ಗಳಿಕೆಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಜಿಎಫ್-2
ಜಾಪನೀಸ್ ಭಾಷೆಯಲ್ಲೇ ಮಾಹಿತಿ ಹಂಚಿಕೊಂಡ ಯಶ್
ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ʼಕೆಜಿಎಫ್-1ʼ ಮತ್ತು ʼಕೆಜಿಎಫ್-2ʼ ಸಿನಿಮಾ ಸರಣಿಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದವು. ಯಶ್‌ಗೆ ಗ್ಲೋಬಲ್ ಸ್ಟಾರ್ ಪಟ್ಟವನ್ನು ತಂದುಕೊಟ್ಟಿದ್ದ ಈ ಸರಣಿ ಸಿನಿಮಾಗಳು ಇದೀಗ ಜಪಾನ್‌ನಲ್ಲಿ ಬಿಡುಗಡೆಗೆ ಸಜ್ಜಾಗಿವೆ.
ʼಕೆಜಿಎಫ್ ಸರಣಿಯ ಎರಡೂ ಸಿನಿಮಾಗಳು ಜುಲೈ 14ರಿಂದ ಜಪಾನ್‌ನಲ್ಲಿ ತೆರೆಕಾಣಲಿವೆ. ಈ ಬಗ್ಗೆ ಸ್ವತಃ ಯಶ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಸೆಲ್ಫೀ ವಿಡಿಯೋದಲ್ಲಿ ಜಪಾನ್ ಭಾಷೆಯಲ್ಲೇ ಮಾತನಾಡಿರುವ ಯಶ್ ತಮ್ಮ ಜಾಪನೀಸ್ ಅಭಿಮಾನಿಗಳಿಗೆ ಸಿನಿಮಾ ವೀಕ್ಷಿಸುವಂತೆ ಕರೆ ನೀಡಿದ್ದಾರೆ. ಸ್ಥಳೀಯ ಭಾಷೆಯಲ್ಲೇ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕೆಜಿಎಫ್ ಸರಣಿ ಜಪಾನ್ ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿರುವುದರಿಂದ ಗಳಿಕೆಯ ವಿಚಾರದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಈ ಪಟ್ಟಿಯಲ್ಲಿ 1924.7 ಕೋಟಿಗಳಷ್ಟು ಸಾರ್ವಕಾಲಿಕ ಗಳಿಕೆ ಮಾಡಿರುವ ಆಮಿರ್ ಖಾನ್ ನಟನೆಯ ʼದಂಗಲ್ʼ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ, 1742.3 ಕೋಟಿ ಕಲೆ ಹಾಕಿದ್ದ ʼಬಾಹುಬಲಿ-2ʼ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ʼಆರ್‌ಆರ್‌ಆರ್ʼ ಸಿನಿಮಾ ₹1,243.3 ಕೋಟಿಗಳನ್ನು ಗಳಿಸಿದೆ. ʼಕೆಜಿಎಫ್-2ʼ ಸಿನಿಮಾ ನಾಲ್ಕನೇ ಸ್ಥಾನದಲ್ಲಿದ್ದು, ₹1,177.9 ಕೋಟಿ ಕಲೆ ಹಾಕಿದೆ. ಇದೀಗ ಜಪಾನ್‌ನಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಿದರೆ ʼಆರ್‌ಆರ್‌ಆರ್ʼ ಸಿನಿಮಾದ ಗಳಿಕೆಯದ ದಾಖಲೆಯನ್ನು ಸರಿಗಟ್ಟಿ ಮೂರನೇ ಸ್ಥಾನಕ್ಕೇರಲಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಮೂಗಿಗೆ ಗಾಯ
ಕೆಜಿಎಫ್-2 ಯಶಸ್ಸಿನ ಬಳಿಕ ಜವಾಬ್ದಾರಿ ಹೆಚ್ಚಾಗಿದೆ ಎನ್ನುವ ಯಶ್ ಈವರೆಗೆ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿಲ್ಲ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ಚಿತ್ರಕಥೆ ಸಿದ್ಧವಾಗಿದೆ, ಸಮಯ ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದೇನೆ, ಸದ್ಯದಲ್ಲೇ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದರು. ಯಶ್ ಅವರ ಮುಂದಿನ ಚಿತ್ರದ ಘೋಷಣೆ ಯಾವಾಗ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೆಜಿಎಫ್ ಸರಣಿ ಸಾಗರದಾಚೆಗೆ ಮರು ಬಿಡುಗಡೆಯಾಗುತ್ತಿರುವುದು ಖುಷಿ ನೀಡಿದೆ.