ಕುಖ್ಯಾತ ಕಳ್ಳನ ಪಾತ್ರದಲ್ಲಿ ಮಿಂಚಲಿರುವ ರವಿತೇಜ
ಮೇ 24ಕ್ಕೆ ಬಿಡುಗಡೆಯಾಗಲಿದೆ ಚಿತ್ರದ ಫಸ್ಟ್ ಲುಕ್
ಟಾಲಿವುಡ್‌ನ ಖ್ಯಾತ ನಟ ರವಿತೇಜ ಅಭಿನಯದ ʼಟೈಗರ್ ನಾಗೇಶ್ವರ್ ರಾವ್ʼ ಚಿತ್ರದ ಫಸ್ಟ್ ಲುಕ್ ಮೇ 24ರಂದು ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಮಾದರಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕನ್ನಡ ಅವತರಣಿಕೆಯ ಫಸ್ಟ್ ಲುಕ್ ಝಲಕ್‌ಗೆ ಕನ್ನಡದ ಹಿರಿಯ ನಟ ಶಿವರಾಜ್ ಕುಮಾರ್ ಧ್ವನಿಯಾಗಿರುವುದು ವಿಶೇಷ.
70ರ ದಶಕದ ಕಥಾಹಂದರವನ್ನು ಹೊಂದಿರುವ ʼಟೈಗರ್ ನಾಗೇಶ್ವರ್ ರಾವ್ʼ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಂಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆಯ ತಯಾರಿಯಲ್ಲಿರುವ ಚಿತ್ರತಂಡ ಕನ್ನಡ ಅವತರಣಿಕೆಗೆ ಧ್ವನಿಯಾಗುವಂತೆ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿ ಮಾಡಿಕೊಂಡಿದೆ. ಮನವಿಗೆ ಸ್ಪಂದಿಸಿ ಫಸ್ಟ್ ಲುಕ್ ವಿಡಿಯೋಗೆ ಧ್ವನಿಯಾಗಿರುವ ಶಿವಣ್ಣ, ಕನ್ನಡಿಗರಿಗೆ ʼಟೈಗರ್ ನಾಗೇಶ್ವರ್ ರಾವ್ʼ ಕಥೆಯನ್ನು ಪರಿಚಯಿಸಲು ಮುಂದಾಗಿದ್ದಾರೆ.
ಹೈದರಾಬಾದ್‌ನ ಸ್ಟುವರ್ಟ್‌ಪುರಂನಲ್ಲಿ 70ರ ದಶಕದಲ್ಲಿದ್ದ ಕುಖ್ಯಾತ ಕಳ್ಳನ ಬದುಕಿನ ಕಥೆಯನ್ನು ಆಧರಿಸಿ ʼಟೈಗರ್ ನಾಗೇಶ್ವರ್ ರಾವ್ʼ ಚಿತ್ರ ಮೂಡಿಬಂದಿದೆ. ಈಗಾಗಲೇ ಫಸ್ಟ್‌ಲುಕ್ ನೋಡಿ ಮೆಚ್ಚಿಕೊಂಡಿರುವ ಶಿವಣ್ಣ, ರವಿತೇಜ ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದು, ಚಿತ್ರ ದೊಡ್ಡ ಮಟ್ಟಿಗೆ ಸದ್ದು ಮಾಡಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಳ್ಳುತ್ತಿರುವ ಈ ಚಿತ್ರದಲ್ಲಿ ರವಿತೇಜಗೆ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆಯ ಹೊಣೆ ಹೊತ್ತುಕೊಂಡಿದ್ದು, ಅಭಿಷೇಕ್ ಅಗರ್‌ವಾಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮುಂಬರುವ ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.