ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದ ನಯನತಾರ ಅಭಿನಯದ ‘ಅನ್ನಪೂರ್ಣಿ’ ತಮಿಳು ಸಿನಿಮಾವನ್ನು ಒಟಿಟಿಯಿಂದ ‘ನೆಟ್ಫ್ಲಿಕ್ಸ್’ ತೆಗೆದುಹಾಕಿದೆ. ಚಿತ್ರದ ನಿರ್ಮಾಪಕರಾದ ಝೀ ಸ್ಟುಡಿಯೋಸ್ ಸಂಸ್ಥೆ, ವಿಶ್ವ ಹಿಂದೂ ಪರಿಷತ್ ಹಾಗೂ ಆರ್ಎಸ್ಎಸ್ನೊಂದಿಗೆ ಕ್ಷಮೆಯಾಚಿಸಿದೆ.
“ಸಹ ನಿರ್ಮಾಪಕರಾಗಿ, ಹಿಂದೂ ಹಾಗೂ ಬ್ರಾಹ್ಮಣ ಸಮುದಾಯಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶವಿರಲಿಲ್ಲ. ಈ ಸಮುದಾಯಗಳಿಗೆ ತೊಂದರೆ ಹಾಗೂ ನೋವು ಉಂಟಾಗಿರುವುದಕ್ಕೆ ಕ್ಷಮೆ ಯಾಚಿಸಲು ಬಯಸುತ್ತೇವೆ” ಎಂದು ಝೀ ಸ್ಟುಡಿಯೋಸ್ ತನ್ನ ಕ್ಷಮಾಪಣಾ ಪತ್ರದಲ್ಲಿ ತಿಳಿಸಿದೆ.
ಸಿನಿಮಾದ ಸಹ ನಿರ್ಮಾಪಕರಾಗಿರುವ ನಾವು, ಸಿನಿಮಾದ ಕೆಲವು ದೃಶ್ಯಗಳನ್ನು ತಿದ್ದುಪಡಿ ಮಾಡುವವರೆಗೂ ನೆಟ್ಫ್ಲಿಕ್ಸ್ನಿಂದ ತೆಗೆದು ಹಾಕಿರುತ್ತೇವೆ ಎಂದು ಝೀ ಸ್ಟುಡಿಯೋಸ್ ತಿಳಿಸಿದೆ. ಈ ಸಿನಿಮಾ ಕೇಂದ್ರ ಸಿನಿಮಾ ಪ್ರಮಾಣ ಪತ್ರ ಮಂಡಳಿ (ಸಿಬಿಎಫ್ಸಿ)ಯಿಂದ ಅನುಮತಿ ಪಡೆದು ತಮಿಳುನಾಡಿನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನ ಅಂಧಾಭಿಮಾನವಾಗದಿರಲಿ; ಬಡವರ ಮಕ್ಕಳು ಬಲಿಯಾಗದಿರಲಿ
‘ಅನ್ನಪೂರ್ಣಿ’ ಸಿನಿಮಾವು ಬ್ರಾಹ್ಮಣ ಸಮುದಾಯದ ಸಂಪ್ರದಾಯಸ್ಥ ಮಹಿಳೆಯೊಬ್ಬಳು ಭಾರತದ ನಂಬರ್ ಒನ್ ಶೆಫ್ ಆಗುವ ಕಥೆಯನ್ನು ಒಳಗೊಂಡಿದೆ. ಸಿನಿಮಾ ಪಾತ್ರಧಾರಿ ಅನ್ನಪೂರ್ಣಿ ಮಾಂಸಾಹಾರ ಅಡುಗೆ ಮಾಡುವುದು, ಸೇವನೆ ಮಾಡುವುದು ಹಾಗೂ ಆಕೆಯ ಮುಸ್ಲಿಂ ಸ್ನೇಹಿತ ರಾಮ ಮಾಂಸಾಹಾರಿಯಾಗಿದ್ದ ಎಂದು ಹೇಳುವ ದೃಶ್ಯಗಳ ಬಗ್ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಧಕ್ಕೆಯಾಗಿರುವುದಕ್ಕೆ ಹಿಂದೂ ಐಟಿ ಸೆಲ್ನ ಮುಖ್ಯಸ್ಥ ರಮೇಶ್ ಸೋಲಂಕಿ ಎಂಬುವವರು ನಯನತಾರ, ನಿರ್ಮಾಪಕರು, ನಿರ್ದೇಶಕರು, ನೆಟ್ಫ್ಲಿಕ್ಸ್ ವೇದಿಕೆ ಒಳಗೊಂಡು ಸಿನಿಮಾ ತಂಡದ ಎಂಟು ಮಂದಿಯ ವಿರುದ್ಧ ಜನವರಿ 8ರಂದು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.