ಈ ಮಾತುಗಳನ್ನು ಕೇಳಿಸಿಕೊಳ್ಳುತ್ತ ಹೋದ ಹಾಗೆ ಬೆನೆಗಲ್‌ರ ಚಿತ್ರಗಳ ಸರಮಾಲೆ ಕಣ್ಣೆದುರು ಹಾದು ಹೋಯಿತು. ಅಬ್ಬಾ! ಅನಿಸಿ ಹೋಯಿತು.
1974ರಲ್ಲಿ ತೆರೆಕಂಡ ‘ಅಂಕುರ್’ನಿಂದ ಇತ್ತೀಚೆಗಷ್ಟೇ ಸುದ್ದಿ ಮಾಡಿರುವ ‘ವೆಲ್ ಡನ್ ಅಬ್ಬಾ’ತನಕ, ಕಳೆದ ನಾಲ್ಕು ದಶಕಗಳಲ್ಲಿ ತನ್ನ ಪಾಡಿಗೆ ತಾನು, ಯಾವ ರಾಜಿಯನ್ನೂ ಮಾಡಿಕೊಳ್ಳದೆ, ವಿಕಾಸಶೀಲರಾಗಿ 24 ವೈವಿಧ್ಯಪೂರ್ಣ ಮತ್ತು ಚಿಂತನಶೀಲ ಚಿತ್ರಗಳನ್ನು ಕೊಟ್ಟಿರುವ ನಮ್ಮ ದೇಶದ ಹೆಮ್ಮೆಯ ಸಿನೆ ನಿರ್ದೇಶಕ ಶ್ಯಾಮ್ ಬೆನೆಗಲ್ ಈಚೆ ಬೆಂಗಳೂರಿಗೆ ಬಂದಿದ್ದರು. ಪ್ರಯೋಗಶೀಲ ಚಿತ್ರಗಳ ನಿಯಮಿತ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಗಿರೀಶ್ ಕಾಸರವಳ್ಳಿಯವರ ಮುತುವರ್ಜಿಯಲ್ಲಿ ನಡೆಸುತ್ತಿರುವ ‘ಚಿತ್ರ ಸಮೂಹ’ ಇತ್ತೀಚೆಗಷ್ಟೆ ‘ಚಿತ್ರವರ್ಷ’ ಎಂಬ ಚಿತ್ರೋತ್ಸವವನ್ನು ಆರಂಭಿಸಿದೆ. ಈ ‘ಚಿತ್ರವರ್ಷ’ದ ಉದ್ಘಾಟನೆಗೆಂದು ಬಂದಿದ್ದ ಶ್ಯಾಮ್ ಬೆನೆಗಲ್, ಒಂದೆರಡು ಸಂವಾದಗಳಲ್ಲೂ ಪಾಲ್ಗೊಂಡರು. ಪ್ರಾದೇಶಿಕ ಭಾಷೆಗಳಲ್ಲಿ ಅಡೂರ್, ಋತುಪರ್ಣೋ ಘೋಷ್, ಕಾಸರವಳ್ಳಿ, ಜಬ್ಬಾರ ಪಟೇಲ ಇಂಥವರೆಲ್ಲ ವ್ರತದಂತೆ ನಡೆಸಿಕೊಂಡು ಬಂದ ಕೈಂಕರ್ಯಕ್ಕೆ ಒಂದು ಬಗೆಯ ಪರೋಕ್ಷ ಸ್ಥೈರ್ಯದಂತೆ, ಪಟ್ಟು ಹಿಡಿದು, ಹಿಂದಿಯಲ್ಲೇ ‘ಬಾಲಿವುಡ್’ನ ಅಬ್ಬರಕ್ಕೊಂದು ಸಾತ್ವಿಕ ಸವಾಲು ಹಾಕುವಂತೆ, ವಿತರಕರ, ಪದರ್ಶಕರ ಪಟ್ಟಭದ್ರ ಕಾಲದ ಹಂಗಿಲ್ಲದೆ ಪ್ರಯೋಗಶೀಲ ಚಿತ್ರಗಳನ್ನು ಮಾಡುತ್ತ ಬಂದವರು ಬೆನೆಗಲ್. ಹೀಗಾಗಿ, ಅವರ ಉಪಸ್ಥಿತಿ, ಮಾತು ಈ ‘ಚಿತ್ರವರ್ಷ’ದ ಚಾಲನೆಗೆ ಅತ್ಯಂತ ಔಚಿತ್ಯಪೂರ್ಣವಾಗಿತ್ತು.
