ಕನ್ನಡ ಚಲನಚಿತ್ರಗಳನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಒಟಿಟಿ ವೇದಿಕೆಗಳು ಸ್ವೀಕರಿಸುವುದಿಲ್ಲ ಹಾಗೂ ಒಟಿಟಿಯಲ್ಲಿ ಕನ್ನಡ ಕಂಟೆಂಟ್‌ಗಳಿಗೆ ಮಾರುಕಟ್ಟೆ ಇಲ್ಲ ಎಂಬ ಮಾತು ಕೇಳಿಬರುತ್ತಲೇ ಇತ್ತು. ಇದೇ ಕಾರಣಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಸುಮಾರು ಕನ್ನಡ ಸಿನಿಮಾಗಳು ಮಾರಾಟವಾಗದೇ ಉಳಿದಿದ್ದವು. ಇನ್ನೂ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದರೂ ಒಟಿಟಿಗಳಲ್ಲಿ ಪ್ರಸಾರವಾಗದೇ ಮೂಲೆಗುಂಪಾಗಿದ್ದವು. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮುಂದಡಿ ಇಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 16ನೇ ಬಜೆಟ್‌ನಲ್ಲಿ ಕನ್ನಡ ಚಲನ ಚಿತ್ರಗಳ ಪ್ರೋತ್ಸಾಹಕ್ಕೆ ಹೊಸ ಒಟಿಟಿ ವೇದಿಕೆ ಸೃಷ್ಟಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕೆಲವೊಂದು ಸಿನಿಮಾಗಳು ಉತ್ತಮ ಕಂಟೆಂಟ್ ಹೊಂದಿದ್ದರೂ ಅವುಗಳಿಗೆ ಒಟಿಟಿ ವೇದಿಕೆಗಳಲ್ಲಿ ಬೆಲೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಕೇರಳ ಚಿತ್ರರಂಗ ಮಲಯಾಳಂ ಸಿನಿಮಾಗಳಿಗಾಗಿ ಪ್ರತ್ಯೇಕ ಒಟಿಟಿ ವೇದಿಕೆ ಸೃಷ್ಟಿಸಿದೆ. ಅಲ್ಲದೇ ಪ್ರಸಾರ ಭಾರತಿ ಸಹ WAVES ಎಂಬ ಒಟಿಟಿ ವೇದಿಕೆ ಮಾಡಿಕೊಂಡಿದೆ. ಇದೀಗ ಕನ್ನಡ ಸಿನಿಮಾಗಳನ್ನ ಮತ್ತಷ್ಟು ಬೆಳೆಸಲು ಸರ್ಕಾರ ಒಟಿಟಿ ವೇದಿಕೆ ಸೃಷ್ಟಿಸುವ ನಿರ್ಧಾರಕ್ಕೆ ಮುಂದಾಗಿದೆ.
ಕರ್ನಾಟಕದಲ್ಲಿ ಸಿನಿಮಾ ವೀಕ್ಷಕರ ಹಾಗೂ ಒಟಿಟಿಯಲ್ಲಿ ವೀಕ್ಷಿಸುವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ನಟ ಶ್ರೀಮುರಳಿ ಅಭಿನಯದ ʻಬಘೀರʼ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿತ್ತು. ಈ ಬೆನ್ನಲ್ಲೇ ಬಜೆಟ್‌ನಲ್ಲಿ ಒಟಿಟಿ ವೇದಿಕೆ ಸೃಷ್ಟಿಸುವ ನಿರ್ಧಾರವನ್ನು ಸಿಎಂ ಘೋಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿನ್ನ ಕಳ್ಳಸಾಗಣೆ ಆರೋಪ: ಕನ್ನಡ ಸಿನಿಮಾ ನಟಿ ರನ್ಯಾ ಬಂಧನ
ಮೈಸೂರಿನಲ್ಲಿ ವಿಶ್ವದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಛಯವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.
ದಾಖಲೆಯ 16ನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ, ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯಗಳನ್ನು ಸಿನಿಮಾ ಕ್ಷೇತ್ರಕ್ಕೆ ಸರ್ಕಾರ ಒದಗಿಸಲಿದೆ. ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್-ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು 3 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
