ಬಿಜೆಪಿ ಸೋಲಿಸಲು ಒಗ್ಗೂಡಿದ ವಿಪಕ್ಷಗಳು
ಜೂನ್ 23ರಂದು ನಡೆಯಲಿದೆ ಮಹತ್ವದ ಸಭೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಬೆಂಬಲ ಬೇಕೆಂದರೆ ಕೈ ನಾಯಕರು ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಪಕ್ಷದವರ ಸಹವಾಸದಿಂದ ದೂರ ಇರಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಷರತ್ತು ಹಾಕಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸುತ್ತಿವೆ. ಬಿಜೆಪಿಯನ್ನು ಸೋಲಿಸಲು ರಣತಂತ್ರ ಹೆಣೆದಿರುವ ವಿಪಕ್ಷಗಳು ಇದೇ ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಬೃಹತ್ ಸಭೆಯನ್ನು ನಡೆಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಸೇರಿದಂತೆ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಹತ್ವದ ಸಭೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಂಧಾನದ ವಿಚಾರ ಮಾತನಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಜೊತೆ ಕೈ ಜೋಡಿಸದಂತೆ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳದ ಕಕ್‌ದ್ವೀಪ್‌ನಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, “ಕಾಂಗ್ರೆಸ್ ಆಡಳಿತ ನಡೆಸಿರುವ ಎಲ್ಲ ರಾಜ್ಯಗಳಲ್ಲಿ ಸಿಪಿಐ(ಎಂ) ಬಹುದೊಡ್ಡ ಮಿತ್ರ ಪಕ್ಷದಂತೆಯೇ ವರ್ತಿಸಿದೆ. ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲದೆ ಬಿಜೆಪಿಗೂ ಕೂಡ ಸಿಪಿಐ(ಎಂ) ಮಿತ್ರಪಕ್ಷವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಗೆ ನಮ್ಮ (ಟಿಎಂಸಿ) ಬೆಂಬಲದ ಅಗತ್ಯವಿದ್ದರೆ ಖಂಡಿತ ನಿಮ್ಮನ್ನು (ಕಾಂಗ್ರೆಸ್) ಬೆಂಬಲಿಸುತ್ತೇವೆ. ಆದರೆ, ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ನೀವು (ಕಾಂಗ್ರೆಸ್), ಸಿಪಿಎಂ(ಐ) ಜೊತೆ ಒಳ ಒಪ್ಪಂದ ಮಾಡಿಕೊಂಡು ನಮ್ಮಿಂದ ಮಾತ್ರ ನೆರವನ್ನು ನಿರೀಕ್ಷಿಸಬೇಡಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಂದು ಕರೆಗೆ ಉಕ್ರೇನ್ ಯುದ್ಧ ನಿಲ್ಲಿಸಿದೆವೆಂದ ಜನ ಮಣಿಪುರ ಹೊತ್ತಿ ಉರಿಯಲು ಬಿಟ್ಟಿದ್ದೇಕೆ: ನಟ ಕಿಶೋರ್ ಪ್ರಶ್ನೆ
ಮಮತಾ ಬ್ಯಾನರ್ಜಿ, ಸಿಪಿಐ(ಎಂ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಇದು ಮೊದಲೇನಲ್ಲ. ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿಪಕ್ಷಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದ ದೀದಿ, “ಟಿಎಂಸಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಬಿಜೆಪಿ ಮೂರು ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ” ಎಂದಿದ್ದರು.