ಅನೌಪಚಾರಿಕವಾಗಿ ಹರಟುತ್ತ ಅವರೊಂದು ಮಾತು ಹೇಳಿದರು. ಎಲ್ಲ ಪ್ರಯೋಗಶೀಲ ಅಥವಾ ಪ್ರಶಸ್ತಿ ವಿಜೇತ ಅಥವಾ ಸಮಾಂತರ ಅಥವಾ ಹೊಸ ಅಲೆ- ಇತ್ಯಾದಿ ಎಂದು ಭಾವಿಸಲಾದ ಹೊಸ ತಲೆಮಾರಿನ ನಿರ್ದೇಶಕರೆಲ್ಲರೂ ಮನನ ಮಾಡಿಕೊಳ್ಳಲೇಬೇಕಾದ ಮಾತಿದು. ಅವರೆಂದರು- ”ನಾನು ಕಡಿಮೆ ಬಜೆಟ್‌ನಲ್ಲಿ ಮಾಡುತ್ತಿದ್ದೇನೆ, 16 ಎಂ.ಎಂ.ನಲ್ಲಿ ಚಿತ್ರಿಸಿ ನಂತರ 35 ಎಂ.ಎಂ.ಗೆ ಹಿಗ್ಗಿಸುತ್ತೇನೆ. ನಾನು ಹತ್ತೇ ದಿನಗಳಲ್ಲಿ ಮಾಡುತ್ತೇನೆ. ನಾನು ತೀರ ಸಮಕಾಲೀನ ಸಾಮಾಜಿಕ ವಸ್ತುವನ್ನು ಆರಿಸಿಕೊಂಡಿದ್ದೇನೆ… ಅಂದ ಮಾತ್ರಕ್ಕೆ ನನ್ನ ಚಿತ್ರ ‘ಒಳ್ಳೆಯ ಚಿತ್ರ’ ಹೇಗಾಗಲು ಸಾಧ್ಯ? ಪಕ್ಕಾ ಕಮರ್ಶಿಯಲ್ ಚಿತ್ರಗಳಿಗಾದರೆ ಒಳ್ಳೆಯದೊ ಕೆಟ್ಟದ್ದೂ ಒಂದು ಪರೀಕ್ಷಾ ಕಣ ಇದೆ. ಪ್ರಜೆಯೆಂಬ ಪ್ರಭುವಿನ ಎದುರು ಅದು ಹಾಜರಾಗಿ ನಿಲ್ಲುತ್ತದೆ. ಒಂದು ಬಗೆಯ ಬಹಿರಂಗ ಮೌಲ್ಯಮಾಪನ ಆಗಿಯೇ ಹೋಗುತ್ತದೆ. ಹೀಗಾಗಿ ಭ್ರಮೆಗಳಿಗೆ ಅಲ್ಲಿ ಅವಕಾಶವಿಲ್ಲ. ಆದರೆ ಬಿಡುಗಡೆ, ವಿತರಣೆಯ ಭಾಗ್ಯವಿರದೆ ಡಬ್ಬಗಳಲ್ಲಿ ಚಿತ್ರವನ್ನು ಇಟ್ಟುಕೊಂಡು ಆಪ್ತ ವೀಕ್ಷಕರಿಗಾಗಿ ಕಾಯುವ ನಮ್ಮಂಥ ನಿರ್ದೇಶಕ ನಿರ್ಮಾಪಕರು- ‘ನನ್ನದು ಬಿಡುಗಡೆ ಆಗಿಲ್ಲ, ಆದ್ದರಿಂದಲೇ ಇದು ಶ್ರೇಷ್ಠ ಚಿತ್ರ’ ಎಂಬ ಅತಿರೇಕಕ್ಕೆ ಹೋಗಬಾರದು! ಆತ್ಮವಿಮರ್ಶೆ, ಅತ್ಯಂತ ಕಟುವಾದ ಆತ್ಮವಿಮರ್ಶೆ ಇದ್ದಾಗ ಮಾತ್ರ ಸಿನೆಮಾ ನಿರ್ದೇಶಕನಾಗಿ ನನ್ನ ಕಸುಬು, ದರ್ಶನ ಮತ್ತು ಸಿನೆ ವ್ಯಾಕರಣದ ಶೈಲಿ ವಿವಿಧ ಆಯಾಮಗಳಲ್ಲಿ ವಿಕಾಸಗೊಳ್ಳಲು ಸಾಧ್ಯ. ಇನ್ನೊಂದು ರೀತಿಯಿಂದ ನೋಡಿದರೆ ರೇಟಿಂಗ್, ಸಾರ್ವಜನಿಕ ಪ್ರತಿಸ್ಪಂದನಗಳ ಪ್ರಭಾವ ಇಲ್ಲದ್ದರಿಂದ ನನ್ನ ಅಖಾಡ ಇನ್ನೂ ಮುಕ್ತವಾಗುತ್ತದೆ; ವಿಶಾಲವಾಗುತ್ತದೆ, ಸಿನಿಮೆಟಿಕ್ ಸಾಧ್ಯತೆಗಳು ಅಪಾರವಾಗುತ್ತದೆ”.
ಈ ಮಾತುಗಳನ್ನು ಕೇಳಿಸಿಕೊಳ್ಳುತ್ತ ಹೋದ ಹಾಗೆ ಬೆನೆಗಲ್‌ರ ಚಿತ್ರಗಳ ಸರಮಾಲೆ ಕಣ್ಣೆದುರು ಹಾದು ಹೋಯಿತು. ಅಬ್ಬಾ! ಅನಿಸಿ ಹೋಯಿತು. ಹೌದಲ್ಲ ಮಾರುಕಟ್ಟೆಯ ಸುರಕ್ಷಿತತೆಯ ಹಂಗಿಲ್ಲದೆ ಕಳೆದ ನಾಲ್ಕು ದಶಕಗಳಲ್ಲಿ ಎಂತೆಂಥ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಬೆಳೆದು ಬಂದಿರುವ ಈ ವ್ಯಕ್ತಿಗಲ್ಲದೆ, ಇಂಥ ಮಾತುಗಳನ್ನು ಆಡುವ ನೈತಿಕ ಶಕ್ತಿ ಇನ್ಯಾರಿಗುಂಟು!

“ಮನದಲ್ಲಿ ನೆಲೆಯೂರಿ ಆಲೆಗಳನ್ನೆಬ್ಬಿಸುವಂಥ ಒಂದೇ ಒಂದು ಪ್ರತಿಮೆ ಕೊಟ್ಟರೂ ಸಾಕು ಆ ಕವಿಗೆ ನಾನು ಶಾಶ್ವತವಾಗಿ ಕೃತಜ್ಞ…” ಎಂದು ಯಾರೋ ಹೇಳಿದ್ದು ನೆನಪು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿನೆ ವ್ಯಾಮೋಹಿಗಳ ಮನದಲ್ಲಿ ಆಳವಾಗಿ ಉಳಿದು ಬಂದಿರುವ ಪ್ರತಿಮೆ-ಜಮೀನುದಾರನ ಮನೆಯ ಕಿಟಕಿಯ ಗಾಜಿಗೆ ಪುಟಾಣಿ ಪೋರನೊಬ್ಬ ಠಳ್ ಎಂದು ಕಲ್ಲು ಬೀಸಿ ಎಸೆಯುವುದು! ‘ಅಂಕುರ್'(1974) ಚಿತ್ರದ ಈ ಕೊನೇ ದೃಶ್ಯ ತನ್ನೆಲ್ಲ ‘ವಾಚ್ಯತೆ’ಯೊಂದಿಗೂ ಆಳವಾದ ಪರಿಣಾಮವನ್ನು ಬೀರಿತ್ತು. ಜಮೀನುದಾರೀ ಅತಿರೇಕಗಳ ವಿರುದ್ಧದ ಬಂಡಾಯದ ಈ ಕಥನ ಅವರ ‘నిಶಾಂತ್'(1975), ‘ಕೊಂಡುರಾ'(1978)ಗಳಲ್ಲಿ ವ್ಯಾಪಕವಾಗಿ ಬೆಳೆಯಿತು. ಎಂಥ ಶೋಷಣೆಗಳೂ ಸಮುದಾಯದ ಆಂತರಿಕ ಸಂಬಂಧಗಳ ಮೇಲೆ ಮಾಡುವ ಪರಿಣಾಮವನ್ನು ಅತ್ಯಂತ ತೀವ್ರ ಸೂಕ್ಷ್ಮ ಎಳೆಗಳೊಂದಿಗೆ ಕೊಡುವ ಬೆನೆಗಲ್ ಅಭಿವ್ಯಕ್ತಿ ಎಲ್ಲೂ ಭಾಷಣವಾಗಲಿಲ್ಲ, ಬದಲಿಗೆ ಮಾನವೀಯ ಅನುಭವವಾಯಿತು. ಕೇವಲ ಬೇಲಿಯ ಮೇಲೆ ಕೂತು ರಾಜಕೀಯ ಸಮರ್ಪಕತೆಯ ಹೇಳಿಕೆಗಳನ್ನು ನೀಡದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕ್ರಿಯಾಶೀಲ ಒಳ ಮಾರ್ಗಗಳ ಶೋಧ ‘ಮಂಥನ್'(1976), ‘ಆರೋಹಣ್'(1982), ‘ಸುಸ್ಮಾನ್'(1987)ಗಳಲ್ಲಿ ಮುಂದುವರೆಯಿತು. ಗುಜರಾತಿನ ಹಾಲು ಉತ್ಪಾದಕ ರೈತರ, ಉತ್ತರ ಪ್ರದೇಶದ ಕೈಮಗ್ಗದ ನೇಕಾರರ ಸಮಸ್ಯೆಗಳನ್ನೆತ್ತಿಕೊಂಡು ಆ ಜನರ ಸಹಕಾರೀ ಚಟುವಟಿಕೆಯಾಗಿ ಈ ಚಿತ್ರಗಳನ್ನು ಉತ್ಪಾದಿಸಿದ್ದರು ಬೆನೆಗಲ್. ಮನುಷ್ಯ ಸಂಬಂಧಗಳ ಅನೂಹ್ಯಗಳನ್ನು ಅಸಂಗತಗಳನ್ನು ಮನೋಜ್ಞವಾಗಿ ‘ಭೂಮಿಕಾ'(1977), ‘ಜುನೂನ್'(1978), ‘ಕಲ್‌ಯುಗ್'(1980)ಗಳಲ್ಲಿ ಚಿತ್ರಿಸಿದ ರೀತಿ ಅವರ ಚಿತ್ರ ವ್ಯಾಕರಣದ ಬಹುಮುಖಿ ವಿಕಾಸಕ್ಕೆ ಕಾರಣವಾಯಿತು. ‘ಭೂಮಿಕಾ’ ಮರಾಠೀ ಖ್ಯಾತ ನಟಿ ಹಂಸಾ ವಾಡಕರ್‍ರ ಆತ್ಮಕಥೆಯನ್ನು ಆಧರಿಸಿದ್ದರೆ, ‘ಜುನೂನ್’ ರಸ್ಕಿನ್ ಬಾಂಡ್‌ರ ಸಿಪಾಯಿ ದಂಗೆಯ ಕಾಲದ ಬ್ರಿಟಿಷ್ ಯುವತಿ ಮತ್ತು ನಮ್ಮ ವೀರ ಸಿಪಾಯಿಯೊಬ್ಬನ ನಡುವಿನ ಪ್ರೇಮಾಕರ್ಷಣೆಯ ಕಾದಂಬರಿಯನ್ನು ಆಧರಿಸಿತ್ತು. ‘ವಿಭಿನ್ನ ನಿರೂಪಣೆಯನ್ನು ಬೇಡುವ ಕಥಾ ವಸ್ತುಗಳನ್ನು ಆಯ್ದುಕೊಂಡಿದ್ದರಿಂದಲೇ ನನ್ನ ಶೈಲಿಯನ್ನು ಹಿಗ್ಗಿಸುವ, ಬದಲಾಯಿಸುವ ಅನಿವಾರ್ಯತೆ ನನಗೆ ಬಂತು’ ಎಂದವರು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.
