‘ನಾತಿಚರಾಮಿ’ ಮೂಲಕ ದಿಟ್ಟ ಮಹಿಳಾ ಪಾತ್ರವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಖ್ಯಾತ ನಿರ್ದೇಶಕ ಮಂಸೋರೆ, ತಮ್ಮ ಮುಂದಿನ ಚಿತ್ರ ʼದೂರ ತೀರ ಯಾನʼದ ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಸೆಳೆಯಲು ಸಜ್ಜಾಗಿದ್ದಾರೆ. ಈ ಸಿನಿಮಾ ಜುಲೈ 11ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಈ ಹಿಂದೆ ನಾತಿಚರಾಮಿಯಲ್ಲಿ ‘ಗೌರಿ’ ಪಾತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಪಡೆದಿದ್ದ ಶೃತಿ ಹರಿಹರನ್, ಇದೀಗ ಮಂಸೋರೆಯ ಹೊಸ ಚಿತ್ರದಲ್ಲೂ ವಿಶೇಷವಾಗಿ ʼಗೌರಿʼ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಮತ್ತು ನಾಯಕನ ಹೊರತಾಗಿ ಇತರೆ ಪಾತ್ರಗಳ ಪರಿಚಯವನ್ನು ಆರಂಭಿಸಿರುವ ತಂಡ, ಮೊದಲನೆಯದಾಗಿ ‘ಗೌರಿ’ಯನ್ನು ಪರಿಚಯಿಸುವ ವಿಶೇಷ ವಿಡಿಯೋವನ್ನೂ ಬಿಡುಗಡೆ ಮಾಡಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರವು ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿ ಯು/ಎ ಪ್ರಮಾಣಪತ್ರ ಪಡೆದಿದೆ. ಪ್ರಚಾರ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡ ಜೂನ್ 28 ರಂದು (ಶನಿವಾರ) ಬೆಳಗ್ಗೆ 11 ಗಂಟೆಗೆ ಕಿಚ್ಚ ಸುದೀಪ್ ರವರ ಮೂಲಕ ʼದೂರ ತೀರ ಯಾನʼ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಸದಭಿರುಚಿಯ “X&Y” ಚಿತ್ರ ಈ ವಾರ ತೆರೆಗೆ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನೆಮಾ “ನಾತಿಚರಾಮಿ”. ಮಂಸೋರೆ ನಿರ್ದೇಶನ ಮಾಡಿದ್ದ ಈ ಸಿನೆಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ಸಿನೆಮಾಗೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದು ಕೇವಲ ಪ್ರಶಸ್ತಿಯ ಕಾರಣಕಷ್ಟೇ ಅಲ್ಲದೇ ಈ ಸಿನೆಮಾದ ಕಥಾ ವಸ್ತುವೂ ಹೆಚ್ಚು ಚರ್ಚಿತವಾಗಿ, ನೆಟ್ ಫ್ಲಿಕ್ಸ್ ಮೂಲಕ ದೇಶ ವಿದೇಶದ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಗೌರಿ ಪಾತ್ರ ಮಾಡಿದ್ದ ಶೃತಿ ಹರಿಹರನ್ ಮತ್ತೆ ಮಂಸೋರೆ ಅವರ ಹೊಸ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಪರಿಚಯದ ವಿಡಿಯೋ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.