60ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟ
ಹುಟ್ಟು ಹಬ್ಬಕ್ಕೆ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ
ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ಕುಮಾರ್ ಗೋವಿಂದ್ ಬುಧವಾರ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ನಟನೆಯಿಂದ ಅಂತರ ಕಾಯ್ದುಕೊಂಡಿರುವ ಅವರು ಇದೀಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದು, ದರ್ಶನ್ ಮುಖ್ಯಭೂಮಿಕೆಯ ʼಕಾಟೇರಾʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಕುಮಾರ್ ಗೋವಿಂದ್ ಅವರ ಪಾತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಹಿರಿಯ ನಟನಿಗೆ ಶುಭಾಶಯ ಕೋರಿದೆ.
ಟ್ವಿಟರ್‌ನಲ್ಲಿ ಕುಮಾರ್ ಗೋವಿಂದ್ ಅವರ ಫಸ್ಟ್‌ಲುಕ್ ಪೋಸ್ಟರ್ ಹಂಚಿಕೊಂಡಿರುವ ʼಕಾಟೇರಾʼ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಹುಟ್ಟು ಶುಭಾಶಯ ಕೋರುವ ಜೊತೆಗೆ ಚಿತ್ರದಲ್ಲಿ ಕುಮಾರ್ ಗೋವಿಂದ್ ಹಳ್ಳಿಗ ಮಹದೇವಣ್ಣನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
70ರ ದಶಕದ ಹಳ್ಳಿ ಸೊಗಡಿನ ಕಥಾಹಂದರವುಳ್ಳ ʼಕಾಟೇರಾʼ ಚಿತ್ರದಲ್ಲಿ ದರ್ಶನ್ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ರಾಧನಾ ಈ ಚಿತ್ರದ ಮೂಲಕ ನಾಯಕ ನಟಿಯಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ವಿಶೇಷ.
ಇತ್ತೀಚೆಗೆ ರೈತ ನಾಯಕ, ದಿವಂಗತ ಪುಟ್ಟಣ್ಣಯ್ಯನವರ ಮಗನ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ʼಕಾಟೇರಾʼ ಚಿತ್ರದ ಕಥಾಹಂದರದ ಬಗ್ಗೆ ಸುಳಿವು ನೀಡಿದ್ದ ದರ್ಶನ್, “70ರ ದಶಕದಲ್ಲಿ ಜಾರಿಯಾದ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ, ಆ ಕ್ಷಣದಿಂದ ಚುರುಕುಗೊಂಡ ರೈತ ಹೋರಾಟದ ಸುತ್ತ ನಾವು ಸಿನಿಮಾ ಮಾಡುತ್ತಿದ್ದೇವೆ” ಎಂದು ಮಾಹಿತಿ ಹಂಚಿಕೊಂಡಿದ್ದರು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಚಿತ್ರದ ಮೊದಲ ಹಂತದ ಶೂಟಿಂಗ್ ಚಾಲ್ತಿಯಲ್ಲಿದೆ.