ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ. ಜೊತೆಗೆ ಇತರೆ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಕೂಡಾ ಹೈಕೋರ್ಟ್ ನಡೆಸಿದ್ದು ತೀರ್ಪು ಕಾಯ್ದಿರಿಸಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್, ಜಗದೀಶ್, ಪ್ರದೋಶ್ ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಿದರು. ತೀರ್ಪನ್ನು ಕಾಯ್ದಿರಿಸಿದರು.
ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ವಾದ ಮಂಡಿಸಿದ್ದಾರೆ. ದರ್ಶನ್ ವೈದ್ಯಕೀಯ ಜಾಮೀನು ವಿಸ್ತರಣೆಗಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ದರ್ಶನ್‌ಗೆ ರಕ್ತದೊತ್ತಡದಲ್ಲಿ ಏರುಪೇರು; ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ
ಆರೋಪಿಗಳಾದ 4, 6, 7 ರೇಣುಕಾಸ್ವಾಮಿಯನ್ನು ಅಪಹರಿಸಿದ್ದರು. ರೇಣುಕಾಸ್ವಾಮಿಯ ಬಳಿ ಇದ್ದ ಉಂಗುರ, ಕರಡಿಕೆ ಮತ್ತು 40 ಸಾವಿರ ರೂಪಾಯಿಗೂ ಹೆಚ್ಚು ಹಣ ತೆಗೆದುಕೊಂಡಿದ್ದರು. ತನಿಖೆಯ ಸಂದರ್ಭದಲ್ಲಿ ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಧನರಾಜ್ (ಒಂಭತ್ತನೇ ಆರೋಪಿ), ನಂದೀಶ್ (ಐದನೇ ಆರೋಪಿ) ಮತ್ತು ಪವನ್ (ಮೂರನೇ ಆರೋಪಿ) ಅವರು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯನ್ನು ಮೇಲಿಂದ ಎತ್ತಿ ಕುಕ್ಕಿದ್ದನು. ಈ ಸಂದರ್ಭದಲ್ಲಿ ದರ್ಶನ್, ಪವಿತ್ರಾಗೌಡ, ಪ್ರದೋಶ್, ವಿನಯ್ ಅವರು ಕಪ್ಪು ಕಾರಿನಲ್ಲಿ ಬಂದಿದ್ದು ದರ್ಶನ್ ಅವರು ರೇಣುಕಾಸ್ವಾಮಿಗೆ ಎದೆಗೆ ಒದೆದಿದ್ದಾರೆ ಎಂದು ಪಿ ಪ್ರಸನ್ನಕುಮಾರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನಟ ದರ್ಶನ್‌ಗೆ ಜಾಮೀನು ನೀಡದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ: ಪರಮೇಶ್ವರ್
ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದರಿಂದ 17 ಎದೆ ಮೂಳೆ ಮುರಿತವಾಗಿವೆ. ದೇಹದಲ್ಲಿ 39 ಗಾಯಗಳು ಪತ್ತೆಯಾಗಿವೆ. ರೇಣುಕಾಸ್ವಾಮಿ ಅಲ್ಲಿ ಸತ್ತಿದ್ದಾನೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ದರ್ಶನ್ ಹಲ್ಲೆಯ ನಂತರ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ಪ್ರಮುಖ ಸಾಕ್ಷಿ ಪುನೀತ್ ಹೇಳಿದ್ದಾನೆ ಎಂದು ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳ ಬಂಧನ ಆಧಾರದ ಮಾಹಿತಿಯನ್ನು ನ್ಯಾಯಾಲಯಕ್ಕೆ ಪ್ರಸನ್ನ ಕುಮಾರ್ ಸಲ್ಲಿಸಿದ್ದಾರೆ. ವಾದ ಆಲಿಸಿದ ಹೈಕೋರ್ಟ್ ಪೀಠ ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿತು.
