ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ನಿರ್ದೇಶಕ ಜೋಗಿ ಪ್ರೇಮ್ ಮತ್ತು ನಟಿ ರಕ್ಷಿತಾ ಭೇಟಿಯಾಗಿದ್ದಾರೆ.
ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಿತಾ, ಪ್ರೇಮ್ ಇಬ್ಬರೂ ಕೂಡಾ ಜೈಲಿನಲ್ಲಿ ದರ್ಶನ್ ಜೊತೆ ನಡೆದ ಮಾತುಕತೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಹೇಳಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಮಾತನಾಡಿ, “ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಏನೆಲ್ಲ ನಡೆದಿದೆಯೊ, ಮಾಧ್ಯಮಗಳು ಏನೆಲ್ಲ ತೋರಿಸಿದೆಯೊ ಅದು ಅತ್ಯಂತ ದುರಾದೃಷ್ಟಕರ. ನಾನು ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಲು ಇಷ್ಟಪಡುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದರ್ಶನ್ ಪ್ರಕರಣ | ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಅಭಿಮಾನಿ ಬಂಧನ
ಇನ್ನು ಜೋಗಿ ಪ್ರೇಮ್ ಮಾತನಾಡಿ, “ದರ್ಶನ್ ನಮಗೆ ಮತ್ತು ಎಲ್ಲರಿಗೂ ಸ್ನೇಹಿತರು. ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ. ಹಾಗಾಗಿ ನಾವು ಏನೂ ಮಾತನಾಡಲು ಹೋಗಬಾರದು” ಎಂದು ಹೇಳಿದರು.
ಜೊತೆಗೆ, “ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನು ಪ್ರಕಾರವಾಗಿ ಏನೆಲ್ಲ ನಡೆಯಬೇಕೊ ಅದೆಲ್ಲವೂ ಕೂಡಾ ಆಗುತ್ತಿದೆ. ಕಾನೂನು ಪ್ರಕಾರ ಯಾರೂ ಕೂಡಾ ದೊಡ್ಡವರಲ್ಲ” ಎಂದು ತಿಳಿಸಿದ್ದಾರೆ.
ಇನ್ನು ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ ಪ್ರೇಮ್, “ದರ್ಶನ್ ಹೇಗಿದ್ದಾರೆ ಎಂದು ಕೇಳಲು ನಾವು ಬಂದಿದ್ದೆವು. ಇಂತಹ ಸಮಯದಲ್ಲಿ ಯಾರಾದರೂ ಆರಾಮಾಗಿ ಇರಲು ಆಗುತ್ತಾ” ಎಂದರು.