‘ಕಲ್‌ಯುಗ್’, ಮಹಾಭಾರತದ ಅಂಶಗಳ ಆಧುನಿಕ ಆವೃತ್ತಿಯಾಗಿತ್ತು. ‘ಅಂಕುರ್’, ‘ನಿಶಾಂತ್’ಗಳ ಬೆನೆಗಲ್‌ಗೂ ‘ಕಲ್‌ಯುಗ್’ದ ಬೆನೆಗಲ್‌ಗೂ ಚಿತ್ರ ವ್ಯಾಕರಣದ ವಿಷಯದಲ್ಲಿ ಸಂಪೂರ್ಣ ಮಾರ್ಪಾಟಿತ್ತು. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದ ಅವಮಾನಕ್ಕೆ ಅವರು ಕಂಡುಕೊಂಡ ಆಧುನಿಕ ಪರ್ಯಾಯ ರೂಪ ಮೈ ಜುಮ್ಮೆನಿಸುವಂತಿತ್ತು. ಶ್ರೀಮಂತ ಉದ್ಯಮಿ ಕುಟುಂಬವೊಂದರ ಕಿರಿಯ ಸೊಸೆಯೊಬ್ಬಳೇ ಮನೆಯಲ್ಲಿದ್ದಾಗ (ರೇಖಾ) ಇನ್ ಕಮ್ ಟ್ಯಾಕ್ಸ್ ರೇಡ್ ಆಗುತ್ತದೆ. ‘ಮನೆಯಲ್ಲಿ ಯಾರೂ ಇಲ್ಲ’ ಎಂದು ಆಕೆ ದರ್ಪ, ದೈನ್ಯ ಎಲ್ಲ ರೀತಿಯಲ್ಲಿ ವಿನಂತಿಸುತ್ತಿದ್ದಾಗಲೂ ಅಧಿಕಾರಿಗಳು ಬಂದು ಆಕೆಯ ಎದುರು ಮನೆಯ ಸಂದಿಗೊಂದಿ, ಕಪಾಟು, ತಿಜೋರಿಗಳನ್ನು ಜಾಲಾಡುವುದು ಬಟ್ಟೆಗಳನ್ನು ಕಿತ್ತು ಬಿಸಾಕುವುದು ಒಂದು ಸಾರ್ವಜನಿಕ ಮಾನಭಂಗದ ತೀವ್ರ ದೃಶ್ಯವಾಯಿತು. ‘ಕೊಂಡುರಾ’ ತನ್ನ ನಿರೂಪಣೆಯಲ್ಲಿ ಭ್ರಾಮಕ ವಾಸ್ತವ ಶೈಲಿಯನ್ನು ಬಳಸಿತು. 1975ರಲ್ಲೇ ಅವರು ನಿರ್ದೇಶಿಸಿದ್ದ ಕಪ್ಪು ಬಿಳುಪು ‘ಚರಣ್ ದಾಸ್ ಚೋರ್’- ವಿಶಿಷ್ಟ ಕಹಿವ್ಯಂಗ್ಯದ ಕಥೆ ಹೊಂದಿತ್ತು. ವಿನೋದ ಅದರ ಅವಿಭಾಜ್ಯ ಅಂಗವಾಗಿತ್ತು. ಆ ನಂತರ ಬೆನೆಗಲ್ ಇಂತಹ ಕಹಿವ್ಯಂಗ್ಯಕ್ಕೆ ಬ್ಲ್ಯಾಕ್ ಹ್ಯೂಮರ್‍ಗೆ ಮರಳಿದ್ದು ‘ಮಂಡಿ’ಯಲ್ಲಿ. ಪಾಕಿಸ್ತಾನಿ ಸಣ್ಣ ಕಥೆಯೊಂದನ್ನು ಆಧರಿಸಿದ್ದ ಈ ಕಥೆಯ ಸಾಮಾಜಿಕ ವ್ಯಂಗ್ಯ ತುಂಬ ಮೊನಚಾಗಿದೆ. ಊರಲ್ಲಿರುವ ವೇಶ್ಯಾವಾಟಿಕೆಯಿಂದ ಊರು ಹಾಳಾಗುತ್ತದೆ ಎಂದು ಅದನ್ನು ಊರಿಂದ ತುಂಬಾ ಆಚೆ ಅಟ್ಟಲಾಗುತ್ತದೆ. ಆದರೆ ಕ್ರಮೇಣ ಊರೇ ಆ ಕಡೆ ಸರಿದು ಅಲ್ಲೇ ನೆಲೆಯೂರಿಬಿಡುವ ವ್ಯಂಗ್ಯ ಇದು. ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್, ದೆಹಲಿಯ ಎನ್.ಎಸ್.ಡಿ.ಯಿಂದ ಮತ್ತು ಮುಂಬಯಿಯ ಆಧುನಿಕ ರಂಗಭೂಮಿಯಿಂದ ಹೊಸ ಹೊಸ ಕಲಾವಿದರನ್ನು ಹೆಕ್ಕಿ ಚಿತ್ರರಂಗಕ್ಕೆ ಹಸನುಗೊಳಿಸಿದ ರೂವಾರಿ ಬೆನೆಗಲ್. ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾಹ್, ಓಂಪುರಿ, ಅನಂತನಾಗ್, ಕುಲಭೂಷಣ್ ಖರಬಂದಾ, ವಿಕ್ಟರ್ ಬ್ಯಾನರ್ಜಿ, ಕಾರ್ನಾಡ್, ನೀನಾ ಗುಪ್ತಾ, ರಜತ ಕಪೂರ್, ಕಿರಣ ಖೇರ್, ಅಮರೀಶ್ ಪುರಿ, ಮೋಹನ್ ಅಗಾಶೆ- ರಂಥ ಪ್ರತಿಭಾವಂತರಿಗೆ ಕೇವಲ ಮೊದಲ ಅವಕಾಶ ಕೊಟ್ಟಿದ್ದೇ ಅಲ್ಲದೆ, ಮತ್ತೆ ಮತ್ತೆ ಅವರನ್ನು ವಿವಿಧ ಪಾತ್ರಗಳಲ್ಲಿ ಬೆಳೆಸಿ ಕಲಾವಿದರಾಗಿ ಹಿಗ್ಗಲು ಕಾರಣರಾದವರು ಶ್ಯಾಮ್ ಬೆನೆಗಲ್.
ಈತ ಇನ್ನೇನು ಹೊಸತು ನೀಡುತ್ತಾರಪ್ಪಾ ಎಂದು ನಾವು ಅಂದುಕೊಂಡಾಗ ನಮ್ಮನ್ನು ಚಕಿತಗೊಳಿಸುವಂಥ ಹೊಸ ಚಿತ್ರಗಳನ್ನು ಮಾಡಿ ತಮ್ಮನ್ನೇ ಮತ್ತೆ ಮತ್ತೆ ಒರೆಗೆ ಹಚ್ಚಿಕೊಂಡವರು. ‘ಸೂರಜ್ ಕಾ ಸಾಥವಾ ಘೋಡಾ'(1993) ಧರ್ಮವೀರ ಭಾರತಿಯವರ ಸಾಹಿತ್ಯ ಕೃತಿ ಆಧಾರಿತ ಚಿತ್ರ. ಒಂದೇ ಕಥೆಯನ್ನು ನಾಲ್ಕು ರೀತಿಯಲ್ಲಿ ನಾಲ್ಕು ಆಯಾಮಗಳಲ್ಲಿ ಶೋಧಿಸುವ ಈ ಚಿತ್ರದ ಚಿತ್ರಕಥೆ ತುಂಬ ಕುತೂಹಲಕಾರಿಯಾಗಿತ್ತು. ತೊಂಭತ್ತರ ದಶಕದಲ್ಲಿ ಬೆನೆಗಲ್ ಜನಪ್ರಿಯ ಹಿಂದಿ ಸಿನೆಮಾದ ವ್ಯಾಕರಣಗಳನ್ನು ಇಟ್ಟುಕೊಂಡು ಮಾಡಿದ ‘ಮಮ್ಮೊ'(1994), ‘ಸರ್ದಾರಿ ಬೇಗಮ್'(1996), ‘ಹರೀ ಭರೀ'(2000), ‘ಝಬೇದಾ'(2001)ಗಳು ಮುಸ್ಲಿಂ ಸಮುದಾಯದ ನೋವುಗಳನ್ನು ಅಸ್ಮಿತೆಯ ಸವಾಲುಗಳನ್ನು ಬಿಡಿಸಿಟ್ಟವು. ಗಝಲ್ ಸಾಮ್ರಾಜ್ಞೆ ಬೇಗಂ ಅಖ್ತರ್‍ರ ಜೀವನ ಚರಿತ್ರೆಯಿಂದ ಪ್ರೇರಿತವಾದ ಸರ್ದಾರೀ ಬೇಗಂ- ಬೆನೆಗಲ್ ‘ಸಂಗೀತಮಯ’ ಪ್ರಯೋಗವೂ ಹೌದು. ‘ದಿ ಮೇಕಿಂಗ್ ಆಫ್ ಮಹಾತ್ಮಾ'(1996), ‘ನೇತಾಜಿ ಸುಭಾಷ ಚಂದ್ರ ಭೋಸ್'(2005)ಗಳು ಇತಿಹಾಸದ ಪುನರ್ ಸೃಷ್ಟಿಯ ಚಿತ್ರಗಳು. ಅವರು ಟೆಲಿವಿಜನ್‌ಗೆಂದು ಮಾಡಿದ್ದ ‘ಭಾರತ್ ಏಕ್ ಖೋಜ್’ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ದ ಅದ್ಭುತ ದೃಢೀಕರಣ. ಅವರ ‘ತ್ರಿಕಾಲ್'(1985), ‘ಸುಸ್ಮಾನ್'(1987), ‘ಅಂತರ್ ನಾದ್'(1991) ಚಿತ್ರಗಳು ಹೆಸರೇ ಸೂಚಿಸುವಂತೆ ಅಂತರಂಗದ ವಿವಿಧ ಸ್ವರಗಳನ್ನು ಆಲಿಸುವ ಯತ್ನಗಳು, ತ್ರಿಕಾಲ್- ಪೋರ್ಚುಗೀಝ ಕಾಲದ ಗೋವಾದ ವಾತಾವರಣವನ್ನು ಹೂಬೇಹೂಬು ಕಲ್ಪಿಸಿಕೊಟ್ಟ ಚಿತ್ರ.
ಇದನ್ನು ಓದಿದ್ದೀರಾ?: ವ್ಯಕ್ತಿ ಚಿತ್ರ | ಭಾರತೀಯ ಚಿತ್ರರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಶ್ಯಾಮ್ ಬೆನಗಲ್
ಇಂಥದ್ದೆಲ್ಲ ವೈವಿಧ್ಯಪೂರ್ಣ ಚಿತ್ರಗಳಿಂದ ಭಾರತೀಯ ಚಿತ್ರರಂಗವನ್ನು ಸಂಪನ್ನಗೊಳಿಸಿದ ಈ 75ರ ವ್ಯಕ್ತಿ, ಮಲ್ಟಿಪ್ಲೆಕ್ಸ್, ಗ್ಲೋಬಲ್ ಮಾರ್ಕೆಟುಗಳ ಭರಭರಾಟೆಯ ಈ ‘ಪಾಪ್ ಕಾರ್ನ್- ಕೋಕ್- ಬರ್ಮುಡಾ’ –ರಂಜನಾ ಕಾಲದಲ್ಲಿ ‘ಸಾಕಷ್ಟು ಮಾಡಿದ್ದೇನೆ, ಈ ಸಂತೆಯಲ್ಲಿ ಓಡೋಕಾಗಲ್ಲ’ ಎಂದು ಕಾಲುಚಾಚಿ ಆರಾಮ ಕುರ್ಚಿಯಲ್ಲಿ ಕೂರಲಿಲ್ಲ. ಬದಲಿಗೆ ಹೃದಯಕ್ಕೇ ಲಗ್ಗೆಯಿಟ್ಟು ಕಚಗುಳಿಯಿಡುವ ಬೆಚ್ಚನೆ ಮಮತೆಯ ಭಾವಗಳ ‘ವೆಲ್ ಕಂ ಟು ಸಜ್ಜನ್ ಪುರ್'(2008) ಮತ್ತು ‘ವೆಲ್ ಡನ್ ಅಬ್ಬಾ'(2010) ಚಿತ್ರಗಳನ್ನು ಮಾಡಿ ಮಲ್ಟಿಪ್ಲೆಕ್ಸ್‌ನಲ್ಲೇ ಗೆದ್ದುಬಿಟ್ಟಿದ್ದಾರೆ! ಕಾದಂಬರಿಕಾರನಾಗಬೇಕೆಂಬ ಕನಸು ಹೊತ್ತ ಯುವಕನೊಬ್ಬ ಸಣ್ಣ ಹಳ್ಳಿಯಲ್ಲಿ ಅಶಿಕ್ಷಿತ ನಾಗರಿಕರಿಗೆ ಪೋಸ್ಟ್ ಆಫೀಸಿನಲ್ಲಿ ಪತ್ರ ಬರೆದುಕೊಡುವ ರೈಟರ್ ಆಗುವ ಸಜ್ಜನ್‌ಪುರ್ ಮತ್ತು ಒಂದು ಬಾವಿಯ ನೀರಿನ (ವೆಲ್) ಸುತ್ತ ಅಲೆ ಅಲೆಯಂತೆ ಹಬ್ಬುವ ‘ವೆಲ್ ಡನ್ ಅಬ್ಬಾ’ ದುಡ್ಡಿನ ಹಿಂದೆ ಬಿದ್ದಿರುವ ಇಂದಿನ ಸಮಗ್ರ ವ್ಯಾಪಾರೀಕರಣದ ದಿನಗಳಲ್ಲಿ ಅವರದೇ ಆದ ಹೃದಯಂಗಮ ಪ್ರತಿಕ್ರಿಯೆಯಾಗಿದೆ. 1974ರಲ್ಲಿ ಜಮೀನ್ದಾರ ಮನೆಯ ಕಿಟಕಿಗೆ ಕಲ್ಲೆಸೆದಿದ್ದ ಪುಟಾಣಿಯೇ ಇಂದು ಸಜ್ಜನಪುರದಲ್ಲಿ ಬಡವರ ಕಷ್ಟ ಸುಖದ ಪತ್ರಗಳನ್ನು ಬರೆದುಕೊಡುವ ಯುವ ನೆಂಟನಾಗಿದ್ದಾನೆ.

ಬೆನೆಗಲ್ ಅಂದ ತಕ್ಷಣ ಅಂಕುರ್, ಮಂಥನ್ ಅಂತ ಒಂದೆರಡು ಚಿತ್ರ ನೆನೆದು ಸುಮ್ಮನಾಗುವ ಇಂದಿನ ಯುವ ಪ್ರಯೋಗಶೀಲ ನಿರ್ದೇಶಕರು ಬೆನೆಗಲ್‌ರ 24 ಚಿತ್ರಗಳ ವಿಕಾಸ ಕ್ರಮವನ್ನೂ, ಅಭಿವ್ಯಕ್ತಿಯ ವೈವಿಧ್ಯವನ್ನೂ ಮತ್ತು ಒಟ್ಟಾರೆ ಅವರು ಪೋಷಿಸಿ ಬೆಳೆಸಿಕೊಂಡು ಬಂದ ಸಿನೆ ಸಂವೇದನೆಯ ನೈತಿಕತೆಯನ್ನು ಕಲಾತ್ಮಕ ಎಚ್ಚರವನ್ನು, ಮೂಲಭೂತ ಮಾನವೀಯ ಶೋಧದ ನಿಲುಕುಗಳನ್ನು ಎಚ್ಚರದಿಂದ ನೋಡುವ ಅಗತ್ಯವಿದೆ. ಅಂದರೆ ಮಾತ್ರ ಅವರಾಡಿದ ‘ಆತ್ಮ ವಿಮರ್ಶೆ’ಯ ಎಚ್ಚರದ ಮಾತುಗಳು ನಮ್ಮನ್ನು ನಿಜಕ್ಕೂ ಆತ್ಮವಿಮರ್ಶೆಗೆ ತೊಡಗಿಸಿಯಾವು. ಒರೆಗೆ ಹಚ್ಚಿಯಾವು! ಶ್ಯಾಮ್ ಬೆನೆಗಲ್‌ಗೆ ಕೃತಜ್ಞತೆ, ಸಲಾಮ್!
(ಜಯಂತ ಕಾಯ್ಕಿಣಿಯವರ ಸಿನಿಮಾ ಕುರಿತ “ಟೂರಿಂಗ್ ಟಾಕೀಸ್” ಪುಸ್ತಕದಿಂದ ಆಯ್ದ ಲೇಖನ. ಪ್ರಕಾಶನ: ಮನೋಹರ ಗ್ರಂಥಮಾಲೆ, ಧಾರವಾಡ. 2013ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಹೊಸ ಆವೃತ್ತಿಗಳೊಂದಿಗೆ 2017ರಲ್ಲಿ ಮರು ಮುದ್ರಣಗೊಂಡಿದ್ದು, 2021ರಲ್ಲಿಯೂ ಹೊಸ ಆವೃತ್ತಿಗಳೊಂದಿಗೆ ಪ್ರಕಟಗೊಂಡಿದೆ.)