ನಾದಬ್ರಹ್ಮ ವಿವಾದ | ಅನಾವರಣಗೊಂಡ ಶ್ಯಾನುಭೋಗರ ಸಣ್ಣತನಗಳು

Date:

Advertisements
ಹೊಳೆದಾಟಿದ ಮೇಲೆ ಅಂಬಿಗ ನಿನ್ನ ಹಂಗೇಕೆ ಎಂಬ ಗಾದೆಯೇ ನಿಮ್ಮ ನಾದಬ್ರಹ್ಮ ವಿವಾದ ಕುರಿತ ಮಾತುಗಳನ್ನು ಕೇಳಿದ ಮೇಲೆ ಅನಿಸಿದ್ದು, ನಿಮ್ಮ ಸಾಧನೆ ಮರೆತು ವೇದನೆಯ ಮೇಲೆ ಕನಿಷ್ಠ ಕನಿಕರವೂ ಬರಲಿಲ್ಲ. ಗಣಪತಿಯ ಮಾತಿಗೆ ಮರುಳಾಗಿ ಶ್ಯಾನುಭೋಗರು ಬೆತ್ತಲಾದಂತಾಯ್ತು.

ಹಾಡುಗಾರ ಶಂಕರ ಶ್ಯಾನುಭೋಗ್, ಬಿ.ಗಣಪತಿ ಎಂಬ ಮನುವಾದಿಯ ಮುಂದೆ ತನ್ನ ಅಳಲು ಹೇಳಿಕೊಳ್ಳುತ್ತಿರುವ ವೀಡಿಯೋಗಳು ಈಗ ಹರಿದಾಡುತ್ತಿವೆ.

ಪ್ರತಿಯೊಬ್ಬ ಕಲಾವಿದರೂ ಅಲ್ಲಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ದೊಡ್ಡವರ ಅನುಭವಗಳನ್ನು ಮುಖ್ಯವಾಹಿನಿಗಳು ಎನ್‌ಕ್ಯಾಶ್ ಮಾಡಿಕೊಳ್ಳುತ್ತವೆ. ಅಷ್ಟೇನು ಪ್ರಸಿದ್ದರಲ್ಲದವರು ಹೀಗೆ ಯೂಟ್ಯೂಬ್ ಚಾನಲ್‌ನವರ ಬಳಿ ಕಣ್ಣೀರಾಗುತ್ತಾರೆ!

ಈ ಶ್ಯಾನುಭೋಗರು ಚೆನ್ನಾಗಿ ಹಾಡ್ತಾರೆ ಅಂತ ಲೋಕಕ್ಕೆ ತಿಳಿದಿದ್ದು ಹೇಗೆ? ಅವರು ಚಲನಚಿತ್ರಗಳಲ್ಲಿ ಹಾಡಿದ ನಂತರವಷ್ಟೇ!

Advertisements

ಅದನ್ನು ಅವರೇ ಹೇಳುತ್ತಾರೆ… ನಾನು ಅವಕಾಶಕ್ಕಾಗಿ ಅನ್ನನೀರಿಲ್ಲದೆ ಹಸಿದು ಕಾದಿದ್ದೆ, ಕಾಲಿಡಿದು ಬೇಡುತ್ತಿದ್ದೆ. ನನಗೆ ಸಂಸಾರ ನಡೆಸಬೇಕಾದ ಹೊರೆಯಿತ್ತು. ಹಾಗಾಗಿ ನನಗೆ ಬೇರೆ ದಾರಿ ಇರಲಿಲ್ಲ.

ಅದೇ ಶ್ಯಾನುಭೋಗರು ಈಗ ಹೇಳುತ್ತಾರೆ… ನಾನು ಕೆಟ್ಟ ಹಾಡುಗಳನ್ನು ಯಾವುದೇ ಕಾರಣಕ್ಕೂ ಹಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಗುರುಕಿರಣ್, ಅರ್ಜುನ್ ಜನ್ಯರಂತಹ ಸಂಗೀತ ನಿರ್ದೇಶಕರು ಎಷ್ಟೇ ಗೋಗರೆದರೂ ನಾನು ಹಾಡಿನ ಸಾಹಿತ್ಯ ನೋಡಿ ತಿರಸ್ಕರಿಸಿದೆ. ನಾನು ಹಾಡಿರುವ ಯಾವುದೇ ಸಿನಿಮಾ ಹಾಡನ್ನು ನಾನು ಯಾವುದೇ ವೇದಿಕೆಗಳಲ್ಲಿ ಅಭಿಮಾನಿಗಳು ಎಷ್ಟೇ ಹಂಬಲಿಸಿ ಕೇಳಿದರೂ ಹಾಡುವುದಿಲ್ಲ. ಈಗಿನ ಸಿನಿಮಾ ಹಾಡುಗಳಲ್ಲಿ ಸಾತ್ವಿಕತೆ ಎಂಬುದೇ ಇಲ್ಲ.

ಅಬ್ಬಾ, ಎಂಥಾ ಇಬ್ಬಗೆಯ ಮಾತುಗಳು!

ಚಿತ್ರಗೀತೆಗಳಲ್ಲಿ ಸಾತ್ವಿಕತೆ ಇಲ್ಲದ ಮೇಲೆ ಆ ರಂಗಕ್ಕೆ ಶ್ಯಾನುಭೋಗರು ಹೋದುದೇಕೆ? ಅವರಿವರ ಕಾಲಿಡಿದು ಬೇಡಿದುದೇಕೆ?

ಆಗ ಹಸಿವು. ಈಗ ಹೊಟ್ಟೆ ತುಂಬಿದ ಮಾತು. ಭಲೇ…

ಚಿತ್ರರಂಗದಲ್ಲಿರುವ ಪ್ಯಾಕೇಜ್‌ಗಳ ಮಾತು, ಹೊಸಬರಿಗೆ ಆಗುವ ಅನ್ಯಾಯ ಅವಮಾನದ ಬಗ್ಗೆ ಗಣಪತಿ ಮುಂದೆ ಕಣ್ಣೀರಾಗುತ್ತಾರೆ! ಆ ಗಣಪತಿಯೋ ಏನೂ ತಿಳಿಯದಿರುವಂತೆ “ಓ ಹೌದಾ? ಹೀಗೆಲ್ಲಾ ಉಂಟಾ?!” ಎಂಬಂತೆ ರಿಯಾಕ್ಷನ್ ಕೊಡುತ್ತಾರೆ.

ಚಿತ್ರರಂಗ ಮಾತ್ರವಾ? ಎಲ್ಲಾ ರಂಗದಲ್ಲೂ ಪ್ಯಾಕೇಜ್ ಕತೆಗಳಿವೆ. ಎಲ್ಲಾ ರಂಗದಲ್ಲೂ ಹೊಸಬರು ಒಂದಷ್ಟು ಕಾಲ ಹಳಬರ ದೌಲತ್ತು ಸಹಿಸಬೇಕಾಗುತ್ತದೆ. ನಿರ್ದೇಶಕರಾಗುವ ಕನಸು ಕಂಡು ಚಂದನವನಕ್ಕೆ ಬರುವ ಬಹುತೇಕರು ಸಹಾಯಕರಾಗಿ ಎಷ್ಟೋ ವರ್ಷಗಳ ಕಾಲ ಬಿಟ್ಟಿಚಾಕರಿ ಮಾಡುತ್ತಾರೆ. ಅದು ಅವರವರ ಆಯ್ಕೆ.

ಇದು ಮಾಧ್ಯಮ ಕ್ಷೇತ್ರದಲ್ಲಿಲ್ಲವೇ? ಹೊಸಬರು ಎಷ್ಟೋ ಸಾಹಸ ಮಾಡಿ ಅದ್ಬುತವಾದ ಸುದ್ದಿ ವಿಶ್ಲೇಷಣೆಗಳನ್ನು ಮಾಡಿದರೂ ಅದನ್ನು ಸೀನಿಯರ್‍‌ಗಳು ಅದುಮುತ್ತಾರೆ, ಅದು ಪ್ರಕಟವಾಗದಂತೆ ನೋಡಿಕೊಳ್ಳುತ್ತಾರೆ.

ಗಣಪತಿಯ ಮನತಣಿಸುವ ಸಲುವಾಗಿ ಶ್ಯಾನುಭೋಗರು ಹಂಸಲೇಖರ ಸಾಲದ ಪ್ರಕರಣ ತರುತ್ತಾರೆ. ಆಗ ಗಣಪತಿಗೆ ಮಹಾ ಉತ್ಸಾಹ… ಹೇಳಿ ಹೇಳಿ ಒಂದೂ ಬಿಡದೆ ಹೇಳಿ ಎಂದು ಹುರಿದುಂಬಿಸುತ್ತಾರೆ.

ಶ್ಯಾನುಭೋಗರು ನಾದಬ್ರಹ್ಮ ಎಂಬ ಬಿರುದು ಕುರಿತು ಉಪದೇಶ ಮಾಡುತ್ತಾರೆ, ಅದು ಮುರಳಿಯೊಬ್ಬನಿಗೇ ಮಾತ್ರವಂತೆ. ಭಾರತದ ನಾದಕ್ಕೆ ಮುರುಳಿ ಬ್ರಹ್ಮ ಇರಬಹುದೇನಪ್ಪಾ. ಪಾಶ್ಚಾತ್ಯ ಸಂಗೀತಕ್ಕೂ ಮುರುಳಿಯೇ ನಾದಬ್ರಹ್ಮ ಎಂಬುದನ್ನು ವಿದೇಶಿಗರು ಒಪ್ಪುವರೇ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ

ಪ್ರತಿಯೊಬ್ಬ ಸಂಗೀತಗಾರ, ಹಾಡುಗಾರ, ಸಾಹಿತಿ, ಪತ್ರಕರ್ತ ಅಥವಾ ಇನ್ಯಾರೇ ಆದರೂ ಅವರಿಗೆ ಪ್ರಿಯವಾದ ಅವರವರ ಕ್ಷೇತ್ರದ ಪ್ರಸಿದ್ದಿಗಳನ್ನು ಅನುಕರಿಸುತ್ತಾರೆ. ಕೆಲವರು ಯಥಾವತ್ತು ಅನುಕರಿಸಿದರೆ ಕೆಲವರು ಅದರಿಂದ ಸ್ಪೂರ್ತಿ ಪಡೆದು ಬೇರೊಂದು ತರ ಸೃಷ್ಟಿಸುತ್ತಾರೆ. ಇದು ಲೋಕಾರೂಢಿ. ಇದೇನು ಮಹಾಪರಾಧವೇ? ಶ್ಯಾನುಭೋಗರು ಯಾರ ಸ್ಪೂರ್ತಿಯೂ ಇಲ್ಲದೆ ಸ್ವತಂತ್ರವಾಗಿ ಮೂರ್ತಗೊಂಡವರೇ? ಅವರ ಸ್ವರದಲ್ಲಿ ಹಿಂದಿನ ಯಾರ ಪ್ರೇರಣೆಯೂ ಇಲ್ಲವೇ? ಸಾಕ್ಷಾತ್ ಮುರಳಿಯ ಪ್ರೇರಣೆಯೂ ಇಲ್ಲವೇ?

ಗಣಪತಿಯವರೇ ಯೂ ಟ್ಯೂಬ್ ಎಂಬ ವಾಹಿನಿಯ ಪ್ರಪ್ರಥಮ ಜನಕರೇ? ಯಾರೋ ಮಾಡಿದ್ದರ ಕಾಪಿ ಅಲ್ವಾ? ಹೋಗಲಿ ಹೀಗೆ ಶ್ಯಾನುಭೋಗರ ತರದವರನ್ನು ಹಿಡಿದು ತಂದು ಅನುಭವದ ಕಣ್ಣೀರುಗರೆಸುವ ಕಾರ್ಯಕ್ರಮ ಎಂಬ ಐಡಿಯಾ ಪ್ರಥಮವಾಗಿ ಗಣಪತಿಯವರ ಮೆದುಳಿನಲ್ಲಿ ಮೊಳೆತದ್ದೇ? ಎಷ್ಟೋ ಸಾವಿರ ಜನರು ಮಾಡಿದ ನಂತರವಲ್ಲವೇ ಗಣಪತಿಯವರೂ ಮಾಡಿರೋದು?

ಶ್ಯಾನುಭೋಗರಿಗೆ ಆಗಿರುವ ಅನುಭವಗಳು ಬಹಳ ವಿಶಿಷ್ಟವಾದ ಮತ್ತು ಅಪರೂಪದವುಗಳೇ? ಜಗತ್ತಿನ ಪ್ರತಿಯೊಬ್ಬರೂ ಅನುಭವಿಸಿದ್ದಾರೆ. ಅನುಭವಿಸುತ್ತಾರೆ ಮತ್ತು ಮುಂದೆಯೂ ಇದು ನಡೆಯುತ್ತದೆ. ಅದರ ಬದಲು ಮುಂದಿನ ತಲೆಮಾರಿನ ಸಂಗೀತಗಾರರಿಗೆ ಏನಾದರು ಮಾರ್ಗ ತೋರಬಹುದಿತ್ತೇನೋ… ಅಲ್ವಾ ಶ್ಯಾನುಭೋಗರೇ?

ನಾನೂ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ, ಪತ್ರಿಕಾ ರಂಗದಲ್ಲಿ ವರದಿಗಾರನಾಗಿ ಇಂತಹ ಸಾವಿರಾರು ನೋವುಗಳನ್ನು ಅನುಭವಿಸಿಯೇ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಯಾವ ಮನೋರಂಜನ್ ಪ್ರಭಾಕರ್ ನಿಮಗೆ ಕಡಿಮೆ ಹಣ ಕೊಟ್ಟರೋ ಅವರು ಸಹ ಆ ಸ್ಥಾನಕ್ಕೆ ಬರಲು ನಿಮಗಿಂತಲೂ ಹೆಚ್ವಿನ ಅವಮಾನ ಶೋಷಣೆ ಅನುಭವಿಸಿಯೇ ಬಂದಿರುತ್ತಾರೆ. ಹಣ ಕೊಡದೆ ಅಲೆದಾಡಿಸಿದ ಹಂಸಲೇಖರಿಗೂ ಎಷ್ಟೋ ನಿರ್ಮಾಪಕರು ಹಣಸಂದಾಯ ಮಾಡದೆ ಅಲೆದಾಡಿಸಿರುತ್ತಾರೆ ಅಲ್ಲವೇ? ಅವರ ಬಳಿಯೂ ನಗದಾಗದ ಎಷ್ಟೋ ಚೆಕ್ಕುಗಳು ಬಿದ್ದಿರುತ್ತವೆ ಅಲ್ಲವೇ? ಆದರೂ ಅವರೆಲ್ಲರೂ ಅದೆಲ್ಲವನ್ನೂ ಸಹಿಸಿಕೊಂಡು ತಮ್ಮ ಹಾದಿಯಲ್ಲೆ ಮುನ್ನಡೆದುದರ ಫಲವಾಗಿ ಇಂದು ನಾದಬ್ರಹ್ಮ ಆಗಿದ್ದಾರೆ.

ಅವರೆಲ್ಲರ ಗರಡಿಯಲ್ಲಿ ಹಾಡಿದ ಕಾರಣಕ್ಕೆ ನಿಮಗೆ ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಬಂದಿದೆ. ಅದರೊಡನೆ ಕೆಟ್ಟ ಸಿನಿಮಾ ಹಾಡುಗಳನ್ನು ನಾನು ಕೋಟಿ ಕೊಟ್ಟರೂ ಹಾಡುವುದಿಲ್ಲ ಎಂಬ ಧಿಮಾಕೂ ಬಂದಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ ಶ್ಯಾನುಭೋಗರೇ.

ಈಗ ನನ್ನ ಶ್ರೋತೃಗಳು ಮೇಲ್ವರ್ಗದವರು ಎಂದು ಹೇಳುವಷ್ಟು ಗರ್ವ ನಿಮಗೆ. ಆದರೆ ಕಲಿಯುವಾಗ? ಎಲ್ಲರ ಕೈಕಾಲಿಡಿದೆ ಎಂದಿರಿ. ಈ ಶೋಷಣೆ ನನ್ನನ್ನು ಹಿಂಡಿತು ಎಂದು ಕಣ್ಣೀರು ಸುರಿಸುವ ನಿಮಗೆ ಇಲ್ಲಿರುವ ಬಹುದೊಡ್ಡ ಸಮುದಾಯವನ್ನು ನಿಮ್ಮ ಮೇಲ್ವರ್ಗದವರು ಶತಶತಮಾನಗಳಿಂದಲೂ ಅಕಾರಣವಾಗಿ, ಮೈಮುರಿದು ಬೆವರು ಹರಸಿ ದುಡಿದೂ ದೂರವೇ ಉಳಿದರಲ್ಲ, ಅವರ ಬಗ್ಗೆ ಯಾಕೆ ವ್ಯವಸ್ಥೆ ಹೀಗೆ? ಎಂದು ನಿಮಗಾಗಲಿ, ಗಣಪತಿಗಾಗಲಿ ಎಂದಾದರೂ ಅನಿದಿದ್ದಿದೆಯಾ?

ನಾಡಿನೆಲ್ಲಾ ನಗರಗಳನ್ನು ಸ್ವಚ್ಚವಾಗಿಡುವ ಸ್ವಚ್ ಭಾರತದ ನಿಜ ಸೇನಾನಿಗಳಾದ ಪೌರಕಾರ್ಮಿಕ ಬಂಧುಗಳು ಹೀಗೇ ಇರಬೇಕೆಂದು ನಿಯಮ ಮಾಡಿದವರು ಯಾರು, ಏಕೆ ಅನ್ನುವುದನ್ನು ಅಧ್ಯಯನ ಮಾಡಿ. ಮತ್ತು ಈ ಪೌರಕಾರ್ಮಿಕ ಬಂಧುಗಳ ಈ ಕಾಯಕ ಖಾಯಂ ಆದುದಲ್ಲ ಗೊತ್ತಿದೆಯಾ? ಹೋಗಲಿ ಅದರಲ್ಲಿರುವ ಶೋಷಣೆಯ ಆಳ ಗೊತ್ತಿದೆಯಾ?

