ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ದೇಶಾದ್ಯಂತ ಪ್ರಯಾಣಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ, ಬೆಂಗಳೂರು ಬಿಟ್ಟು ಹೊರಹೋಗದಂತೆ ಸೆಷನ್ ಕೋರ್ಟ್ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಿದೆ.
ವಿಚಾರಣೆಯಲ್ಲಿರುವ ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೂಡ ವಿಚಾರಣೆ ನಡೆಸುತ್ತಿದೆ. ಹೀಗಾಗಿ, ದರ್ಶನ್ ದೆಹಲಿ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಬೆಕಾಗಿದೆ ಎಂದು ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಆಲಿಸಿರುವ ಹೈಕೋರ್ಟ್, ದೇಶಾದ್ಯಂತ ಸಂಚರಿಸಲು ದರ್ಶನ್‌ಗೆ ಅವಕಾಶ ನೀಡಿದೆ.
ಎರಡು-ಮೂರು ತಿಂಗಳುಗಳ ಹಿಂದೆ ದರ್ಶನ್ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದರು. ಬಳಿಕ, ಪ್ರಕರಣ ಮತ್ತೋರ್ವ ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಎಲ್ಲ 16 ಆರೋಪಿಗಳಿಗೂ ಷರತ್ತುಬದ್ದ ಜಾಮೀನು ನೀಡಲಾಗಿತ್ತು
ಪ್ರಕರಣದ ಹಿನ್ನೆಲೆ;
ದರ್ಶನ್ ಪತ್ನಿ ವಿಜಯಲಕ್ಷ್ಮಿ ರೀತಿಯೇ ತಾವು ಐಷಾರಾಮಿ ಜೀವನ ನಡೆಸಬೇಕೆಂದು ಪವಿತ್ರಾ ಬಯಸಿದ್ದರು. ಅದಕ್ಕಾಗಿ, ಐಷಾರಾಮಿ ಕಾರು ಕೊಡಿಸುವಂತೆ ದರ್ಶನ್‌ಗೆ ಪವಿತ್ರಾ ಒತ್ತಡ ಹಾಕುತ್ತಿದ್ದರು. ಮಾತ್ರವಲ್ಲದೆ, ವಿಜಯಲಕ್ಷ್ಮಿ ಜೊತೆ ಪವಿತ್ರಾ ಸಾಮಾಜಿಕ ಜಾಲತಾಣದಲ್ಲಿ ಜಗಳಕ್ಕಿಳಿದಿದ್ದರು. ಹೀಗಾಗಿ, ದರ್ಶನ್ ಅಭಿಮಾನಿಗಳು ಪವಿತ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ವಿಜಯಲಕ್ಷ್ಮಿ ಅವರನ್ನು ಬೆಂಬಲಿಸಿದ ದರ್ಶನ್ ಅಭಿಮಾನಿಯೇ ಆದ ಚಿತ್ರದುರ್ಗದ ರೇಣುಕಸ್ವಾಮಿ ಅವರು ಪವಿತ್ರಾ ಅವರಿಗೆ ಅವಹೇಳನಕಾರಿ ಮತ್ತು ಅಶ್ಲೀಲ ಸಂದೇಶ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ಅದೇ ಕಾರಣಕ್ಕಾಗಿ, ರೇಣುಕಸ್ವಾಮಿಯನ್ನು ಅಪಹರಿಸಿ ಕ್ರೂರವಾಗಿ ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್, ಪವಿತ್ರಾ ಮತ್ತು ಇತರ 15 ಮಂದಿಯನ್ನು 2024ರ ಜೂನ್ 11ರಂದು ಪೊಲೀಸರು ಬಂಧಿಸಿದ್ದರು.
131 ದಿನಗಳನ್ನು ಕಸ್ಟಡಿಯಲ್ಲಿದ್ದ ದರ್ಶನ್‌ಗೆ ಅನಾರೋಗ್ಯದ ಕಾರಣಕ್ಕಾಗಿ 2024ರ ಅಕ್ಟೋಬರ್ 30ರಂದು ಜಾಮೀನು ನೀಡಲಾಗಿದ್ದು, ದರ್ಶನ್ ಜೈಲಿನಿಂದ ಹೊರಬಂದಿದ್ದಾರೆ.
ದರ್ಶನ್ ಮತ್ತು ಇತರರಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನೆಡಸಿದ್ದ ಸುಪ್ರೀಂ ಕೋರ್ಟ್ ಜನವರಿ 24 ರಂದು ದರ್ಶನ್, ಪವಿತ್ರಾ ಮತ್ತು ಇತರ ಐದು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು.