ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಬೇಧಿಸುವ ಕಥನ
ಜೂನ್ 29ಕ್ಕೆ ತೆರೆಗೆ ಬರಲಿದೆ ಪತ್ತೇದಾರಿ ಸಿನಿಮಾ
ಟಾಲಿವುಡ್‌ನ ಖ್ಯಾತ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ʼಸ್ಪೈʼ ಸಿನಿಮಾದ ಬಹುನಿರೀಕ್ಷಿತ ಟೀಸರ್ ಸೋಮವಾರ ಬಿಡುಗಡೆಯಾಗಿದ್ದು ಸಿನಿ ರಸಿಕರ ಗಮನ ಸೆಳೆಯುತ್ತಿದೆ. ದೆಹಲಿಯ ರಾಜ್‌ಪಥ್‌ನಲ್ಲಿರುವ ಸುಭಾಷ್ ಚಂದ್ರ ಬೋಸ್ ಪುತ್ಥಳಿಯ ಎದುರು ಈ ಚಿತ್ರದ ಟೀಸರ್ ಅನಾವರಣ ಮಾಡಲಾಗಿದೆ.
ʼಸ್ಪೈʼ ಹೆಸರಿನ ಶೀರ್ಷಿಕೆಯೇ ಸೂಚಿಸುವಂತೆ ಈ ಚಿತ್ರ ಪತ್ತೇದಾರಿ ಕಥಾಹಂದರವನ್ನು ಒಳಗೊಂಡಿದೆ. ಚಿತ್ರದಲ್ಲಿ ಗೂಢಾಚಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯದ ಚಿತ್ರದ ಕಥೆಯನ್ನು ಹೆಣೆಯಲಾಗಿದೆ ಎಂಬುದನ್ನು ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ.
ಆ್ಯಕ್ಷನ್ ಪ್ಯಾಕ್ ಕಥಾಹಂದರವುಳ್ಳ ಈ ಚಿತ್ರದಲ್ಲಿ ನಿಖಿಲ್ ಸಿದ್ದಾರ್ಥಗೆ ಐಶ್ವರ್ಯ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸನ್ಯಾ ಠಾಕೂರ್, ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮುಂತಾದವರು ಪ್ರಮುಕ ಪಾತ್ರಗಳಲ್ಲಿ ನಟಿಸಿದ್ದಾರೆ.
ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಗ್ಯಾರಿ ಬಿ ಹೆಚ್ ಆ್ಯಕ್ಷನ್ ಕಟ್ ಹೇಳಿದ್ದು, ಚರಣ್ ತೇಜ್ ಉಪ್ಪಲಪತಿ ಬಂಡವಾಳ ಹೂಡಿದ್ದಾರೆ. ಶ್ರೀ ಚರಣ್ ಮತ್ತು ವಿಶಾಲ್ ಚಂದ್ರಶೇಖರ್ ಅವರು ಈ ಚಿತ್ರಕ್ಕೆ ಜಂಟಿಯಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ ಜೂನ್ 29ಕ್ಕೆ ಪ್ಯಾನ್ ಇಂಡಿಯಾ ಮಾದರಿಯಲ್ಲಿ ತೆರೆಗೆ ಬರಲಿದೆ.