- ‘ಓ ಮೈ ಗಾಡ್ 2’ ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆರೋಪ
- ಮೊದಲ ದಿನವೇ 10 ಕೋಟಿ ಗಳಿಸಿದ ಚಿತ್ರ; ಹಲವರಿಂದ ಮೆಚ್ಚುಗೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ ಅಭಿನಯದ ‘ಓಎಂಜಿ 2(ಓ ಮೈ ಗಾಡ್ 2) ಚಿತ್ರವು ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದ್ದು, ಮೊದಲ ದಿನವೇ 10 ಕೋಟಿ ಗಳಿಸಿದೆ.
ಆದರೆ, ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸುತ್ತಿರುವ ಕೆಲವು ಬಲಪಂಥೀಯ ಸಂಘಟನೆಗಳು, ಚಿತ್ರಕ್ಕೆ ದೇಶದಲ್ಲಿ ನಿಷೇಧ ಹೇರುವಂತೆ ಒತ್ತಡ ಹಾಕುತ್ತಿದ್ದಾರೆ.
ಈ ನಡುವೆ ಅಕ್ಷಯ್ ಕುಮಾರ್ ಅವರಿಗೆ ಕಪಾಳಮೋಕ್ಷ ಅಥವಾ ಮುಖಕ್ಕೆ ಉಗುಳಿದರೆ ₹10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ಹಿಂದೂ ಪರಿಷತ್ ಘೋಷಿಸಿದೆ.
‘ಚಿತ್ರವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಶಿವ ದೇವರ ಪ್ರತಿಷ್ಠೆಗೆ ಕಳಂಕ ತಂದಿದೆ’ ಆರೋಪಿಸಿರುವ ಸಂಘಟನೆಯ ಮುಖಂಡ ಗೋವಿಂದ ಪರಶಾರ್, ಸಿನಿಮಾವನ್ನು ನಿಷೇಧಿಸುವಂತೆ ಆಗ್ರಹಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಸುಮಾರು 27 ಮಾರ್ಪಾಡುಗಳೊಂದಿಗೆ ಬಿಡುಗಡೆಗೊಂಡಿರುವ ಓಎಂಜಿ 2 ಚಿತ್ರದ ಬಗ್ಗೆ ಸಿನಿಮಾ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಈಗಿನ ಸಂದರ್ಭದಲ್ಲಿ ಬರಲೇಬೇಕಾಗಿದ್ದ ಚಿತ್ರ ಇದಾಗಿತ್ತು. ಹಿಂದೂ ಧರ್ಮಕ್ಕೆ ಎಲ್ಲೂ ಧಕ್ಕೆಯಾಗಿಲ್ಲ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಒಎಂಜಿ 2’ ಸಿನಿಮಾ ಲೈಂಗಿಕ ಶಿಕ್ಷಣದ ಬಗ್ಗೆ ಇದೆ. ಈ ಕಾರಣಕ್ಕೆ ಸಿನಿಮಾಗೆ ಸೆನ್ಸಾರ್ ಮಾಡಲು ಸಾಕಷ್ಟು ಸಮಯ ಹಿಡಿದಿತ್ತು. ಅನೇಕ ಮಾರ್ಪಾಡುಗಳನ್ನು ಮಾಡಿದ್ದಲ್ಲದೆ, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಕಾರಣದಿಂದ ಸಿನಿಮಾಗೆ ಹಿನ್ನಡೆ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ’ ಎಂದು ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ.
ಈ ಚಿತ್ರವು ಹದಿಹರೆಯದವರ ವಿವಿಧ ಸಮಸ್ಯೆ ಮತ್ತು ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಧರ್ಮದಲ್ಲಿನ ಸೂಕ್ಷ್ಮ ಅಂಶಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ನಟಿಸಿದ್ದು, ಅಮಿತ್ ರೈ ಬರೆದು ನಿರ್ದೇಶಿಸಿದ್ದಾರೆ.