ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ತಂಡಕ್ಕೆ ಶುಭಕೋರಿದ ಧೋನಿ
ಸದ್ಯದಲ್ಲೇ ತೆರೆಗೆ ಬರಲಿದೆ ʼಲೆಟ್ಸ್ ಗೆಟ್ ಮ್ಯಾರೀಡ್ʼ ಸಿನಿಮಾ
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಎಲ್ಲರಿಗೂ ತಿಳಿದಿದೆ. ತಮ್ಮ ಪತ್ನಿ ಸಾಕ್ಷಿ ಜೊತೆಗೂಡಿ ʼಧೋನಿ ಎಂಟರ್‌ಟೈನ್ಮೆಂಟ್ʼ ಬ್ಯಾನರ್ ಶುರು ಮಾಡಿರುವ ಅವರು ತಮಿಳು ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ನಿರ್ಮಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಧೋನಿ ಒಡೆತನದ ಸಂಸ್ಥೆ ಬಂಡವಾಳ ಹೂಡಿರುವ ʼಎಲ್‌ಜಿಎಂʼ (ಲೆಟ್ಸ್ ಗೆಟ್ ಮ್ಯಾರೀಡ್) ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ʼಎಲ್‌ಜಿಎಂʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿರುವ ಧೋನಿ, “ನಿಮ್ಮ ಮುಖದಲ್ಲಿ ನಗು ಮೂಡಿಸುವ ಕೌಟುಂಬಿಕ ಕಥಾಹಂದರವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿ” ಎನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ರಮೇಶ್ ಥಮಿಳ್ಮಣಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಶೂಟಿಂಗ್ ಕಳೆದ ಜನವರಿಯಲ್ಲಿ ಪ್ರಾರಂಭವಾಗಿತ್ತು. ಸದ್ಯ ಕೊನೆಯ ಹಂತದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಕೆಲ ದಿನಗಳಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕೌಟುಂಬಿಕ ಕಥಾಹಂದರವುಳ್ಳ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್, ನದಿಯಾ ಹಾಗೂ ʼಲವ್ ಟು ಡೇʼ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ಹಾಸ್ಯ ಕಲಾವಿದ ಯೋಗಿ ಬಾಬು, ಮಿರ್ಚಿ ವಿಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಮೇಶ್ ಥಮಿಳ್ಮಣಿ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯ ಹೊಣೆಯನ್ನು ಕೂಡ ಹೊತ್ತುಕೊಂಡಿದ್ದಾರೆ.