ಆ್ಯಪ್ ಆಧಾರಿತ 500 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ, ಹಾಸ್ಯನಟಿ ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈಬಾಕ್ಸ್ ಎಂಬ ಮೊಬೈಲ್ ಅಪ್ಲಿಕೇಶನ್ ಹೆಚ್ಚಿನ ಆದಾಯ ನೀಡುವ ಭರವಸೆಯೊಂದಿಗೆ ಹಣವನ್ನು ಹೂಡಿಕೆ ಮಾಡುವಂತೆ ಜನರನ್ನು ಆಕರ್ಷಿಸುತ್ತಿದ್ದು, ಹಗರಣವನ್ನು ಭೇದಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
‘ದೂರುಗಳ ಅನ್ವಯ, ಒಂಬತ್ತು ಸಾಮಾಜಿಕ ಜಾಲತಾಣ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳಾದ ಭಾರತಿ ಸಿಂಗ್, ಅವರ ಪತಿ ಹರ್ಷ್ ಲಿಂಬಾಚಿಯಾ, ಲಕ್ಷ್ಯ ಚೌಧರಿ, ಆದರ್ಶ್ ಸಿಂಗ್, ಸೌರವ್ ಜೋಶಿ, ಅಭಿಷೇಕ್
ಮಲ್ಹಾನ್, ಪುರವ್ ಝಾ , ಎಲ್ವಿಶ್ ಯಾದವ್ ಮತ್ತು ಅಮಿತ್ ಮತ್ತು ದಿಲ್ರಾಜ್ ಸಿಂಗ್ ರಾವತ್, ಎಂಬುವವರು ಆ್ಯಪ್ ಮೂಲಕ ಹಣ ಹೂಡಿಕೆ ಹೂಡುವಂತೆ ಜನರನ್ನು ಆಕರ್ಷಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಆ್ಯಪ್ಅನ್ನು ಪ್ರಚಾರ ಮಾಡಿದವರಲ್ಲಿ ರಿಯಾ ಚಕ್ರವರ್ತಿ ಕೂಡ ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಿಯಾ, ಭಾರತಿ ಮತ್ತು ಅವರ ಪತಿಗೆ ಇಂಟೆಲಿಜೆನ್ಸ್ ಫ್ಯೂಶನ್ ಅಂಡ್ ಸ್ಟ್ರಾಟೆಜಿಕ್ ಆಪರೇಶನ್ ಘಟಕವು ನೋಟಿಸ್ ನೀಡಿದೆ. ಮುಂದಿನ ವಾರ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ.
ಅಭಿಷೇಕ್ ಮಲ್ಹಾನ್, ಎಲ್ವಿಶ್ ಯಾದವ್, ಲಕ್ಷ್ಯ ಚೌಧರಿ ಮತ್ತು ಪುರನ್ ಝಾಗೆ ಶುಕ್ರವಾರವೇ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದು, ಯಾರೂ ಕೂಡ ತನಿಖೆಗೆ ಹಾಜರಾಗಿಲ್ಲ‘ ಎಂದು ಅಧಿಕಾರಿ ತಿಳಿಸಿದ್ದಾರೆ.
ಅನೇಕ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳ ಹೈಬಾಕ್ಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದು, ಅಪ್ಲಿಕೇಶನ್ ಮೂಲಕ ಹಣ ಹೂಡಿಕೆ ಮಾಡಲು ಜನರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಸುಮಾರು 500ಕ್ಕೂ ಹೆಚ್ಚು ದೂರುಗಳು ಬಂದಿವೆ.
ಇದೇ ಫೆಬ್ರುವರಿ ತಿಂಗಳಿನಲ್ಲಿ ಆ್ಯಪ್ ಅನ್ನು ಪ್ರಾರಂಭಸಲಾಗಿದ್ದು, 30,000ಕ್ಕೂ ಹೆಚ್ಚು ಜನರು ಆ್ಯಪ್‌ನಲ್ಲಿ ಹಣವನ್ನು ಹೂಡಿಕೆಮಾಡಿದ್ದಾರೆ. ಹಗರಣದ ಪ್ರಮುಖ ಆರೋಪಿ ಚೆನ್ನೈ ನಿವಾಸಿ ಶಿವರಾಮ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
