ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಗುರುವಾರ(ಜು.24) ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ.
ಸರ್ಕಾರದ ಪರ ವಿಚಾರಣೆ ನಡೆಸಿರುವ ಸುಪ್ರಿಂ ಕೋರ್ಟ್ ಜು.24 ರಂದು ದರ್ಶನ್ ಸೇರಿ 7 ಆರೋಪಿಗಳ ಪರ ವಾದ ಆಲಿಸಲಿದೆ.
ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಮುಂದುವರಿಸಲಿದೆ. ರಾಜ್ಯ ಸರ್ಕಾರ ಪರ ವಕೀಲರ ವಾದ ಆಲಿಸಿ, ದಾಖಲೆಗಳನ್ನು ಸ್ವೀಕರಿಸಿರುವ ಪೀಠ, ಆರೋಪಿಗಳ ಪರ ವಕೀಲರ ವಾದ ಮಂಡನೆ ಆಲಿಸಿ, ಬಳಿಕ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನು ಓದಿದ್ದೀರಾ? ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ವಾದ ಮಂಡಿಸಿದ್ದರು. ನಟ ದರ್ಶನ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ನಿಯೋಜಿಸಲಾಗಿತ್ತು. ಆದರೆ ಅಭಿಷೇಕ್ ಮನು ಸಿಂಘ್ವಿ ಸದ್ಯ ಕರ್ನಾಟಕದ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರ ವಾದ ಮಂಡನೆ ಮಾಡುತ್ತಿದ್ದಾರೆ. ಅವರೇ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರ ವಿರುದ್ಧ ವಾದ ಮಾಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ದರ್ಶನ್ ಈಗ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ನೇಮಿಸಿಕೊಂಡಿದ್ದು, ಸಿಬಲ್ ವಾದ ಮಂಡಿಸಲಿದ್ದಾರೆ. ಇದಾದ ಬಳಿಕ ಉಳಿದ ಆರೋಪಿಗಳ ಪರ ವಕೀಲರು ವಾದ ಮಂಡಿಸಲಿದ್ದಾರೆ.
ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಜಾಮೀನು ನೀಡುವಾಗ ಹೈಕೋರ್ಟ್ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾಯಮೂರ್ತಿ ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು.