ಫಿಲ್ಮ್ ಫೇರ್ ಪ್ರಶಸ್ತಿಗಳ ಹಿಂದೆ ದೊಡ್ಡ ರಾಜಕೀಯವಿದೆ
ಪೈಪೋಟಿಗಾಗಿ ಕೊಡುವ ಪ್ರಶಸ್ತಿಗಳಿಗೆ ಯಾವುದೇ ಬೆಲೆ ಇಲ್ಲ
ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್ ಶಾ ತಮಗೆ ಬಂದ ʼಫಿಲ್ಮ್ ಫೇರ್ʼ ಪ್ರಶಸ್ತಿಗಳನ್ನು ತೋಟದ ಮನೆಯ ಬಚ್ಚಲು ಕೋಣೆಯ ಬಾಗಿಲಿಗೆ ಹಿಡಿಕೆಗಳನ್ನಾಗಿ ಬಳಸುತ್ತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಾಸೀರುದ್ದೀನ್ ಶಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼತಾಜ್ʼ ವೆಬ್ ಸರಣಿ ಇತ್ತೀಚೆಗೆ ʼಝೀ 5ʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆ ಯುಟ್ಯೂಬ್ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿರುವ ಅವರು, ʼಫಿಲ್ಮ್ ಫೇರ್ʼ ಪ್ರಶಸ್ತಿಗಳ ಕುರಿತು ಮಾತನಾಡಿದ್ದಾರೆ.
“ನಿಮಗೆ ಬಂದ ಪ್ರಶಸ್ತಿಗಳನ್ನು ತೋಟದ ಮನೆಯ ಬಾಗಿಲಿಗೆ ಹಿಡಿಕೆಯಾಗಿ ಬಳಸುತ್ತಿದ್ದೀರಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜವೇ” ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿರುವ ಅವರು, “ನನ್ನ ಪ್ರಕಾರ ಈ ರೀತಿಯ ಪ್ರಶಸ್ತಿಗಳಿಗೆ ಯಾವುದೇ ಬೆಲೆ ಇಲ್ಲ. ಮೊದ ಮೊದಲು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಾಗ ಖುಷಿಪಡುತ್ತಿದೆ. ಈ ಪ್ರಶಸ್ತಿಗಳ ಹಿಂದೆ ದೊಡ್ಡ ರಾಜಕಾರಣವೇ ನಡೆಯುತ್ತದೆ ಎಂಬುದು ಕ್ರಮೇಣವಾಗಿ ನನಗೆ ಅರ್ಥವಾಯಿತು. ಈ ಪ್ರಶಸ್ತಿಗಳು ಅರ್ಹತೆಯ ಆಧಾರದ ಮೇಲೆ ಸಿಗುವುದಿಲ್ಲ. ಹೀಗಾಗಿ ಈ ರೀತಿಯ ಪ್ರಶಸ್ತಿಗಳನ್ನು ಪಡೆಯುವುದನ್ನು ನಾನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಆದರೆ, ಪದ್ಮಶ್ರೀ ಮತ್ತು ಪದ್ಮ ಭೂಷಣ ತರಹದ ಪ್ರಶಸ್ತಿಗಳು ಬಂದಾಗ ಖುಷಿಪಟ್ಟಿದ್ದೆ. ಆ ಪ್ರಶಸ್ತಿಗಳು ನನ್ನ ತಂದೆಯ ಮಾತನ್ನು ನೆನಪಿಸುತ್ತಿದ್ದವು. ʼನಟನೆಯನ್ನು ನಂಬಿಕೊಂಡು ಹೀಗೆ ಕೆಲಸಕ್ಕೆ ಬಾರದವನ ರೀತಿ ಬದುಕಬೇಡʼ ಎನ್ನುತ್ತಿದ್ದರು. ನಾನು ಆ ಪ್ರಶಸ್ತಿಗಳನ್ನು ಪಡೆಯಲು ರಾಷ್ಟ್ರಪತಿ ಭವನಕ್ಕೆ ಹೋದಾಗ ಅಪ್ಪನನ್ನು ನೆನೆಸಿಕೊಂಡಿದ್ದೆ. ನನಗೆ ದಕ್ಕಿರುವ ಪ್ರಶಸ್ತಿಗಳನ್ನು ನೋಡಿ ಮೇಲಿರುವ ಅಪ್ಪ ಖುಷಿ ಪಟ್ಟಿರುತ್ತಾರೆ ಎಂದುಕೊಂಡೆ. ಆದರೆ, ಪೈಪೋಟಿಗಾಗಿ ಕೊಡಮಾಡುವ ಈ ಪ್ರಶಸ್ತಿಗಳು ನನಗೆ ಹಿಡಿಸಲ್ಲ” ಎಂದಿದ್ದಾರೆ.
“ಶ್ರಮವಹಿಸಿ ಪಾತ್ರಗಳಿಗೆ ಜೀವ ತುಂಬುವ ಪ್ರತಿಯೊಬ್ಬರೂ ಅತ್ಯುತ್ತಮ ಕಲಾವಿದರೇ. ಅಂತಹ ಹಲವಾರು ಕಲಾವಿದರಲ್ಲಿ ಒಬ್ಬರನ್ನು ಆರಿಸಿ, ಇವರೇ ಈ ವರ್ಷದ ಅತ್ಯುತ್ತಮ ಕಲಾವಿದ ಎನ್ನುವುದು ನ್ಯಾಯವೇ? ಇಂತಹ ಪ್ರಶಸ್ತಿಗಳಿಗೆ ನಾನು ಬೆಲೆ ಕೊಡುವುದಿಲ್ಲ. ಇತ್ತೀಚೆಗೆ ನನಗೆ ಬಂದ ಎರಡು ಪಶಸ್ತಿಗಳನ್ನು ಪಡೆಯಲು ಸಮಾರಂಭಗಳಿಗೇ ಹೋಗಿಲ್ಲ. ಹೀಗಾಗಿಯೇ ನಾನು ತೋಟದ ಮನೆ ಕಟ್ಟಿಸಿದಾಗ ಎರಡು ಪ್ರಶಸ್ತಿಗಳನ್ನು ತೋಟದ ಮನೆಯಲ್ಲಿ ಇಡಲು ನಿರ್ಧರಿಸಿದ್ದೆ. ಅದರಂತೆಯೇ ತೋಟದ ಮನೆಯ ಬಚ್ಚಲು ಕೋಣೆ ಬಾಗಲಿಗೆ ಈ ಎರಡೂ ಪ್ರಶಸ್ತಿಗಳು ಹಿಡಿಕೆಯಾಗಿವೆ. ಯಾರೇ ಬಚ್ಚಲು ಕೋಣೆಗೆ ಹೋಗಿ ಬಂದರೂ ಅವರಿಗೆ ಎರಡು ಪ್ರಶಸ್ತಿ ಸಿಗುತ್ತವೆ” ಎಂದು ಹಾಸ್ಯಮಯವಾಗಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.