ಇತ್ತೀಚೆಗೆ ತಮಿಳಿನಲ್ಲಿ ಬಿಡುಗಡೆಗೊಂಡಿದ್ದ ‘ಅನ್ನಪೂರ್ಣಿ’ ಸಿನಿಮಾದಲ್ಲಿ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳು ಇವೆ ಎನ್ನುವ ಆರೋಪ ಕೇಳಿಬಂದ ಬಳಿಕ ವಿವಾದಕ್ಕೆ ಒಳಗಾಗಿತ್ತು. ಈ ಕುರಿತು ನಟಿ ನಯನತಾರಾ ಮೌನ ಮುರಿದಿದ್ದು, ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಸುದೀರ್ಘವಾದ ಪತ್ರವೊಂದನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ನಾನು ಸೇರಿದಂತೆ ಅನ್ನಪೂರ್ಣಿ ಚಿತ್ರತಂಡದವರು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶ ಹೊಂದಿಲ್ಲ. ಸಕಾರಾತ್ಮಕ ಸಂದೇಶ ಹಂಚಿಕೊಳ್ಳುವ ಪ್ರಯತ್ನದಲ್ಲಿ ಅಜಾಗರೂಕತೆಯಿಂದ ನೋವುಂಟು ಮಾಡಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಸೆನ್ಸಾರ್ ಗೆ ಒಳಪಟ್ಟಿದ್ದ ಸಿನಿಮಾವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದನ್ನು ನಾನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.
“ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ. ದೇಶಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Spread Positivity 👍God Bless😇 pic.twitter.com/vFj6JHdzGp
— Nayanthara✨ (@NayantharaU) January 18, 2024
‘ಜೈ ಶ್ರೀರಾಮ್’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯುವ ಮೂಲಕ ಪತ್ರವನ್ನು ಆರಂಭಿಸಿರುವ ನಟಿ ನಯನತಾರಾ, “ಈ ಪತ್ರವನ್ನು ನಾನು ಭಾರವಾದ ಹೃದಯದಿಂದ, ಇತ್ತೀಚೆಗೆ ನಮ್ಮ ‘ಅನ್ನಪೂರ್ಣಿ’ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಬರೆಯುತ್ತಿದ್ದೇನೆ. ಅನ್ನಪೂರ್ಣಿಯನ್ನು ನಾವು ಕೇವಲ ಸಿನಿಮಾ ಮಾಡಬೇಕು ಅಂತ ಮಾಡಿದ್ದಲ್ಲ. ಅದರ ಹಿಂದೊಂದು ಉದ್ದೇಶವೂ ಇರುತ್ತದೆ” ಎಂದು ಹೇಳಿದ್ದಾರೆ.
“ನಾನು ಪಾಸಿಟಿವ್ ಮೆಸೇಜ್ ಅನ್ನು ಕೊಡುವ ಪ್ರಯತ್ನದಲ್ಲಿ, ನಮಗೆ ಅರಿವಿಲ್ಲದೆ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದೇವೆ. ನಮ್ಮ ಸಿನಿಮಾ ಸೆನ್ಸಾರ್ ಆಗಿ ಚಿತ್ರಮಂದಿರದಲ್ಲಿ ಹಾಗೂ ಓಟಿಟಿಯಲ್ಲೂ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾವನ್ನು ಓಟಿಟಿ ವೇದಿಕೆಯಿಂದ ತೆಗೆದು ಹಾಕುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂಡದ ಉದ್ದೇಶ ಯಾರದ್ದೇ ಭಾವನೆಗಳಿಗೆ ಅಥವಾ ನಂಬಿಕೆಗೆ ಧಕ್ಕೆಯನ್ನು ಉಂಟುಮಾಡುವುದಾಗಿರಲಿಲ್ಲ. ನಾನು ದೇವರಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವವಳು. ದೇಶದಲ್ಲಿರುವ ಹಲವು ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತೇನೆ. ಯಾರಿಗೆಲ್ಲ ನೋವಾಗಿದೆ ಅವರಲ್ಲಿ ಪ್ರಾಮಾಣಿಕವಾಗಿ ಹೃದಯದಿಂದ ಕ್ಷಮೆ ಕೇಳುತ್ತೇನೆ” ಎಂದು ನಯನತಾರಾ ಬರೆದುಕೊಂಡಿದ್ದಾರೆ.
‘ಅನ್ನಪೂರ್ಣಿ’ ಸಿನಿಮಾವು ಬ್ರಾಹ್ಮಣ ಸಮುದಾಯದ ಸಂಪ್ರದಾಯಸ್ಥ ಮಹಿಳೆಯೊಬ್ಬಳು ಭಾರತದ ನಂಬರ್ ಒನ್ ಶೆಫ್ ಆಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ಪಾತ್ರಧಾರಿ ಅನ್ನಪೂರ್ಣಿ ಮಾಂಸಾಹಾರ ಅಡುಗೆ ಮಾಡುವುದು, ಸೇವನೆ ಮಾಡುವುದು ಹಾಗೂ ಆಕೆಯ ಮುಸ್ಲಿಂ ಸ್ನೇಹಿತ ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳುವ ದೃಶ್ಯಗಳ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಧಕ್ಕೆಯಾಗಿರುವುದಕ್ಕೆ ಹಿಂದೂ ಐಟಿ ಸೆಲ್‌ನ ಮುಖ್ಯಸ್ಥ ರಮೇಶ್ ಸೋಲಂಕಿ ಎಂಬುವವರು ನಯನತಾರ, ನಿರ್ಮಾಪಕರು, ನಿರ್ದೇಶಕರು, ನೆಟ್‌ಫ್ಲಿಕ್ಸ್ ವೇದಿಕೆ ಒಳಗೊಂಡು ಸಿನಿಮಾ ತಂಡದ ಎಂಟು ಮಂದಿಯ ವಿರುದ್ಧ ಜನವರಿ 8ರಂದು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನು ಓದಿದ್ದೀರಾ? ನಯನತಾರ ‘ಅನ್ನಪೂರ್ಣಿ’ ಸಿನಿಮಾ ತೆಗೆದು ಹಾಕಿದ ನೆಟ್‌ಫ್ಲಿಕ್ಸ್; RSSಗೆ ಕ್ಷಮೆಯಾಚಿಸಿದ ಝೀ ಸ್ಟುಡಿಯೋಸ್
ಈ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಕನ್ನಡದ ನಟ ಅಚ್ಯುತ್ ಕುಮಾರ್, ಕೆ ಎಸ್ ರವಿಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್ ಮತ್ತು ರೇಣುಕಾ ನಟಿಸಿದ್ದಾರೆ. ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋ ಹಾಗೂ ಟ್ರೈಡೆಂಟ್ ಆರ್ಟ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಸದ್ಯ ಈ ಸಿನಿಮಾವನ್ನು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಲಾಗಿದ್ದು, ಸಿನಿಮಾ ಎಡಿಟ್ ಆದ ಬಳಿಕ ಸ್ಟ್ರೀಮಿಂಗ್ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ನೆಟ್‌ಫ್ಲಿಕ್ಸ್‌ನಿಂದ ‘ಅನ್ನಪೂರ್ಣಿ’ ಸಿನಿಮಾ ತೆಗೆದು ಹಾಕಿದ ಬಳಿಕ ಚಿತ್ರದ ನಿರ್ಮಾಪಕರಾದ ಝೀ ಸ್ಟುಡಿಯೋಸ್ ಸಂಸ್ಥೆ, ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್‌ಎಸ್‌ನೊಂದಿಗೆ ಕ್ಷಮೆ ಕೂಡ ಯಾಚಿಸಿತ್ತು.