ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಇಂದು (ಮೇ 9) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ವಿಜಯ್ ದೇವರಕೊಂಡ ಮತು ಸಮಂತಾ ಜೊತೆಯಾಗಿ ನಟಿಸಿರುವ ಬಹುನಿರೀಕ್ಷಿತ ʼಖುಷಿʼ ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದೆ.
ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ʼನನ್ನ ರೋಜಾ ನೀನೇ..ʼ ಹಾಡು ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಕನ್ನಡದ ಖ್ಯಾತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೆಶಮ್ ಅಬ್ದುಲ್ ವಹಾಬ್ ಧ್ವನಿಯಾಗಿದ್ದು, ಹಿನ್ನೆಲೆ ಸಂಗೀತವನ್ನು ಕೂಡ ಸಂಯೋಜಿಸಿದ್ದಾರೆ. ಈ ಮೆಲೋಡಿ ಹಾಡಿನ ಚಿತ್ರೀಕರಣವನ್ನು ಕಾಶ್ಮೀರ ಭಾಗದಲ್ಲಿ ನಡೆಸಲಾಗಿದೆ.
ತೆಲುಗಿನ ಖ್ಯಾತ ನಿರ್ದೇಶಕ ಶಿವ ನಿರ್ವಾಣ ನಿರ್ದೇಶನದ ಪ್ರೇಮ ಕಥಾಹಂದರವುಳ್ಳ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲ ಕಿಶೋರ್, ರೋಹಿಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೇಕಿಂಗ್ ಮತ್ತು ಬಹುತಾರಾಗಣದ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ʼಖುಷಿʼ ಚಿತ್ರ ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿದ್ದು, ಸೆಪ್ಟೆಂಬರ್ 1ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಈ ಹಿಂದೆ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ʼಲೈಗರ್ʼ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಾದರಿಯಲ್ಲಿ ತೆರೆಕಂಡಿತ್ತು. ಮೇಕಿಂಗ್ ಮತ್ತು ಅಬ್ಬರದ ಪ್ರಚಾರದ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ʼಲೈಗರ್ʼ ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತ್ತು. ಲೈಗರ್ ಸೋಲಿನ ಬಳಿಕ ಕೆಲ ದಿನಗಳ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ವಿಜಯ್ ಇದೀಗ ಖುಷಿ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ಸಜ್ಜಾಗಿದ್ದಾರೆ.