ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಂಡಿದೆ. ಅದಕ್ಕಾಗಿ ತಮನ್ನಾ 6.20 ಕೋಟಿ ರೂ. ಸಂಭಾವನೆ ಪಡೆದಿದ್ದು, ಎರಡು ವರ್ಷಗಳ ಕಾಲ ರಾಯಭಾರಿಯಾಗಿರಲಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ಕನ್ನಡೇತರರನ್ನು ಆಯ್ಕೆ ಮಾಡಿರುವುದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ, ನಟಿ, ರಾಜಕಾರಣಿ, ಮಾಜಿ ಸಂಸದೆ ರಮ್ಯಾ ಕೂಡ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಟ್ರಾಗ್ರಾಂನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಮ್ಯಾ, “ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್‍ಗೆ ದೀರ್ಘ ಇತಿಹಾಸ, ಪರಂಪರೆಯಿದೆ. ಪ್ರತಿಯೊಬ್ಬ ಕನ್ನಡಿಗರು ಅದರ ರಾಯಭಾರಿಗಳಾಗಿದ್ದಾರೆ. ಈ ಉತ್ಪನ್ನವನ್ನು ಜಗತ್ತಿಗೆ ಪರಿಚಯಿಸಲು ರಾಯಭಾರಿಯ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹಲವು ದಾರಿಗಳು ಇರುತ್ತವೆ. ಇಂತಹ ಕಾಲಘಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್‍ಗೆ ರಾಯಭಾರಿ ನೇಮಕ ಮಾಡಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರವು ಜನರ ತೆರಿಗೆ ಹಣ ವ್ಯರ್ಥ ಮಾಡುತ್ತಿದೆಯಷ್ಟೇ…. ಮತ್ತೇನೂ ಇಲ್ಲ….” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸೆಲೆಬ್ರಿಟಿಗಳು ಪ್ರಚಾರ ಮಾಡುವುದನ್ನು ನೋಡಿ, ಜನರು ವಸ್ತುಗಳನ್ನು ಖರೀದಿಸುವುದಿಲ್ಲ. ಜನರು ಬದಲಾಗುತ್ತಿದ್ದಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಗಮನಿಸುತ್ತಾರೆ, ತಿಳಿದುಕೊಂಡಿದ್ದಾರೆ. ಯಾವುದಾದರೂ ಉತ್ಪನ್ನವನ್ನು ಜನ ಮೆಚ್ಚಿ ಖರೀದಿಸಬೇಕು ಎಂದರೆ, ಆ ಉತ್ಪನ್ನವು ಉತ್ತಮ ಗುಣಮಟ್ಟ ಹೊಂದಿರಬೇಕು” ಎಂದು ರಮ್ಯಾ ಹೇಳಿದ್ದಾರೆ.