ಅವರನ್ನು ಪಟ್ಟಣದ ಪಟೇಲರೋ, ಶ್ಯಾನುಭೋಗರೋ ಅಥವಾ ಭಟ್ಟರೋ ಗುತ್ತಿಗೆಗೆ ನೇಮಿಸಿಕೊಂಡು ಸರ್ಕಾರದಿಂದ ಒಂದು ಪ್ಯಾಕೇಜ್ ಪಡೆದುಕೊಂಡು ಈ ಬಡ ಪೌರಕಾರ್ಮಿಕರಿಗೆ ಆರುಕಾಸು ಕೊಟ್ಟು ಕಳಿಸುತ್ತಾರೆ ಎಂಬ ಘೋರ ಶೋಷಣೆಯ ಮುಂದೆ ನೀವಾಗೇ ಕಲಿಯಲು ಹೋದ, ನೀವಾಗೇ ಅವಕಾಶ ಅರಸಿಹೋದ ಗಳಿಗೆಯ ಶೋಷಣೆ ದೊಡ್ಡದೇ, ಲೆಕ್ಕಹಾಕಿ. ಅದೆಲ್ಲದಕ್ಕಿಂತಲೂ ಈ ಸ್ವಚ್ ಭಾರತ್ ಹೆಸರಲ್ಲಿ ದೇಶದಲ್ಲಿ ಬಟವಾಡೆಯಾಗಿರುವ ಕೋಟಿಗಳೆಷ್ಟು? ಕಾರ್ಮಿಕರಿಗೆ ತಲುಪಿದ್ದೆಷ್ಟು? ಅದರ ಹೆಸರಲ್ಲಿ ಹೀರೋ ಆದವರು ಯಾರು? ಝೀರೋ ಆದವರು ಯಾರು? ಎಲ್ಲವನ್ನೂ ನೀವೀಗ ಅರಿಯಬೇಕು.

ಹೊಳೆದಾಟಿದ ಮೇಲೆ ಅಂಬಿಗ ನಿನ್ನ ಹಂಗೇಕೆ ಎಂಬ ಗಾದೆಯೇ ನಿಮ್ಮ ನಾದಬ್ರಹ್ಮ ವಿವಾದ ಕುರಿತ ಮಾತುಗಳನ್ನು ಕೇಳಿದ ಮೇಲೆ ಅನಿಸಿದ್ದು, ನಿಮ್ಮ ಸಾಧನೆ ಮರೆತು ವೇದನೆಯ ಮೇಲೆ ಕನಿಷ್ಠ ಕನಿಕರವೂ ಬರಲಿಲ್ಲ. ಗಣಪತಿಯ ಮಾತಿಗೆ ಮರುಳಾಗಿ ಶ್ಯಾನುಭೋಗರು ಬೆತ್ತಲಾದಂತಾಯ್ತು.

-ಡಾ. ಚಮರಂ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಬೇರೆಲ್ಲರ ನೋವಿಗಿಂತ ನನಗಾದ ನೋವೇ ದೊಡ್ಡದು ಎನ್ನುವವರು ಬಹುಶಃ ಶ್ರೀಯುತ ಶಾನುಭೋಗರ ರೀತಿಯಲ್ಲಿ ಮಾತನಾಡುತ್ತಾರೆ.

  2. ಇದು ಹಂಸಲೇಖನ ಸಣ್ಣತನ, I ಹಿಂದೆಯೂ ಕೆಲವು ವಿಷಯಗಳಲ್ಲಿ ಅವನ ಸಣ್ಣತನ ವ್ಯಕ್ತವಾಗಿದೆ

  3. ಒಬ್ಬರು ತನಗೆ ಆದ ಅವಸ್ಥೆ ಹೇಳಿದ್ದಾರೆ ಸಂದರ್ಶನದಲ್ಲಿ ಆಸ್ಟೇ.. ಲೋಕಕ್ಕೆ ದೊಡ್ಡವರ ಬಣ್ಣ ಬಯಲು ಮಾಡಿದ್ದಾರೆ. ಯಾಕೆ ನೀವು ನೊಂದ ಜನರ ವಿರುದ್ಧ ಇದ್ದೀರಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

Download Eedina App Android / iOS

X