ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕ್ಷಮೆ ಕೇಳದಿದ್ದರೆ ಅವರು ಅಭಿನಯಿಸಿರುವ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆಗೊಳಿಸಲು ಬಿಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕಮಲ್ ಹಾಸನ್ ಅವರಿಂದ ಕ್ಷಮೆ ಕೇಳಿಸುತ್ತೇವೆ.ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಇಲ್ಲದೇ ಹೋದರೆ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಥಗ್ ಲೈಫ್’ ಸಿನಿಮಾ ಕರ್ನಾಟಕದ ವಿತರಕ ವೆಂಕಟೇಶ್ ಅವರನ್ನು ಚೇಂಬರ್ಗೆ ಕರೆಸಿ ಮಾತುಕತೆ ನಡೆಸಿದ್ದೇವೆ. ಕಮಲ್ ಹಾಸನ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕಮಲ್ ಅವರಿಂದ ಕ್ಷಮೆ ಕೇಳಿಸುತ್ತೇವೆ. ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ’ ಎಂದು ನರಸಿಂಹಲು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕನ್ನಡ ತಮಿಳಿನಿಂದ ಹುಟ್ಟಿದೆ: ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ
ಕನ್ನಡಪರ ನಾಯಕರಾದ ಸಾ .ರಾ ಗೋವಿಂದು ಮಾತನಾಡಿ, ‘ಕಮಲ್ ಹಾಸನ್ ಬಗ್ಗೆ ಕನಿಕರ ಇಲ್ಲ ಇದನ್ನ ಸಹಿಸೋಕೆ ಸದ್ಯ ಇಲ್ಲ. ಇವತ್ತು ನಾಳೆಯೊಳಗೆ ಕ್ಷಮೆ ಕೇಳದಿದ್ದರೆ ಚಿತ್ರ ಬಿಡುಗಡೆ ಆಗೋದಿಲ್ಲ. ಕಮಲ್ ಹಾಸನ್ ಅವರಿಗೆ ಮನದಟ್ಟು ಮಾಡಿಸುವ ಜವಾಬ್ದಾರಿ ವಿತರಕರದ್ದು, ಅದನ್ನು ಅವರಿಗೆ ಹೇಳಿದ್ದೀವಿ’ ಎಂದು ತಿಳಿಸಿದರು.
‘ತಮಿಳು ಭಾಷೆಯಿಂದ ಕನ್ನಡ ಭಾಷೆಯ ಜನನವಾಯಿತು’ ಎಂದು ಕಮಲ್ ಹಾಸನ್ ಹೇಳಿದ್ದರು. ಇದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಥಗ್ ಲೈಫ್’ ಜೂನ್ 5 ರಂದು ಬಿಡುಗಡೆ ಆಗಲಿದೆ. ಮಣಿರತ್ನಮ್ ನಿರ್ದೇಶನದ ಸಿನಿಮಾನಲ್ಲಿ ಕಮಲ್ ಹಾಸನ್ ಜೊತೆಗೆ ಅಭಿರಾಮಿ, ಸಿಂಭು, ತ್ರಿಷಾ ಮುಂತಾದವರು ನಟಿಸಿದ್ದಾರೆ. ಸಿನಿಮಾಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.