ಮಲಯಾಳಂ ಸಿನಿಮಾದ ಹಿರಿಯ ನಟ ಮೋಹನ್‌ಲಾಲ್ ಅವರಿಗೆ 2023ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಭಾರತದ ಚಿತ್ರರಂಗದಲ್ಲಿ ಅತ್ಯುನ್ನತ ಗೌರವವೆನಿಸಿದ ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 23, 2025ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕುರಿತು ಎಕ್ಸ್‌ನಲ್ಲಿ ಪ್ರಕಟಣೆ ನೀಡಿದ್ದು, “ಮೋಹನ್‌ಲಾಲ್ ಅವರ ಅದ್ಭುತ ಸಿನೆಮಾ ಪ್ರಯಾಣ ಅನೇಕ ಪೀಳಿಗೆಗಳಿಗೆ ಪ್ರೇರಣೆ. ದಿಗ್ಗಜ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಅವರು ಭಾರತೀಯ ಸಿನೆಮಾಗೆ ನೀಡಿರುವ ಅಭೂತಪೂರ್ವ ಕೊಡುಗೆಗಾಗಿ ಗೌರವಿಸಲಾಗುತ್ತಿದೆ. ಅವರ ಅಪ್ರತಿಮ ಪ್ರತಿಭೆ, ಬಹುಮುಖಿ ಅಭಿನಯ ಹಾಗೂ ನಿರಂತರ ಪರಿಶ್ರಮವು ಭಾರತೀಯ ಚಿತ್ರರಂಗದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದೆ” ಎಂದು ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ವಿಷ್ಣುವರ್ಧನ್ @ 75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಮೋಹನಲಾಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೋಹನಲಾಲ್ ಅವರು ಶ್ರೇಷ್ಠತೆ ಮತ್ತು ಬಹುಮುಖತೆಯ ಸಂಕೇತವಾಗಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಅವರ ಶ್ರೇಷ್ಠತೆಯು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚಿನ ಸಿನಿಮಾ ವೃತ್ತಿಜೀವನದಲ್ಲಿ ಮೋಹನಲಾಲ್ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸೇರಿ 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 2001ರಲ್ಲಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ.
ಕಳೆದ ವರ್ಷ ನಟ ಮಿಥುನ್ ಚಕ್ರವರ್ತಿ ಅವರಿಗೆ 2022ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿತ್ತು.