ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2020 ರ ಜನವರಿಯಲ್ಲಿ ಜೆಎನ್‌ಯುಗೆ ಭೇಟಿ ನೀಡಿದ ಕಾರಣದಿಂದ ನನ್ನ ‘ಛಪಾಕ್’ ಸಿನಿಮಾ ಸೋತಿತು ಎಂದು ಚಿತ್ರದ ನಿರ್ದೇಶಕಿ ಮೇಘನಾ ಗುಲ್ಝಾರ್ ತಿಳಿಸಿದ್ದಾರೆ.
ಮಾಧ್ಯಮವೊಂದರ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕಿ ಮೇಘನಾ ಗುಲ್ಝಾರ್ ಅವರು,” ದೀಪಿಕಾ ಪಡುಕೋಣೆ ಚಿತ್ರ ಬಿಡುಗಡೆಯಾದ 2020 ರ ಜನವರಿಯಲ್ಲಿ ಜೆಎನ್‌ಯುಗೆ ಭೇಟಿ ನೀಡಿದರು. ಅವರ ಭೇಟಿ ಭಾರಿ ವಿವಾದಕ್ಕೀಡಾಯಿತು. ಆಗ ಬಿಡುಗಡೆಯಾಗಿದ್ದ ‘ಛಪಾಕ್’ ಚಿತ್ರವನ್ನು ಬಹಿಷ್ಕರಿಸುವ ಬಗ್ಗೆ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಣೆಗಳು ಶುರುವಾದವು” ಎಂದರು.
‘ಛಪಾಕ್’ ಸಿನಿಮಾವು ಆಸಿಡ್ ದಾಳಿಯಿಂದ ಬದುಕುಳಿದವರ ಕುರಿತಾದ ಕಥೆಯನ್ನು ಒಳಗೊಂಡಿತ್ತು. ಆದರೆ ಸಿನಿಮಾ ಹಳಿತಪ್ಪಿದ್ದಕ್ಕೆ ಕಾರಣ ಏನೆಂಬುದಕ್ಕೆ ನನಗೆ ಖಾತ್ರಿಯಿದೆ. ದೀಪಿಕಾ ಜೆಎನ್‌ಯು ಭೇಟಿ ಖಂಡಿತವಾಗಿಯು ಚಿತ್ರದ ಮೇಲೆ ಧಕ್ಕೆ ಮಾಡಿದೆ. ಸಿನಿಮಾ ವಿರುದ್ಧ ತಪ್ಪು ಸಂದೇಶ ಹೋಯಿತು ಎಂಬುದನ್ನು ನಾನು ಅಲ್ಲಗಳೆಯುವಂತಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಲ ಬಾಚುವ ಮೃತ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ
2020 ರ ಆರಂಭದಲ್ಲಿ ಜೆಎನ್‌ಯುನಲ್ಲಿ ಮುಸುಕುಧಾರಿ ದುಷ್ಕರ್ಮಿಗಳ ಗುಂಪುಗಳು ಕ್ಯಾಂಪಸ್‌ಗೆ ನುಗ್ಗಿ ಸಾಬರಮತಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿದ್ದವು. ಜೆಎನ್‌ಯು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ‘ದೇಶವಿರೋಧಿ ಘೋಷಣೆ’ಗಳನ್ನು ಎತ್ತಿದ್ದಾರೆ ಎಂಬ ಆರೋಪದೊಂದಿಗೆ ವಿವಾದವು ದೊಡ್ಡ ಸ್ವರೂಪವನ್ನು ಪಡೆದುಕೊಂಡಿತು.
ಜೆಎನ್‌ಯುಗೆ ತೆರಳುವ ಮೊದಲು, ಮಾಧ್ಯಮದೊಂದಿಗೆ ಮಾತನಾಡಿದ್ದ ದೀಪಿಕಾ ಪಡುಕೋಣೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದ ಬಗ್ಗೆ ಮಾತನಾಡಿದ್ದರು. “ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹೆದರುವುದಿಲ್ಲ. ನಾವು ದೇಶ ಮತ್ತು ಅದರ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ದೃಷ್ಟಿಕೋನ ಏನೇ ಇರಲಿ, ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದರು.
‘ಛಪಾಕ್’ ಆಸಿಡ್ ದಾಳಿಯಿಂದ ಬದುಕುಳಿದವರ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ದೀಪಿಕಾ ನಟಿಸಿದ್ದರು. ಅಲ್ಲದೆ ಇದನ್ನು ಸ್ವತಃ ದೀಪಿಕಾ ಸಹ-ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡರೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು.
ಈ ವರ್ಷ, ದೀಪಿಕಾ-ಶಾರುಖ್ ನಟನೆಯ ಸೂಪರ್ ಹಿಟ್ ಚಿತ್ರಗಳಾದ ‘ಪಠಾನ್’ ಮತ್ತು ‘ಜವಾನ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 1000 ಕೋಟಿಗಿಂತ ಹೆಚ್ಚು ಗಳಿಸಿದೆ. ಹೃತಿಕ್ ರೋಷನ್ ಜೊತೆ ‘ಫೈಟರ್’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಮೇಘನಾ ಗುಲ್ಝಾರ್ ಅವರ ಮುಂದಿನ ಚಿತ್ರ ‘ಸ್ಯಾಮ್ ಬಹದ್ದೂರ್’ ಇದೇ ಶುಕ್ರವಾರ, ಡಿಸೆಂಬರ್ 1 ರಂದು ಬಿಡುಗಡೆಯಾಗಿದೆ. ಇದರಲ್ಲಿ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.