ಪತ್ರಕರ್ತೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ಪ್ರಕರಣದಲ್ಲಿ ಮಲಯಾಳಂ ನಟ ಹಾಗೂ ಬಿಜೆಪಿ ಮಾಜಿ ಸಂಸದ ಸುರೇಶ್ ಗೋಪಿ ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ತನಿಖಾಧಿಕಾರಿಯ ಮುಂದೆ ಜನವರಿ 24ರೊಳಗೆ ಹಾಜರಾಗಬೇಕೆಂದು ನ್ಯಾಯಾಧೀಶರಾದ ಸೋಫಿ ಥಾಮಸ್ ಅವರು ನಿರ್ದೇಶಿಸಿದ್ದಾರೆ.
ಒಂದು ವೇಳೆ ಸುರೇಶ್ ಗೋಪಿಯವರನ್ನು ಬಂಧಿಸಿದರೆ 25 ಸಾವಿರ ರೂಗಳ ಬಾಂಡ್ ಹಾಗೂ ಎರಡು ಸಮಾನ ಮೊತ್ತದೊಂದಿಗೆ ಶ್ಯೂರಿಟಿ ನೀಡಬೇಕೆಂದು ನ್ಯಾಯಾಲಯ ತಿಳಿಸಿದೆ. ಸದ್ಯಕ್ಕೆ ಬಂಧಿಸುವ ಸಾಧ್ಯತೆಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಪಿ ಅವರ ವಿರುದ್ಧ ಐಪಿಸಿ ಸೆಕ್ಷನ್ 354ರಡಿಯಲ್ಲಿ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಅವಮಾನಗೊಳಿಸುವ ಪ್ರಕರಣ ದಾಖಲಿಸಲಾಗಿತ್ತು.
ತಮ್ಮ ವಿರುದ್ಧ ರಾಜಕೀಯ ಭಾವನೆಗಳನ್ನು ಕೆರಳಿಸಲು ಮತ್ತು ಕರುವನ್ನೂರ್ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಠೇವಣಿದಾರರ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮುನ್ನಡೆಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಈ ಪ್ರಕರಣ ಮತ್ತು ತನ್ನ ವಿರುದ್ಧ ಮತ್ತೊಂದು ತೆರಿಗೆ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗೋಪಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಜಾಮೀನು ನೀಡುವುದಕ್ಕೆ ತಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿರುವುದಾಗಿ ನ್ಯಾಯಾಲಯ ತಿಳಿಸಿದೆ. ನಟ ಕೂಡ ತಾವು ಲೈಂಗಿಕ ಕಿರುಕುಳ ನೀಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
ಕಲ್ಲಿಕೋಟೆಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದ ಸಂತ್ರಸ್ತ ಪತ್ರಕರ್ತೆಯು ಹಾಜರಿದ್ದರು. ಸುರೇಶ್ ಗೋಪಿ ತೆರಳುವ ಸಂದರ್ಭದಲ್ಲಿ ಸಂತ್ರಸ್ತೆಗೆ ಅಡ್ಡಿಪಡಿಸಿದ್ದಲ್ಲದೆ ಸ್ಪರ್ಷ ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆ ನಡೆದ ನಂತರ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನಿಗೆ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಿದ್ದರು.
ನ್ಯಾಯಾಲಯವು ಗೋಪಿಯವರ ಕಸ್ಟೋಡಿಯಲ್ ವಿಚಾರಣೆ ಅನಗತ್ಯ ಎಂದು ಅಭಿಪ್ರಾಯಪಟ್ಟು ನಿರೀಕ್ಷಣ ಜಾಮೀನಿಗೆ ಅನುಮತಿಸಿತ್ತು.