ಭಾರತೀಯ ಚಿತ್ರರಂಗವನ್ನು ಜಾಗತಿಕ ಹಂತಕ್ಕೆ ತಂದ ಕೆಲವೇ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ ಅವರ ಸಿನಿಮಾ ಸಾಹಸಗಾಥೆಯ ಸಾಕ್ಷ್ಯಚಿತ್ರ ‘ಮಾಡರ್ನ್ ಮಾಸ್ಟರ್ಸ್: ಎಸ್‌ಎಸ್ ರಾಜಮೌಳಿ’ ಟ್ರೇಲರ್ ಬಿಡುಗಡೆಯಾಗಿದೆ.
ಟ್ರೇಲರ್‌ನಲ್ಲಿ ರಾಜಮೌಳಿ ಅವರ ಪ್ರಸಿದ್ಧ ಸಿನಿಮಾಗಳಾದ ಆರ್‌ಆರ್‌ಆರ್ ಮತ್ತು ಬಾಹುಬಲಿಯ ತೆರೆಮರೆಯ ಕೆಲವು ದೃಶ್ಯಗಳನ್ನು ಒಳಗೊಂಡಿದೆ. ಅವರ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
ರಾಜಮೌಳಿ ಅವರ ಸಿನಿಮಾಗಳಲ್ಲಿ ನಟಿಸಿದ ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಮತ್ತು ಪ್ರಭಾಸ್ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿರುವುದು ಟ್ರೇಲರ್‌ನಲ್ಲಿ ಕಾಣಬಹುದು.
ರಾಜಮೌಳಿಯವರ ಕೆಲಸದ ಮೇಲಿನ ಸಮರ್ಪಣೆಯ ಬಗ್ಗೆ ಮಾತನಾಡುತ್ತಾ, ಜೂನಿಯರ್ ಎನ್‌ಟಿಆರ್, “ಅವರು ಹುಚ್ಚ, ಅವರೊಂದಿಗೆ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಅವರಿಗೆ ಬೇಕಾದುದನ್ನು ಮಾಡಿ, ಅಲ್ಲಿಂದ ಹೊರಬಂದುಬಿಡಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ?ಇನ್ಸೈಡ್ ಔಟ್ ಸಿನಿಮಾ ನೋಡಿ- ಒಳಗಿನ ಹೊರಗೊಂದು ವಿಸ್ಮಯ ಅರಿಯಿರಿ
ಅದೇ ರೀತಿ ರಾಜಮೌಳಿ ಸೆಟ್‌ನಲ್ಲಿ ಮೈಕ್‌ಗಳನ್ನು ಒಡೆಯುವುದನ್ನು ನೋಡಿದ್ದೇನೆ ಎಂದು ರಾಮ್ ಚರಣ್ ಹೇಳಿದ್ದಾರೆ. “ಕೆಲವೊಮ್ಮೆ ನಾನು ಆಘಾತಕ್ಕೊಳಗಾಗುತ್ತೇನೆ. ರಾಜಮೌಳಿ ಅವರ ಚಿತ್ರಗಳನ್ನು ನಾನು ನೋಡಿದಾಗ ನಾನು ನನ್ನನ್ನು ಮೂರನೇ ವ್ಯಕ್ತಿಯಂತೆ ಕಾಣುತ್ತೇನೆ” ಎಂದಿದ್ದಾರೆ.
ರಾಜಮೌಳಿಯನ್ನು ಅವರ ಪತ್ನಿ ರಮಾ ರಾಜಮೌಳಿ, ‘ಕೆಲಸದ ರಾಕ್ಷಸ’ ಎಂದೂ ಕರೆದಿದ್ದಾರೆ. ರಾಜಮೌಳಿ ಅವರು ತಮ್ಮ ಕಥೆಗೆ ಹೇಗೆ ದಾಸರಾಗಿದ್ದಾರೆ ಎಂಬುದನ್ನು ವಿವರಿಸುವುದರೊಂದಿಗೆ ಟ್ರೇಲರ್ ಕೊನೆಗೊಳ್ಳುತ್ತದೆ.
ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಮತ್ತು ಫಿಲ್ಮ್ ಕಂಪ್ಯಾನಿಯನ್ ಸ್ಟುಡಿಯೋಸ್ ನಿರ್ಮಾಣದಲ್ಲಿ ಮಾಡರ್ನ್ ಮಾಸ್ಟರ್ಸ್: ಎಸ್‌ಎಸ್ ರಾಜಮೌಳಿ ಸಾಕ್ಷ್ಯಚಿತ್ರ ಮೂಡಿಬಂದಿದ್ದು, ರಾಘವ್ ಖನ್ನಾ ನಿರ್ದೇಶಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ಜೇಮ್ಸ್ ಕ್ಯಾಮರೂನ್, ಜೋ ರುಸ್ಸೋ, ಕರಣ್ ಜೋಹರ್, ಪ್ರಭಾಸ್, ರಾಣಾ ದಗ್ಗುಬಾಟಿ, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಸಂದರ್ಶನವನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಆಗಸ್ಟ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.